ದಿವ್ಯಾಂಗರ ಸ್ವಾವಲಂಬನೆಗೆ ಕೇಂದ್ರ ಯೋಜನೆಗಳು ಸಹಕಾರಿ

KannadaprabhaNewsNetwork | Published : Mar 11, 2024 1:15 AM

ಸಾರಾಂಶ

ದಿವ್ಯಾಂಗರು ಮತ್ತು ಹಿರಿಯ ನಾಗರೀಕರು ಸ್ವಾಭಿಮಾನದಿಂದ ಬದುಕಲು ಅನುವಾಗುವಂತೆ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳನ್ನು ನೀಡುತ್ತಿದೆ. ಜೀವನದ ಸವಾಲುಗಳನ್ನು ಎದುರಿಸಲು ದೇವರು ದಿವ್ಯಾಂಗರಿಗೆ ದುಪ್ಪಟ್ಟು ಶಕ್ತಿ ನೀಡಿರುತ್ತಾನೆ. ಜೊತೆಗೆ ಕೇಂದ್ರ ಸರ್ಕಾರ ಕೂಡ ಅವರು ಸ್ವಾಭಿಮಾನದಿಂದ ಬದುಕಲು ಅವಶ್ಯಕವಾದ ಸೌಲಭ್ಯಗಳನ್ನು ವಿತರಿಸುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ದಿವ್ಯಾಂಗರು ಮತ್ತು ಹಿರಿಯ ನಾಗರೀಕರು ಸ್ವಾಭಿಮಾನದಿಂದ ಬದುಕಲು ಅನುವಾಗುವಂತೆ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರ ಸುವರ್ಣ ಸಾಂಸ್ಕೃತಿಕ ಭವನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ ಅಡಿಪ್ ಮತ್ತು ವಯೋಶ್ರೀ ಯೋಜನೆಯಡಿ ಜಿಲ್ಲೆಯ ವಿಕಲಚೇತನರಿಗೆ ಹಾಗೂ ಹಿರಿಯ ನಾಗರೀಕರಿಗೆ ಅವಶ್ಯಕ ಸಾಧನ ಸಲಕರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೀವನದ ಸವಾಲುಗಳನ್ನು ಎದುರಿಸಲು ದೇವರು ದಿವ್ಯಾಂಗರಿಗೆ ದುಪ್ಪಟ್ಟು ಶಕ್ತಿ ನೀಡಿರುತ್ತಾನೆ. ಜೊತೆಗೆ ಕೇಂದ್ರ ಸರ್ಕಾರ ಕೂಡ ಅವರು ಸ್ವಾಭಿಮಾನದಿಂದ ಬದುಕಲು ಅವಶ್ಯಕವಾದ ಸೌಲಭ್ಯಗಳನ್ನು ವಿತರಿಸುತ್ತಿದೆ ಎಂದರು.

ಬಡವರು, ರೈತರು, ದಿವ್ಯಾಂಗರು, ಹಿರಿಯರು, ಯುವಜನತೆ ಸೇರಿದಂತೆ ಎಲ್ಲರೂ ಸ್ವಾಭಿಮಾನದಿಂದ ಬದುಕಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಿಕಲಚೇತನರಿಗೆ ಯುಡಿಐಡಿ ಕಾರ್ಡ್, ನಿರಾಮಯ ಆರೋಗ್ಯ ಯೋಜನೆ, ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಾಮಾಜಿಕ ಭದ್ರತೆಯ ಭತ್ಯೆ, ವಿಕಲಚೇತನರಿಗೆ 5 ಲಕ್ಷದವರೆಗೆ ವೈದ್ಯಕೀಯ ವೆಚ್ಚ ಭರಿಸುವುದು ಸೇರಿದಂತೆ ಹಲವಾರು ಯೋಜನೆಗಳನ್ನು ನೀಡಿದೆ. ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಬದುಕನ್ನು ಸರಾಗಗೊಳಿಸಲು ನಾವು ನಿಮ್ಮ ಜೊತೆಗಿರುತ್ತೇವೆ ಎಂದು ಭರವಸೆ ನೀಡದರು.

ವಿಧಾನ ಪರಿಷತ್ತು ಸದಸ್ಯ ಎಸ್‌.ರುದ್ರೇಗೌಡ ಮಾತನಾಡಿ, ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ಕೇಂದ್ರ ಸರ್ಕಾರ 26 ರೀತಿಯ ದಿವ್ಯಾಂಗರನ್ನು ಗುರುತಿಸಿ, ಅವರ ಜೀವನ ಸರಾಗಗೊಳಿಸಲು ಸಾಧನ ಸಲಕರಣೆಗಳನ್ನು ವಿತರಿಸುತ್ತಿದೆ ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸಂಸದರು ಸದಾ ಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಸರ್ಕಾರ ವಿವಿಧ ಯೋಜನೆಗಳ ಮೂಲಕ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಸಹಕಾರಿಯಾಗಿದೆ ಎಂದರು.

ಅಲಿಂಕೋ ಸಂಸ್ಥೆ ಮುಖ್ಯಸ್ಥ ಶಿವಕುಮಾರ್ ಸ್ವಾಗತಿಸಿದರು. 500 ಆಯ್ದ ಫಲಾನುಭವಿಗಳಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಪಾಲಿಕೆ ಮಾಜಿ ಸದಸ್ಯರು, ಜನಪ್ರತಿನಿಧಿಗಳು, ಅಂಗವಿಕಲರ ಕಲ್ಯಾಣಾಧಿಕಾರಿ ಚಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಕೃಷ್ಣಪ್ಪ, ಇತರರು ಹಾಜರಿದ್ದರು.

- - - ಬಾಕ್ಸ್‌ ಅಲಿಂಕೋ ಸಂಸ್ಥೆಗೆ ಅಭಿನಂದನೆ ಅಲಿಂಕೋ ಸಂಸ್ಥೆಯವರು ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಡಿ ಜಿಲ್ಲೆಯಲ್ಲಿ ಕೇವಲ ಒಂದು ವಾರದಲ್ಲಿ ತಾಲೂಕುವಾರು ಸರ್ವೇ ಕಾರ್ಯ ನಡೆಸಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿರುವುದು ಅಭಿನಂದನೀಯ. ಸುಮಾರು 1020 ದಿವ್ಯಾಂಗರಿಗೆ ₹80 ಲಕ್ಷ ಮೊತ್ತದ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಟ್ರೈಸೈಕಲ್, ವ್ಹೀಲ್‍ಚೇರ್, ವಾಕಿಂಗ್ ಸ್ಟಿಕ್, ಸಿಪಿ ಚೇರ್, ಸ್ಮಾರ್ಟ್ ಚೇರ್, ಬ್ರೇಸ್, ಇಯರಿಂಗ್ ಏಡ್ ಸೇರಿದಂತೆ ಸುಮಾರು 500 ಫಲಾನುಭವಿಗಳಿಗೆ ವಿವಿಧ ರೀತಿಯ ಸಾಧನ- ಸಲಕರಣೆಗಳನ್ನು ನೀಡಲಾಗುತ್ತಿದೆ. ಅಡಿಪ್ ಯೋಜನೆಯಡಿ ವಿಕಲಚೇತನರಿಗೆ 243 ಸಾಧನಗಳು ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರೀಕರಿಗೆ 198 ಸಾಧನಗಳು ಹಾಗೂ ಸಂಸದರ ಪ್ರದೇಶಾಭಿವೃದ್ದಿ ಅನುದಾನದಲ್ಲಿ 32 ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲಾಗುತ್ತಿದೆ ಎಂದರು.

- - - -10ಎಸ್‌ಎಂಜಿಕೆಪಿ03:

ಶಿವಮೊಗ್ಗ ಸುವರ್ಣ ಸಾಂಸ್ಕೃತಿಕ ಭವನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ ಅಡಿಪ್ ಮತ್ತು ವಯೋಶ್ರೀ ಯೋಜನೆಯಡಿ ಜಿಲ್ಲೆಯ ವಿಕಲಚೇತನರಿಗೆ ಹಾಗೂ ಹಿರಿಯ ನಾಗರೀಕರಿಗೆ ಅವಶ್ಯಕ ಸಾಧನ ಸಲಕರಣೆ ಕಾರ್ಯಕ್ರಮದಲ್ಲಿ ಅಂಗವಿಕರಿಗೆ ವ್ಹೀಲ್‍ಚೇರ್ ವಿತರಿಸಲಾಯಿತು.

Share this article