ಪಾಲಿ, ಪ್ರಾಕೃತಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಕೇಂದ್ರ ಸಕಾರಾತ್ಮಕ ಸ್ಪಂದನೆ: ಪ್ರೊ.ಉದಯ ನಾರಾಯಣ ಸಿಂಗ್

KannadaprabhaNewsNetwork | Published : Jun 11, 2024 1:31 AM

ಸಾರಾಂಶ

ಒಂದು ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಕೊಡಬೇಕಾದರೇ ಕೇಂದ್ರ ಸರ್ಕಾರವು ಅನೇಕ ವಿಷಯಗಳಿಗೆ ಬದ್ಧತೆ ತೋರಿಸಬೇಕಾಗುತ್ತದೆ. ಆ ಭಾಷೆಯ ಬೆಳವಣಿಗೆಗೆ, ಸಂಶೋಧನೆಗೆ ಅನುದಾನ ಮೀಸಲಿಡಬೇಕಾಗುತ್ತದೆ. ಕಟ್ಟಡ- ಕಚೇರಿ, ಸಿಬ್ಬಂದಿ, ಸಂಪನ್ಮೂಲ ವ್ಯಕ್ತಿ ಎಲ್ಲವನ್ನೂ ವ್ಯವಸ್ಥೆ ಮಾಡಬೇಕಾಗುತ್ತದೆ. ಆದ್ದರಿಂದ ಸ್ಥಾನಮಾನ ನೀಡುವ ವಿಚಾರ ಸರ್ಕಾರದ್ದೇ ಆಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕ್ರಿಸ್ತ ಪೂರ್ವದಲ್ಲೇ ಜನಜನಿತವಾಗಿದ್ದ ಪಾಲಿ ಹಾಗೂ ಪ್ರಾಕೃತ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕ ಧೋರಣೆ ಹೊಂದಿದೆ ಎಂದು ಗುರು ಗ್ರಾಮದ ಅಮಿಟಿ ವಿವಿಯ ಕಲಾ ನಿಕಾಯದ ಡೀನ್ ಪ್ರೊ.ಉದಯ ನಾರಾಯಣ ಸಿಂಗ್ ತಿಳಿಸಿದರು.

ನಗರದ ಸಿಐಐಎಲ್ ಆಯೋಜಿಸಿರುವ ಮೂರು ದಿನಗಳ ಭಾರತದ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಕೊಡಬೇಕಾದರೇ ಕೇಂದ್ರ ಸರ್ಕಾರವು ಅನೇಕ ವಿಷಯಗಳಿಗೆ ಬದ್ಧತೆ ತೋರಿಸಬೇಕಾಗುತ್ತದೆ. ಆ ಭಾಷೆಯ ಬೆಳವಣಿಗೆಗೆ, ಸಂಶೋಧನೆಗೆ ಅನುದಾನ ಮೀಸಲಿಡಬೇಕಾಗುತ್ತದೆ. ಕಟ್ಟಡ- ಕಚೇರಿ, ಸಿಬ್ಬಂದಿ, ಸಂಪನ್ಮೂಲ ವ್ಯಕ್ತಿ ಎಲ್ಲವನ್ನೂ ವ್ಯವಸ್ಥೆ ಮಾಡಬೇಕಾಗುತ್ತದೆ. ಆದ್ದರಿಂದ ಸ್ಥಾನಮಾನ ನೀಡುವ ವಿಚಾರ ಸರ್ಕಾರದ್ದೇ ಆಗಿದೆ ಎಂದರು.

ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಭಾರತ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿವೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ಯಾವ ಮಾನದಂಡ ಪಾಲಿಸಬೇಕೋ, ಅವುಗಳನ್ನು ದಾಖಲೆ ಮೂಲಕ ಒದಗಿಸಿವೆ. ತಮ್ಮ ಭಾಷೆಯ ಇತಿಹಾಸ, ಸಾಹಿತ್ಯದ ಬೆಳವಣಿಗೆ ಇನ್ನೂ ಮುಂತಾದ ಅಂಶಗಳ ಕುರಿತು ವಿಸ್ತೃತ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ನೀಡಿದ್ದಾರೆ ಎಂದರು.

ಈ ಎರಡೂ ರಾಜ್ಯಗಳ ದಾಖಲೆಯನ್ನು ಸಮಿತಿ ವೀಕ್ಷಿಸಿದೆ. ಇವೆರಡು ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಕೊಡುವುದಾರೇ ಮೈಥಿಲಿ ಭಾಷೆಗೆ ಯಾಕೆ ಸಿಗಬಾರದು ಎಂಬ ಪ್ರಶ್ನೆ ಬರುತ್ತದೆ. ಇಂತಹ ವಿಚಾರಗಳು ಸಮಿತಿಯ ಚೌಕಟ್ಟಿನಿಂದ ಆಚೆಯಾದ್ದಾಗಿವೆ. ಏಕೆಂದರೆ ಕ್ರಿಸ್ತ ಪೂರ್ವದಲ್ಲೇ ಜನಜನಿತವಾಗಿದ್ದ ಪಾಲಿ ಹಾಗೂ ಪ್ರಾಕೃತ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವ ವಿಷಯದಲ್ಲಿ ಸರ್ಕಾರ ಸಕಾರಾತ್ಮಕ ಧೋರಣೆ ಹೊಂದಿದೆ ಎಂದರು.

ಭಾಷೆಯ ಬಗ್ಗೆ ತಿಳಿದುಕೊಳ್ಳಲು ನಮ್ಮ ದೇಶದಲ್ಲಿ ಪುರಾತನ ಕಾಲದ ಹಸ್ತಪ್ರತಿ, ಶಾಸನಗಳು, ಗೋಡೆ ಬರಹ ಯೆಥೇಚ್ಚವಾಗಿ ಲಭ್ಯವಿವೆ. ಆದರೆ ಅವುಗಳನ್ನು ಸಮರ್ಪಕವಾಗಿ ಹುಡುಕಿ, ಕೂಲಂಕಷವಾಗಿ ಸಂಶೋಧಿಸಿ, ಅವುಗಳಲ್ಲಿ ಇರುವ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ಆಗುತ್ತಿಲ್ಲ ಎಂದು ಅವರು ತಿಳಿಸಿದರು.

ಅರುಣಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ಪ್ರಾಚೀನ ಇತಿಹಾಸ ಕಾಲದ ನೂರಾರು ಹಸ್ತಪ್ರತಿ ಮನೆ- ಮನೆಯಲ್ಲಿ ಸಂರಕ್ಷಿಸಿ ಇಟ್ಟಿದ್ದಾರೆ. ಅವರಿಗೆ ಅದನ್ನು ಮುದ್ರಿಸಿ, ಪ್ರಕಟಿಸಬೇಕು ಎನ್ನುವ ಮಹತ್ವ ತಿಳಿದಿಲ್ಲ. ಆದರೆ ಅವುಗಳಲ್ಲಿ ಹಲವು ಕಾಯಿಲೆಗೆ ಔಷಧಗಳ ಬಗ್ಗೆ ಮಾಹಿತಿ ಇದೆ. ಇಂತಹವನ್ನು ಹುಡುಕುವ ಕೆಲಸವಾಗಬೇಕು. ಆ ಮೂಲಕ ಭಾಷಾ ಬೆಳವಣಿಗೆ, ಭಾಷಾ ಸಂಶೋಧನೆ ಆಗಬೇಕು ಎಂದರು.

ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಶಾಸ್ತ್ರೀಯ ಭಾಷಾ ಸ್ಥಾನ ಪಡೆಯುವ ವೇಳೆ ಇದ್ದ ಉತ್ಸಾಹ ಹಾಗೂ ಕಾಳಜಿ ಈಗ ಇಲ್ಲ. ಸ್ಥಾನಮಾನ ಪಡೆದ ಬಳಿಕ ಎಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ಚಟುವಟಿಕೆ ನಡೆಯುತ್ತಿದೆ. ಎಷ್ಟು ವಿದ್ಯಾರ್ಥಿಗಳು ಇದ್ದಾರೆ. ಎಷ್ಟು ಸಂಶೋಧಕರು ಇದ್ದಾರೆ. ಭಾಷಾ ವಿಷಯವಾಗಿ ಸಂಶೋಧನೆಗಳು ಹಾಗೂ ಬರಹಗಳು ಎಷ್ಟು ಹೊರಬಂದಿವೆ ಎನ್ನುವುದನ್ನು ಗಮನಿಸಿದರೇ ಫಲಿತಾಂಶ ಸಮಾಧಾನಕರವಾಗಿಲ್ಲ ಎಂದರು.

ಭಾಷಾ ಬೆಳವಣಿಗೆಯಲ್ಲಿ ಈಗಲೂ ಬದ್ಧತೆ ತೋರುವ ವಿದ್ಯಾರ್ಥಿಗಳು, ವಿದ್ವಾಂಸರು ಸಾಕಷ್ಟು ಮಂದಿ ಇದ್ದಾರೆ. ಆದರೆ ಅಂತಹವರನ್ನು ಹುಡುಕಿ, ಒಬ್ಬರಿಗೊಬ್ಬರು ಸಂಪರ್ಕ ಸಾಧಿಸುವುದಕ್ಕೆ ಸೇತುಬಂಧವಾಗಬೇಕಿದೆ. ಭಾಷೆಗಳ ಸ್ವರೂಪ ಕಾಲ- ಕಾಲಕ್ಕೆ ಬದಲಾಗುತ್ತದೆ. ಸಾವಿರ ವರ್ಷದ ಹಿಂದೆ ಇದ್ದ ಕನ್ನಡದ ಸ್ವರೂಪ ಈಗಿಲ್ಲ. ಆದರೆ ಅಂದಿನ ಕನ್ನಡದಲ್ಲಿ ಬಂದಿರುವ ವಿಷಯವನ್ನು ಈಗಿನ ಕನ್ನಡದಲ್ಲಿ ತಿಳಿಸಬೇಕು ಎಂದರು.

ಸಿಐಐಎಲ್ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ನಿರ್ದೇಶಕ ಡಾ. ಪಂಕಜ್ ದ್ವಿವೇದಿ, ಸಮ್ಮೇಳನದ ಸಂಯೋಜಕ ಡಾ.ಎಲ್.ಆರ್. ಪ್ರೇಮಕುಮಾರ್, ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಮೊದಲಾದವರು ಇದ್ದರು.

Share this article