ಕನ್ನಡಪ್ರಭ ವಾರ್ತೆ ದಾವಣಗೆರೆ
ಲೋಕಸಭೆ ಚುನಾವಣೆಯಲ್ಲಿ ಮತ್ತೆ ಭಾರೀ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗುವಲ್ಲಿ ದೇಶದ ನಾರಿಶಕ್ತಿ ಪ್ರಮುಖ ಪಾತ್ರ ವಹಿಸಬೇಕು ಎಂದು ಬಿಜೆಪಿ ಪಾಂಡಿಚೇರಿ ಪ್ರಧಾನ ಕಾರ್ಯದರ್ಶಿ ಹೇಮಾಮಾಲಿನಿ ಕರೆ ನೀಡಿದ್ದಾರೆ.ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಮಹಿಳಾ ಮೋರ್ಚಾದಿಂದ ಅಖಿಲ ಭಾರತ ಸಂಘಟನಾತ್ಮಕ ಪ್ರವಾಸದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಫಲಾನುಭವಿ ಮಹಿಳೆಯರ ಜೊತೆ ಸಂವಾದದಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದೆ. ಪುರುಷರಿಗಿಂತಲೂ ಮಹಿಳೆಯರಿಗಾಗಿ ಹೆಚ್ಚು ಹೆಚ್ಚು ಯೋಜನೆ, ಕಾರ್ಯಕ್ರಮಗಳ ರೂಪಿಸಿ, ಜಾರಿಗೊಳಿಸಿದೆ. ಉಜ್ವಲಾ, ಹರ್ ಘರ್ ಗಂಗಾ, ಜಲ ಜೀವ ನ್ ಮಿಷನ್, ಬೇಟಿ ಬಚಾವೋ-ಬೇಟಿ ಪಡಾವೋ ಹೀಗೆ ಹತ್ತು ಹಲವು ಯೋಜನೆಗಳು ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಹೇಳಿದರು.
ಭಾರತವನ್ನು ಜಗತ್ತಿನ ಮುಂಚೂಣಿ ರಾಷ್ಟ್ರವನ್ನಾಗಿಸಲು, ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ, ಯುವಜನರ ಏಳಿಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಂಕಣಬದ್ಧರಾಗಿ ಶ್ರಮಿಸುತ್ತಿದೆ. ಸಮಾಜದಲ್ಲಿ ಪುರುಷರಿಗಿಂತಲೂ ಮಹಿಳೆಯರ ಮಾತು ಹೆಚ್ಚು ಆಪ್ತ ಹಾಗೂ ನಂಬಿಕೆಗೆ ಅರ್ಹವೆಂದು ಪರಿಗಣಿಸಲಾಗುತ್ತದೆ. ಮಹಿಳೆಯರಿಗೆ ಮತ್ತೊಬ್ಬರ ಮನೆಯ ಅಡುಗೆ ಮನೆಗೂ ಹೋಗುವಷ್ಟು ಆತ್ಮೀಯತೆ, ಒಡನಾಟ, ಪರಿಚಯವಿರುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ಮೋದಿ ಸರ್ಕಾರದ ಯೋಜನೆ, ಸೌಲಭ್ಯಗಳ ಬಗ್ಗೆ ತಿಳಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.ನಮ್ಮೆಲ್ಲಾ ಮೋರ್ಚಾಗಳು ವಿಶೇಷವಾಗಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಮುಖಂಡರು, ಜನ ಪ್ರತಿನಿಧಿಗಳು, ಕಾರ್ಯಕರ್ತೆಯರು ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಂಘಟಿತರಾಗಿ ಕೆಲಸ ಮಾಡಬೇಕು. ರಾಜ್ಯದ ವಿವಿಧೆಡೆ ಇರುವ ನಿಮ್ಮ ಬಂಧು, ಬಳಗ, ಸ್ನೇಹಿತರು, ಹಿತೈಷಿಗಳಿಗೆ ಸಂಪರ್ಕಿಸಿ, ಬಿಜೆಪಿ ಬೆಂಬಲಿಸಿ, ಅಧಿಕಾರಕ್ಕೆ ತರುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲು ಶ್ರಮಿಸಿ ಎಂದು ಹೇಮಾಮಾಲಿನಿ ಕರೆ ನೀಡಿದರು.
ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಾ ವಾಲಿ, ಭಾಗ್ಯ ಪಿಸಾಳೆ, ಪ್ರವಾಸ ಕಾರ್ಯಕ್ರಮದ ಜಿಲ್ಲಾ ಸಂಚಾಲಕಿ ಎಚ್.ಸಿ.ಜಯಮ್ಮ, ಸರಸ್ವತಿ, ಕುಮಾರಿ, ಗೌರಮ್ಮ, ನೀತಾ ಬಳ್ಳಾರಿ, ಸರ್ವ ಮಂಗಳಮ್ಮ, ಭಾಗ್ಯಮ್ಮ, ಮಂಜುಳಾ, ಲಕ್ಷ್ಮಿ, ಭಾಗ್ಯ ಶ್ರೀನಿವಾಸ, ಉಮಾ ಕೊಟ್ರೇಗೌಡ, ಕವಿತಾ ಮಾಯಕೊಂಡ, ಗಂಗಮ್ಮ ಜಗಳೂರು ಇತರರರಿದ್ದರು.