ನರಗುಂದ: ರಾಜ್ಯದಲ್ಲಿ ತೀವ್ರ ಬರಗಾಲದಿಂದ ಅನ್ನದಾತರು ಸಾಲಕ್ಕೆ ಭಯಭೀತರಾಗಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಕೃಷಿ ಸಾಲ ಮನ್ನಾ ಮಾಡಬೇಕೆಂದು ರೈತ ಮುಖಂಡ ಸಿ.ಎಸ್. ಪಾಟೀಲ ಆಗ್ರಹಿಸಿದರು. ಅವರು 3139ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ದೇಶದಲ್ಲಿ ಆಡಳಿತ ಮಾಡುತ್ತಿರುವ ಕೇಂದ್ರ ಸರ್ಕಾರದ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿವರು ಬಂಡವಾಳ ಶಾಹಿಗಳ ಸಾಲವನ್ನು ಲಕ್ಷಾಂತರ ಕೋಟಿಯಲ್ಲಿ ಮನ್ನಾ ಮಾಡುವರು. ಅದೇ ರೀತಿ ರಾಜ್ಯ ಸರ್ಕಾರ ಉಚಿತ ಪಂಚ ಗ್ಯಾರಂಟಿ ಯೋಜನೆಗಳಗೆ ಪ್ರತಿ ವರ್ಷ ನೂರಾರು ಕೋಟಿ ಹಣವನ್ನು ಖರ್ಚು ಮಾಡುತ್ತದೆ. ಆದರೆ ಈ ಎರಡು ಉಭಯ ಸರ್ಕಾರಗಳು ಈ ದೇಶಕ್ಕೆ ಅನ್ನ ನೀಡುವ ರೈತ ಸಮುದಾಯದ ಕೃಷಿ ಸಾಲ ಮನ್ನಾ ಮಾಡದ್ದು ರೈತ ಸಮುದಾಯಕ್ಕೆ ನೋವು ತಂದಿದೆ ಎಂದರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಇನ್ನು ಕಾಲ ಮಿಂಚಿಲ್ಲ. ಆದಷ್ಟು ಬೇಗ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ರೈತರು ಮಾಡಿರುವ ಕೃಷಿ ಸಾಲ ಸಂರ್ಪೂಣ ಮನ್ನಾ ಮಾಡಿ ಲೋಕಸಭೆ ಚುನಾವಣೆಗೆ ಬರಬೇಕು, ಅದೇ ರೀತಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ರೈತರ ಕಷ್ಟದ ಬಗ್ಗೆ ತಿಳಿದವರಿದ್ದಾರೆ, ಹಾಗಾಗಿ ರಾಜ್ಯ ಸರ್ಕಾರ ಆದಷ್ಟು ಬೇಗ ಸಹಕಾರಿ ಸಂಘಗಳಲ್ಲಿ ರೈತರು ಕೃಷಿಗಾಗಿ ಪಡೆದ ಎಲ್ಲಾ ರೀತಿಯ ಸಾಲ ಮನ್ನಾ ಮಾಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಮುಂದಾಗಬೇಕೆಂದು ಉಭಯ ಸರ್ಕಾರಗಳಗೆ ಮನವಿ ಮಾಡಿಕೊಂಡರು. ವೀರಭಸಪ್ಪ ಹೂಗಾರ, ಎಸ್.ಬಿ.ಜೋಗಣ್ಣವರ, ಪರಶುರಾಮ ಜಂಬಗಿ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಶಿವಪ್ಪ ಸಾತಣ್ಣವರ, ಅರ್ಜುನ ಮಾನೆ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ಮಲ್ಲೇಶ ಅಬ್ಬಗೇರಿ, ಯಲ್ಲಪ್ಪ ಚಲವಣ್ಣವರ, ವಾಸು ಚವಾಣ, ಯಲ್ಲಪ್ಪ ವಿಜಯಕುಮಾರ ಹೂಗಾರ, ಸೇರಿದಂತೆ ಮುಂತಾದವರು ಇದ್ದರು.