ಗದಗ: ತಾಲೂಕಿನ ಹುಲಕೋಟಿಯ ಕೈಲಾಸ ಆಶ್ರಮದ 32ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಲಾದ ಸಿರಿಧಾನ್ಯ ಮೇಳ ಹಾಗೂ ಕೃಷಿ ತಂತ್ರಜ್ಞಾನ ಪ್ರದರ್ಶನ ಮೇಳವು ಆಶ್ರಮಕ್ಕೆ ಬಂದಿದ್ದ ಭಕ್ತರು ವಿಶೇಷವಾಗಿ ರೈತರು, ರೈತ ಮಹಿಳೆಯರ ಗಮನ ಸಳೆಯಿತು. ಅದರಲ್ಲಿಯೂ ಸಿರಿಧಾನ್ಯದಲ್ಲಿ ಮೂಡಿದ ಚಿತ್ತಾಕರ್ಷಕ ರಂಗೋಲಿಯು ಅಪಾರ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಯಿತು. ಸಿರಿಧಾನ್ಯ ಪ್ರತಿಯೊಬ್ಬರ ಆರೋಗ್ಯ ರಕ್ಷಣೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ಸಂದೇಶವನ್ನು ಸಾರುವಲ್ಲಿ ಚಿತ್ತಾಕರ್ಷಕ ರಂಗೋಲಿ ಸಫಲವಾಯಿತು. ಅಂತಾರಾಷ್ಟ್ರಿಯ ಮಟ್ಟದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಸಿರಿಧಾನ್ಯಗಳಿಂದ ರಂಗೋಲಿ ಬಿಡಿಸಲಾಗಿತ್ತು. ಅದರ ಜೊತೆಗೆ ಸಿರಿಧಾನ್ಯಗಳಾದ ಸಾಮೆ, ಕೊರಲೆ, ಬರಗು, ಹಾರಕ, ಊದಲು, ರಾಗಿ, ನವಣೆ, ಸಜ್ಜೆ ಮುಂತಾದ ಧಾನ್ಯಗಳಿಂದ ಕೂಡಿದ ರಂಗೋಲಿ ಅಂದವಾಗಿ ಬಿಡಿಸಲಾಗಿತ್ತು. ಈ ಕುರಿತು ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಲಾಯಿತು. ಸ್ತ್ರೀ ಶಕ್ತಿ ಸ್ವ- ಸಹಾಯ ಸಂಘಗಳು ಉತ್ಪಾದಿಸಿದ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಸಹ ಇಲ್ಲಿ ನಡೆಯಿತು. ಸ್ವದೇಶಿ ವಸ್ತುಗಳನ್ನು ಬಳಸಿ ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಧುನಿಕ ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಕುರಿತು ರೈತರಲ್ಲಿ ಅರಿವು ಮೂಡಿಸಲು ಕೃಷಿ ಯಂತ್ರಗಳ ಪ್ರದರ್ಶನವು ಆಗಮಿಸಿದ ರೈತರಲ್ಲಿ ಹುರುಪು ತಂದಿತ್ತು. ವಿವಿಧ ಕೃಷಿ ಉಪಕರಣಗಳಾದ ಮಿನಿ ಟ್ರ್ಯಾಕ್ಟರ್ ಸೇರಿದಂತೆ ಹಲವಾರು ಯಂತ್ರಗಳ ಪ್ರದರ್ಶನ ಸಹ ನಡೆಯಿತು. ಕೃಷಿ, ತೋಟಗಾರಿಕೆ ತಂತ್ರಜ್ಞಾನ, ಬೆಳೆಗಳ ತಂತ್ರಜ್ಞಾನ, ನೈಸರ್ಗಿಕ ಕೃಷಿ, ಪಶು ಸಂಗೋಪನೆ ತಂತ್ರಜ್ಞಾನ, ಸಿರಿಧಾನ್ಯ ಮೌಲ್ಯವರ್ಧನೆ, ಕೃಷಿ ಆಧುನಿಕ ಉಪಕರಣಗಳ ಬಗ್ಗೆ ಪ್ರದರ್ಶನ ದಲ್ಲಿ ಜಾಗೃತಿ ಮುಡಿಸಲಾಯಿತು. ಈ ವಿಶೇಷ ಮೇಳವನ್ನು ಕಾನೂನು, ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ಹರಿ ಹರಪುರ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿ, ಗದುಗಿನ ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ, ಶಿರಹಟ್ಟಿ ಫಕೀರೇಶ್ವರ ಮಹಾ ಸಂಸ್ಥಾನ ಮಠದ ಫಕೀರೇಶ್ವರ ಸ್ವಾಮೀಜಿ, ಗದಗ ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಬೆಳಗಾವಿಯ ನಿಡಸೋಸಿ ದುರುದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ, ಬೆಂಗಳೂರಿನ ರಾಮೋಹಳ್ಳಿ ರಾಮಕೃಷ್ಣ ಯೋಗಾಶ್ರಮದ ಅಧ್ಯಕ್ಷ ಸ್ವಾಮಿ ಯೋಗೇಶ್ವರಾನಂದಜೀ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ ಅವರುಗಳು ಉಪಸ್ಥಿತರಿದ್ದರು.