ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸುವಲ್ಲಿ ಮಹತ್ವದ್ದಾಗಿರುವ ಮೆಟ್ರೋ : 3ನೇ ಹಂತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ

KannadaprabhaNewsNetwork | Updated : Aug 17 2024, 05:43 AM IST

ಸಾರಾಂಶ

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸುವಲ್ಲಿ ಮಹತ್ವದ್ದಾಗಿರುವ ಬಹುನಿರೀಕ್ಷಿತ ಮೆಟ್ರೋ ರೈಲು ಮೂರನೇ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿದೆ. ಇದು ಸುಮಾರು 44.65 ಕಿ.ಮೀ. ಉದ್ದದ ಯೋಜನೆಯಾಗಿದ್ದು, ಒಟ್ಟು ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ.

 ನವದೆಹಲಿ :  ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸುವಲ್ಲಿ ಮಹತ್ವದ್ದಾಗಿರುವ ಬಹುನಿರೀಕ್ಷಿತ ಮೆಟ್ರೋ ರೈಲು ಮೂರನೇ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿದೆ. ಇದು ಸುಮಾರು 44.65 ಕಿ.ಮೀ. ಉದ್ದದ ಯೋಜನೆಯಾಗಿದ್ದು, ಒಟ್ಟು ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ.

ಸುಮಾರು ₹15,611 ಕೋಟಿ ವೆಚ್ಚದ ಈ ಯೋಜನೆ 2029ರ ವೇಳೆಗೆ ಪೂರ್ಣಗೊಂಡು, ಕಾರ್ಯಾರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆರೆಂಜ್‌ ಲೇನ್‌ ಎಂದೇ ಕರೆಯಲ್ಪಡುವ ಈ ಮೆಟ್ರೋ ಮೂರನೇ ಹಂತವು ಬೆಂಗಳೂರಿನ ದಕ್ಷಿಣ ಮತ್ತು ಪಶ್ಚಿಮ ಭಾಗವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ರೈಲ್ವೆ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ. ಕಳೆದ ಮಾರ್ಚ್‌ನಲ್ಲಿ ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಜಪಾನ್‌ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ ಈ ಯೋಜನೆಗೆ ಆರ್ಥಿಕ ಸಹಕಾರ ನೀಡುವ ನಿರೀಕ್ಷೆಯಿದೆ.

ಮೆಟ್ರೋ 3ನೇ ಹಂತ ಪೂರ್ಣಗೊಂಡರೆ ಬೆಂಗಳೂರು ನಗರವು ಒಟ್ಟು 220.20 ಕಿ.ಮೀ. ಮೆಟ್ರೋ ರೈಲು ಜಾಲವನ್ನು ಒಳಗೊಂಡಂತಾಗಲಿದೆ. ಪ್ರಮುಖವಾಗಿ ಪೀಣ್ಯ ಕೈಗಾರಿಕಾ ಪ್ರದೇಶ, ಬನ್ನೇರುಘಟ್ಟ ರಸ್ತೆ, ಹೊರ ವರ್ತುಲ ರಸ್ತೆಯಲ್ಲಿರುವ ಐಟಿ ಕ್ಲಸ್ಟರ್, ತುಮಕೂರು ರಸ್ತೆಯಲ್ಲಿ ಜವಳಿ ಮತ್ತು ಎಂಜಿನಿಯರಿಂಗ್ ವಸ್ತುಗಳ ಉತ್ಪಾದನಾ ಘಟಕಗಳು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಸಂಪರ್ಕ ಜಾಲ ಸಿಕ್ಕಂತಾಗಲಿದೆ.

ಇದರ ಜತೆಗೆ ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಪಿಇಎಸ್ ವಿಶ್ವವಿದ್ಯಾಲಯ, ಅಂಬೇಡ್ಕರ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು ಮತ್ತು ಕೆಎಲ್‌ಇ ಕಾಲೇಜು, ಐಟಿಐ ಇತ್ಯಾದಿ ಮೆಟ್ರೋ ಹಂತ ಮೂರು ನಗರದ ದಕ್ಷಿಣ ಭಾಗ, ಹೊರ ವರ್ತುಲ ರಸ್ತೆ ಪಶ್ಚಿಮ, ಮಾಗಡಿ ರಸ್ತೆಗಳ ನಡುವೆ ಯೋಜನೆಯು ಸಂಪರ್ಕ ಬೆಸೆಯುತ್ತದೆ.

ಯೋಜನೆ ವಿವರಕಾರಿಡಾರ್-1:ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ (ಪಶ್ಚಿಮ ಹೊರ ವರ್ತುಲ ರಸ್ತೆ ಒಳಗೊಂಡಿರುತ್ತದೆ) ಒಟ್ಟು 32.15 ಕಿ.ಮೀ. ಉದ್ದದ ಈ ಯೋಜನೆಯಲ್ಲಿ 21 ನಿಲ್ದಾಣಗಳು ಇರಲಿವೆ.

ಕಾರಿಡಾರ್-2

ಹೊಸಹಳ್ಳಿಯಿಂದ ಕಡಬಗೆರೆವರೆಗೆ (ಮಾಗಡಿ ರಸ್ತೆ ಒಳಗೊಂಡಿರುತ್ತದೆ) ಒಟ್ಟು 12.50 ಕಿ.ಮೀ. ಉದ್ದದ ಈ ಯೋಜನೆಯಲ್ಲಿ 9 ನಿಲ್ದಾಣಗಳು ಇರಲಿವೆ.

ವರಮಹಾಲಕ್ಷ್ಮಿ ಹಬ್ಬದ ಉಡುಗೊರೆ

ಬೆಂಗಳೂರಲ್ಲಿ ₹15,611 ಕೋಟಿ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ 3ನೇ ಹಂತದ ಮೆಟ್ರೋ ರೈಲು ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸುವೆ. ಇದು ಕೇಂದ್ರ ಸರ್ಕಾರದಿಂದ ಬೆಂಗಳೂರಿಗರಿಗೆ ವರಮಹಾಲಕ್ಷ್ಮಿ ಹಬ್ಬದ ಉಡುಗೊರೆ ಎಂದು ಭಾವಿಸುತ್ತೇನೆ.

-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ.

Share this article