ಕೇಂದ್ರ ಯೋಜನೆಗಳು ಕಡುಬಡವರಿಗೂ ದೊರೆಯಲಿ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಕನಕಪುರ: ಕೇಂದ್ರ ಸರ್ಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದೊರೆಯಬೇಕು. ಆದರೆ ಸರ್ಕಾರದ ಯೋಜನೆಗಳು ಜನರಿಗೆ ತಲುಪಿದೆಯೇ ಎಂಬ ಕೇಂದ್ರದ ನಮ್ಮ ಸಂಕಲ್ಪ ವಿಕಸಿತ ಭಾರತ ಸಂಕಲ್ಪ ಅಭಿಯಾನ ಕಾರ್ಯಕ್ರಮಕ್ಕೆ ತಾಲೂಕಿನ ಯಾವುದೇ ಅಧಿಕಾರಿಗಳು ಭಾಗವಹಿಸದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗು ಸಂಸದ ಡಿ.ಕೆ.ಸುರೇಶ್ ತಡೆದಿದ್ದಾರೆ ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕಾ ಸಚಿವ ಕ್ರಿಶನ್ ಪಾಲ್ ಗುರ್ಜರ್ ಆರೋಪಿಸಿದರು.

ಕನಕಪುರ: ಕೇಂದ್ರ ಸರ್ಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದೊರೆಯಬೇಕು. ಆದರೆ ಸರ್ಕಾರದ ಯೋಜನೆಗಳು ಜನರಿಗೆ ತಲುಪಿದೆಯೇ ಎಂಬ ಕೇಂದ್ರದ ನಮ್ಮ ಸಂಕಲ್ಪ ವಿಕಸಿತ ಭಾರತ ಸಂಕಲ್ಪ ಅಭಿಯಾನ ಕಾರ್ಯಕ್ರಮಕ್ಕೆ ತಾಲೂಕಿನ ಯಾವುದೇ ಅಧಿಕಾರಿಗಳು ಭಾಗವಹಿಸದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗು ಸಂಸದ ಡಿ.ಕೆ.ಸುರೇಶ್ ತಡೆದಿದ್ದಾರೆ ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕಾ ಸಚಿವ ಕ್ರಿಶನ್ ಪಾಲ್ ಗುರ್ಜರ್ ಆರೋಪಿಸಿದರು.

ತಾಲೂಕಿನ ಸಾತನೂರು ಹೋಬಳಿ ಅಚ್ಚಲು ಗ್ರಾಮ ಪಂಚಾಯತಿ ಆವರಣದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳು ರಾಜ್ಯ ಸರ್ಕಾರದ ಜೊತೆಗೂಡಿ ಅನುಷ್ಠಾನ ಗೊಳ್ಳಬೇಕು. ಈ ಯೋಜನೆಗಳು ಬಡವರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ತಲುಪಿದೆಯೇ ಎನ್ನುವ ಈ ಕಾರ್ಯಕ್ರಮಕ್ಕೆ ತಾಲೂಕು ಆಡಳಿತ ಗೈರಾಗುವ ಮೂಲಕ ಬಡವರಿಗೆ ಅನ್ಯಾಯವೆಸಗಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೊಟ್ಟ ಭರವಸೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಿದೆ. 35.57 ಲಕ್ಷ ಉಜ್ವಲ ಅನಿಲ ಸಂಪರ್ಕಗಳು, ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 4.48 ಲಕ್ಷ ಮನೆಗಳ ನಿರ್ಮಾಣ, 48 ಲಕ್ಷಕ್ಕೂ ಹೆಚ್ಚು ಶೌಚಾಲಯಗಳ ನಿರ್ಮಾಣ, 7.12 ಲಕ್ಷ ಕುಡಿಯುವ ನೀರಿನ ಸಂಪರ್ಕ, ಮುದ್ರಾ ಯೋಜನೆಯಡಿ ಶೇ.69 ರಷ್ಟು ಮಹಿಳೆಯರಿಗೆ 37.5 ಲಕ್ಷ ಸಾಲ ಮಂಜೂರು, ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣುಮಕ್ಕಳ ಹೆಸರಿನಲ್ಲಿ 27.6 ಲಕ್ಷ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದರು,

ಪಿ.ಎಂ. ಕಿಸಾನ್ ಯೋಜನೆಯಡಿ 58.12 ಲಕ್ಷ ರೈತರಿಗೆ 13,256 ಕೋಟಿ ರೂ. ತಲುಪುತ್ತಿದೆ. ಜನೌಷಧಿ ಯೋಜನೆಯಡಿ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳು, 5 ಲಕ್ಷದವರೆಗೆ ಪ್ರತಿ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ, 1.51 ಕೋಟಿಗೂ ಹೆಚ್ಚು ಆಯುಷ್‍ಮಾನ್ ಭಾರತ್ ಆರೋಗ್ಯ ಕಾರ್ಡುಗಳು, ಅಪಘಾತ ವಿಮೆ ಯೋಜನೆಗೆ 1.80 ಕೋಟಿ ದಾಖಲಾತಿಗಳನ್ನು ಸಂಗ್ರಹಿಸಲಾಗಿದೆ.

ಅಟಲ್ ಪಿಂಚಣಿ ಯೋಜನೆಯಡಿ 34 ಲಕ್ಷ ಜನ ಎ.ಸಿ.ವೈ.ಗೆ ಚಂದಾದಾರರಾಗಿದ್ದಾರೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ 2.62 ಲಕ್ಷ ಫಲಾನುಭವಿಗಳಿಗೆ ಬಂಡವಾಳ ಸಾಲವಾಗಿ 490.63 ರೂ. ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ದೇಶದ ಉದ್ದಗಲಕ್ಕೂ ನದಿಯಂತೆ ಹರಿದು ಬಡವರ ಹಾಗು ಕೃಷಿ ಕಾರ್ಮಿಕರ, ಮಹಿಳೆಯರ, ಯುವಕರ ಬದುಕಲ್ಲಿ ಬೆಳಕು ಕಂಡಿರುವುದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ಮಾತನಾಡಿ, ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನತೆಗೆ ನೀಡಿದ್ದ ಭರವಸೆ ಸಾಕಾರಗೊಂಡು ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿರುವುದಾಗಿ ತಿಳಿಸಿದರು.

ನಗರಸಭಾ ಸದಸ್ಯೆ ಮಾಲತಿ ಆನಂದ್, ವಿಕಸಿತ ಭಾರತ್ ಸಂಕಲ್ಪ ಯಾತ್ರೆಯ ರಾಜ್ಯ ಸಹ ಸಂಚಾಲಕಿ ಭಾರತಿ ಮುಗ್ದುಂ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಪ್ರಬಂಧಕ ಪ್ರಶಾಂತ್ ಪ್ರಭು, ಕೃಷಿ ವಿಜ್ಞಾನಿ ದೀಪಾ ಪೂಜಾರ್, ಡಾ.ಅರ್ಚನ, ಗ್ರಾಮ ಪಂಚಾಯತಿ ಸದಸ್ಯ ಬೊಮ್ಮನಹಳ್ಳಿ ಕುಮಾರಸ್ವಾಮಿ, ಪಿಡಿಒ ಬಂಗಾರಯ್ಯ ಸೇರಿದಂತೆ ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.4ಕೆಆರ್ ಎಂಎನ್ 6.ಜೆಪಿಜಿ

ರಾಮನಗರ ತಾಲೂಕಿನ ಅಚ್ಚಲು ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್ ಉದ್ಘಾಟಿಸಿದರು.

Share this article