ತಾಳಗುಪ್ಪದಲ್ಲಿ ಶತಮಾನದ ಈಶ್ವರ ದೇಗುಲಕ್ಕೆ ಕಾಯಕಲ್ಪ

KannadaprabhaNewsNetwork | Updated : May 01 2025, 12:46 AM IST

ಸಾರಾಂಶ

ತಾಳಗುಪ್ಪ ಹೋಬಳಿಯ ಕುಗ್ವೆಯಲ್ಲಿ ಎಂಟು ಶತಮಾನದ ಹಿಂದಿನ ಶಿವಾಲಯ ಪುನರ್‌ ನಿರ್ಮಾಣಗೊಂಡಿದೆ. 2025ರ ಮೇ 3,4,5 ರಂದು ಪುನರ್ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಪೂರ್ವ ಸಿಧ್ಧತೆಗಳು ನಡೆಯತ್ತಿದೆ.

ಪುನರ್‌ ನಿರ್ಮಾಣವಾದ ವಿಜಯನಗರ ಕಾಲದ ಶಿವನ ಆಲಯ । ಮೇ 3ರಿಂದ ಪುನರ್‌ ಪ್ರತಿಷ್ಠಾಪನೆ । ಧಾರ್ಮಿಕ ವಿಧಿ

ಕಲಗಾರು ಲಕ್ಷ್ಮೀನಾರಾಯಣ ಹೆಗಡೆ

ಕನ್ನಡ ಪ್ರಭ ವಾರ್ತೆ ತಾಳಗುಪ್ಪ

ತಾಳಗುಪ್ಪ ಹೋಬಳಿಯ ಕುಗ್ವೆಯಲ್ಲಿ ಎಂಟು ಶತಮಾನದ ಹಿಂದಿನ ಶಿವಾಲಯ ಪುನರ್‌ ನಿರ್ಮಾಣಗೊಂಡಿದೆ. 2025ರ ಮೇ 3,4,5 ರಂದು ಪುನರ್ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಪೂರ್ವ ಸಿಧ್ಧತೆಗಳು ನಡೆಯತ್ತಿದೆ.

ಸುಮಾರು 800 ವರ್ಷಗಳ ಹಿಂದೆ ವಿಜಯನಗರದ ಅರಸರ ಕಾಲದಲ್ಲಿ ಶಿವದೇವಾಲಯವು ನಿರ್ಮಾಣಗೊಂಡಿದೆ. ಒಬ್ಬ ಸಾಧಕ ಸಿದ್ದ ಪುರುಷನ ಪ್ರೇರಣೆಯಿಂದ ಸ್ಥಳೀಯ ಕೃಷಿಕರು ದೇವಾಲಯ ನಿರ್ಮಿಸಿ ಶಿವಲಿಂಗ ಪ್ರತಿಷ್ಠಾಪಿಸಿ ನಿರಂತರ ಪೂಜಿಸುತ್ತ ಬಂದಿದ್ದಾರೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ದೇವಸ್ಥಾನದಲ್ಲಿರುವ ಶಿವಲಿಂಗ, ಬಸವಣ್ಣ, ಗಣಪತಿ, ಕ್ಷೇತ್ರಪಾಲ, ಸಪ್ತ ಮಾತ್ರಿಕೆಯರ ವಿಗ್ರಹಗಳು ಪುರಾತನ ಶಿಲ್ಪಗಳಾಗಿದೆ..ಕಾಲಾಘಾತದಲ್ಲಿ ಸಿಲುಕಿ ಶಿಥಿಲವಾಗಿದ್ದ ಈ ದೇವಾಲಯವನ್ನು ಕುಗ್ವೆ ಗ್ರಾಮದವರು ಸಂಪೂರ್ಣ ಶಿಲಾಮಯ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯದ ಗರ್ಭಗುಡಿ, ಸಭಾ ಮಂಟಪಕ್ಕೆ ತಾಮ್ರದ ಹೊದಿಕೆ ಹೊದಿಸಲಾಗಿದೆ. ಪುನರ್‌ ನಿರ್ಮಾಣ ಕಾಮಗಾರಿಗೆ ಸುಮಾರು 3 ಕೋಟಿ ರು. ವೆಚ್ಚವಾಗಿದೆ.

ವಿಜಯನಗರ ಕಾಲದ ದೇವಸ್ಥಾನ:

ಸುಮಾರು 400 ಮನೆಗಳನ್ನು ಹೊಂದಿದ ಕುಗ್ವೆ ಗ್ರಾಮವು ಪ್ರಾಚೀನ ಇತಿಹಾಸ ಹೊಂದಿದ ಸ್ಥಳವಾಗಿದ್ದು, ಹಕ್ಕ ಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪಸಿದ ಕಾಲಘಟ್ಟಕ್ಕೆ ಸಂಬಂಧಿಸಿದೆ. ಇಲ್ಲಿನ ಹಳೆಪೈಕರು (ದೀವರು) ಹರಿಹರ (ಹುಕ್ಕ) ಹಾಗೂ 2ನೇ ಹರಿಹರನ ಕಾಲದಲ್ಲಿ ವಿಜಯನಗರದ ಯೋಧರಾಗಿ ಸೇವೆ ಸಲ್ಲಿಸಿದ್ದರು. ದಂಡಿನಲ್ಲಿ ಕಾಳಗಮಾಡಿ ಮಡಿದ ವೀರಗಲ್ಲುಗಳು, ಸತಿ ಸಹಗಮನದ ಮಹಾಸತಿ ಕಲ್ಲುಗಳು, ಶಾಸನಗಳು ಇಲ್ಲಿರುವುದು ಎಪಿಗ್ರಾಪಿಕ್ ಕರ್ನಾಟಕ ಶಾಸನ ಸಂಪುಟಗಳಲ್ಲಿ ದಾಖಲಾಗಿದೆ. ಇಲ್ಲಿನ ನಾಲ್ಕು ಶಾಸನಗಲ್ಲಿ 2 ದೀವರು ಜನಾಂಗಕ್ಕೆ ಸಂಬಂಧಿಸಿದೆ. 1336 –1356ರ ವಿಜಯನಗರದ ವೀರ ಹರಿಹರನ ಕಾಲದಲ್ಲಿ ಗೋಗಳ್ಳರನ್ನು ತಡೆಯುವ ಹೋರಾಟದಲ್ಲಿ ಮಡಿದ ಬೊಮ್ಮಯ್ಯ ನಾಯ್ಕ, ಸಹಗಮನ ಮಾಡಿದ ಆತನ ಪತ್ನಿ ಚೀಯಕ್ಕನಿಗೆ ಸಂಬಂದಿಸಿದ ಹಾಗೂ 1373ರಲ್ಲಿ ಗೋಗಳ್ಳರನ್ನು ತಡೆವ ಹೋರಾಟದಲ್ಲಿ ಮಡಿದ ಕುಗ್ವೆ ಚೌಡನಾಯ್ಕ ಹಾಗೂ ಅವನ ಮಗ ಕರಿಯಪ್ಪ ಎಂಬುವವರಿಗೆ ಸಂಬಂಧಿಸಿದೆ.

ಪ್ರಾಚೀನ ಇತಿಹಾಸ ಹೊಂದಿದ ದೀವರು ಕದಂಬ, ಹೊಯ್ಸಳ, ವಿಜಯನಗರ , ಕೆಳದಿ ಸಾಮ್ರಾಜ್ಯದಲ್ಲಿ ಮಂತ್ರಿಗಳಾಗಿ, ಸೇನಾ ಪ್ರಮುಖರಾಗಿ, ಕಾಲಾಳುಗಳಾಗಿ ಸೇವೆ ಸಲ್ಲಿಸಿದ ದಾಖಲೆಗಳಿವೆ. ಸಾಮಂತರಾಗಿ, ಮಹಾ ಮಾಂಡಳಿಕರಾಗಿ ಸ್ವತಂತ್ರವಾಗಿ ಆಳಿದ ಇತಿಹಾಸಗಳಿವೆ. ಶಿವಮೊಗ್ಗದ ಶಾಸನ ತಜ್ಞರಾದ ಮಧು ಗಣಪತಿರಾವ್‍ರವರ ಸಂಶೋಧನಾ ಗ್ರಂಥ ಕರ್ನಾಟಕ ದೀವರು ಒಂದು ಐತಿಹಾಸಿಕ ಅಧ್ಯಯನ ಹಲವು ಚಾರಿತ್ರಿಕ, ರೋಚಕ ಸಂಗತಿಯನ್ನು ದಾಖಲಿಸಿದೆ.

ರಾಜ ಮಹಾರಾಜರ ಕಾಲದಲ್ಲಿ ಉಂಬಳಿ, ದಾನ ರೂಪದಲ್ಲಿ ಕೃಷಿಯೋಗ್ಯ ಭೂಮಿಗಳು ಬ್ರಾಹ್ಮಣ, ಲಿಂಗಾಯತ ಹಾಗೂ ಇತರ ಜನಾಂಗದ ಪ್ರತಿಷ್ಠಿತರಿಗೆ ನೀಡಲಾಗಿತ್ತು. ಅರೆಕಾಲಿಕ ಕೃಷಿಕರಾಗಿದ್ದ ಸೈನಿಕರಿಗೆ ಸೇರಿದ್ದ ಕೃಷಿ ಜಮೀನು ಕಾರಣಾಂತರದಿಂದ ಶ್ರೀಮಂತರ ಪಾಲಾಗಿತ್ತು. ರಾಜಪ್ರಭುತ್ವ ಕೊನೆಗೊಂಡ ನಂತರ ಜೀವನಾಧಾರವಾಗಿ ಸಂಪೂರ್ಣ ಕೃಷಿ ಅವಲಂಬಿಸಿದ ದೀವರು ಸಮುದಾಯ ಈ ಜಮೀನುಗಳನ್ನು ಗೇಣಿಗೆ ಪಡೆದು ಸಾಗುವಳಿ ಮಾಡಿದರು.

ಹಲವು ಶತಮಾನಗಳ ಗೇಣಿ ಒಡೆಯ ಒಕ್ಕಲುಗಳ ಸಂಬಂಧದಲ್ಲಿ ಬಿರುಕು ಮೂಡಿ ಊಳುವವನೇ ಹೊಲದೊಡೆಯನೆಂಬ ಘೋಷಣೆಗೆ ಕಾರಣವಾಯಿತು. ಕಾಗೋಡು ಚಳುವಳಿ ಭೂ ಹಕ್ಕಿಗಾಗಿ ನಡೆದ ಗೇಣಿ ರೈತರ ಸಂಘಟಿತ ಹೋರಾಟದಲ್ಲಿ ಕುಗ್ವೆ ಗ್ರಾಮಸ್ಥರು ಮಂಚೂಣಿಯಲ್ಲಿದ್ದರು.

Share this article