ಆಕಾಶವಾಣಿ ಉಳಿವಿಗೆ ಕೇಂದ್ರ ಸರ್ಕಾರ ಬದ್ಧ: ಸಚಿವ ಜೋಶಿ

KannadaprabhaNewsNetwork | Published : Jan 14, 2025 1:00 AM

ಸಾರಾಂಶ

ಆಕಾಶವಾಣಿ ಸರ್ಕಾರಿ ಕಾರ್ಯಕ್ರಮವಾಗಿದ್ದು, ಜನರಿಗೆ ತಲುಪಿಸುವ ಜೊತೆಗೆ ಗ್ರಾಮೀಣ ಅಭಿವೃದ್ಧಿಯಲ್ಲಿ ವಿಶೇಷ ಪಾತ್ರ ನಿರ್ವಹಿಸುತ್ತಿದೆ. ಕಳೆದ 75 ವರ್ಷಗಳಿಂದ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಈ ಕೇಂದ್ರದ ಉಳುವಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ.

ಧಾರವಾಡ:

ಆಕಾಶವಾಣಿ ಹಾಗೂ ಅಂಚೆ ಕಚೇರಿ ಭಾರತದ ಐತಿಹಾಸಿಕ ಪರಂಪರೆಯ ಹೆಗ್ಗುರುತು. ಈ ಎರಡನ್ನೂ ಸಹ ಉಳಿಸಲು ಕೇಂದ್ರ ಸರ್ಕಾರ ಬದ್ಧ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿಯ ಸೃಜನಾದಲ್ಲಿ ಸೋಮವಾರ ಹಮ್ಮಿಕೊಂಡ ಧಾರವಾಡ ಆಕಾಶವಾಣಿ ಕೇಂದ್ರದ ಅಮೃತ ಮಹೋತ್ಸವ ಉದ್ಘಾಟಿಸಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಆಕಾಶವಾಣಿಗೆ ವಿಶೇಷ ಅರ್ಥವೂ ಇದೆ ಎಂದರು.

ಆಕಾಶವಾಣಿ ಸರ್ಕಾರಿ ಕಾರ್ಯಕ್ರಮವಾಗಿದ್ದು, ಜನರಿಗೆ ತಲುಪಿಸುವ ಜೊತೆಗೆ ಗ್ರಾಮೀಣ ಅಭಿವೃದ್ಧಿಯಲ್ಲಿ ವಿಶೇಷ ಪಾತ್ರ ನಿರ್ವಹಿಸುತ್ತಿದೆ. ಕಳೆದ 75 ವರ್ಷಗಳಿಂದ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಈ ಕೇಂದ್ರದ ಉಳುವಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಸಾಹಿತ್ಯ, ಸಂಗೀತಕ್ಕೆ ಆಕಾಶವಾಣಿ ಕೊಡುಗೆ ದೊಡ್ಡದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ''''''''ಮನ್ ಕಿ ಬಾತ್'''''''' ಕಾರ್ಯಕ್ರಮದಿಂದ ಜನತೆ ತಲುಪುವ ಮೂಲಕ ಆಕಾಶವಾಣಿಗೆ ಮರುಜೀವ ಕೊಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಪಂ. ಭೀಮಸೇನ ಜೋಶಿ, ಪಂ. ಮಲ್ಲಿಕಾರ್ಜುನ ಮನಸೂರ, ಪಂ. ಬಸವರಾಜ ಗಾಜಗುರು, ಗಂಗೂಬಾಯಿ ಹಾನಗಲ್, ಸವಾಯಿ ಗಂಧರ್ವರು ಹೀಗೆ ಅನೇಕ ಸಂಗೀತ ದಿಗ್ಗಜರಿಗೆ ವೇದಿಕೆ ಕಲ್ಪಿಸಿದ ಶ್ರೇಯಸ್ಸು ಆಕಾಶವಾಣಿಗೆ ಇದೆ ಎಂದ ಅವರು, ಪ್ರದೇಶ ಸಮಾಚಾರ, ಕೃಷಿರಂಗ, ಗೀಳಿಗಿಂಡು, ಭಾವ ಸಂಗಮ, ಯುವವಾಣಿ, ರೇಡಿಯೋ ಡಾಕ್ಟರ್, ರೇಡಿಯೋ ನಾಟಕ, ವನಿತಾ ವಿಹಾರ, ಮಕ್ಕಳ ನಾಟಕ ಹೀಗೆ ಆಕಾಶವಾಣಿ ಜನಪ್ರೀಯ ಕಾರ್ಯಕ್ರಮ ನೀಡುವ ಕುರಿತು ಅಭಿಮಾನ ವ್ಯಕ್ತಪಡಿಸಿದರು.

ಬೆಳಗಾವಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ದೇಶಕ್ಕೆ ಸಂಗೀತದ ಪಂಚರತ್ನಗಳು ಪರಿಚಯಿಸಿದ ಶ್ರೇಯಸ್ಸು ಆಕಾಶವಾಣಿಗೆ ಸಲ್ಲುತ್ತಿದೆ. ನಾನೊಬ್ಬ ವ್ಯಾಪಾರಿ. ಪೇಟೆಧಾರಣೆ ಪ್ರಮುಖ ಕಾರ್ಯಕ್ರಮ. ಸಿನಿಮಾ ಹಾಡುಗಳಿಂದ ಸಿಲೋನ್ ರೇಡಿಯೋಗೆ ಬಹಳಷ್ಟು ಜನಪ್ರೀಯತೆ ಬಂತು. ನಿಲಯ ಸಾಮರ್ಥ್ಯ ಹೆಚ್ಚಿಸುವ ಮೂಲಕ ಆಕಾಶವಾಣಿ ಗಡಿನಾಡಿಗೂ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಸಚಿವ ಪ್ರಹ್ಲಾದ್ ಜೋಶಿಗೆ ಮನವಿ ಮಾಡಿದರು.

ಪ್ರಾಸ್ತಾವಿಕ ಮಾತನಾಡಿದ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಶರಣಬಸವ ಚೋಳಿನ್, ಸರ್ಕಾರದ ಯೋಜನೆಗಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳು ಜನರಿಗೆ ತಲುಪಿಸುವ, ಜನಜಾಗೃತಿ ಮೂಡಿಸುವ ಆಕಾಶವಾಣಿಗೆ ಅಗತ್ಯ ಸಿಬ್ಬಂದಿ ಒದಗಿಸುವ ಮೂಲಕ ಈ ಕೇಂದ್ರವನ್ನು ಉಳಿಸಬೇಕು ಎಂದು ಸಚಿವರಿಗೆ ಕೋರಿದರು.

ಈ ವೇಳೆ ''''''''ಅಮರವಾನಿ ಅಮೃತ ಘಳಿಗೆ'''''''' ಸ್ಮರಣ ಸಂಚಿಕೆ ಬಿಡುಗಡೆಗೊಂಡಿತು. ಕೃವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ, ಆಕಾಶವಾಣಿ ನಿಲಯ ಉಪ ಮಹಾನಿರ್ದೇಶಕ ಅರುಣ ಪ್ರಭಾಕರ, ಸಿ.ಯು. ಬೆಳ್ಳಕ್ಕಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಗಾಯಕ ಸದಾಶಿವ ಐಹೊಳೆ ಪ್ರಾರ್ಥಿಸಿದರು. ಮಂಜುಳಾ ಪುರಾಣಿಕ ಸ್ವಾಗತಿಸಿದರು. ಮಾಯಾ ರಾಮನ್ ನಿರೂಪಿಸಿದರು. ನಂತರ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Share this article