ಕನ್ನಡಪ್ರಭ ವಾರ್ತೆ ಶಹಾಪುರ
ಇತ್ತೀಚಿನ ವರ್ಷಗಳಲ್ಲಿ ಮತ್ತೆ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳಿಗೆ ಮಹತ್ವ ದೊರೆಯುತ್ತಿದೆ. ಸಿರಿಧಾನ್ಯಗಳು ಸುಸ್ಥಿರ ಆರೋಗ್ಯದ ಐಸಿರಿಗಳಾಗಿವೆ ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.ಸಮೀಪದ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಬೆಂಗಳೂರು, ಜಿಲ್ಲಾ ಕೃಷಿಕ ಸಮಾಜ, ಆತ್ಮಾ ಯೋಜನೆ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಹಬ್ಬದ ಕಾರ್ಯಕ್ರಮ ನವಣೆ ಕುಟ್ಟುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಸಿರಿಧಾನ್ಯಗಳ ಕೃಷಿಯು ಕೇವಲ ಸಾಂಪ್ರದಾಯಿಕ ಕೃಷಿಯಲ್ಲ. ಇದೊಂದು ವಿಶೇಷ ಹಾಗೂ ವಿಶಿಷ್ಟ ಕೃಷಿಯಾಗಿದೆ. ಕಡಿಮೆ ಮಳೆ ಇದ್ದರೂ ಸಹ ಬೆಳೆ ಬೆಳೆಯಬಹುದಾಗಿದೆ. ಇವುಗಳ ಬೆಳವಣಿಗೆಗೆ ರಾಸಾಯನಿಕ ಗೊಬ್ಬರ ಬಳಕೆ ಅವಶ್ಯಕತೆ ಕಡಿಮೆ ಇದೆ. ನಾವು ಪ್ರತಿದಿನ ಸೇವಿಸುವ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಟಿಕಾಂಶಗಳ ಲಾಭವೇ ಹೆಚ್ಚಾಗಿದೆ ಎಂದರು.ಸರ್ಕಾರವು ಸಿರಿಧಾನ್ಯಗಳ ಕೃಷಿಗೆ ಮತ್ತು ಬಳಕೆಗೆ ಒತ್ತು ನೀಡುವ ಹೆಜ್ಜೆ ಇಟ್ಟಿದ್ದು, ಕೃಷಿಕರು ಮತ್ತು ಕೃಷಿಕರಲ್ಲದ ಗ್ರಾಹಕರು ಸರ್ಕಾರದ ಜತೆಗೆ ಕೈ ಜೋಡಿಸಿ ನಮ್ಮ ಮತ್ತು ಮುಂದಿನ ಪೀಳಿಗೆಗಳ ಹಿತಕ್ಕಾಗಿ ಸಿರಿಧಾನ್ಯ ಬೆಳೆಯುವ ಮತ್ತು ಬಳಕೆ ಮಾಡುವ ಮೂಲಕ ನಮ್ಮ ಸಾಮಾಜಿಕ ಕರ್ತವ್ಯವನ್ನು ನಿಭಾಯಿಸಬೇಕಾದ ಸಮಯ ಬಂದಿದೆ. 2019ಲ್ಲಿ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯ ಮಕ್ಕಳು ಸೇವಿಸಲು ವಿವಿಧ ಆಹಾರ ಧಾನ್ಯಗಳ ಗಂಜಿ ಮಾಡಿ ಕುಡಿಯುತ್ತಿದ್ದರು. ಇದರಿಂದ ಮನೆಯಲ್ಲಿ ಆರೋಗ್ಯ ಸಮೃದ್ಧಿ ಕಂಡಿದೆ ಎಂದರು.
ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಮಾತನಾಡಿ, ನಮಗೆ ನಿಜವಾದ ಆಸ್ತಿಯೇ ಉತ್ತಮವಾದ ಆರೋಗ್ಯವಾಗಿದೆ. ನಮಗೆ ಉತ್ತಮವಾದ ಔಷಧಗಳೇ ಅಡುಗೆ ಮನೆಯ ಸಿರಿಧಾನ್ಯಗಳಾಗಿವೆ. ಪ್ರಸ್ತುತ ನಾವು ಅವುಗಳ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಅರಿತು ಸೇವಿಸುವ ಜೊತೆಗೆ ಪ್ರಚಾರಗೊಳಿಸಿ ಆರೋಗ್ಯಪೂರ್ಣ ಸಮಾಜ ಕಟ್ಟಬೇಕಿದೆ ಎಂದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಧಾನ್ಯಗಳ ಮಹತ್ವ ಅರಿಯದೆ ಹತ್ತಾರು ಬಗೆಯ ಆಹಾರ ಸೇವಿಸಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿ ಹಲವು ಬಗೆಯ ಸಮಸ್ಯೆಗಳಿಗೆ ಜನರು ಸಿಲುಕುತ್ತಿದ್ದಾರೆ. ಈ ವಿಷಯವನ್ನರಿತು ಕೃಷಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಿರಿಧಾನ್ಯಗಳಿಂದ ತಯಾರಿಸಿದ ಹತ್ತಾರು ಬಗೆಯ ಖಾದ್ಯ, ತಿನಿಸು ಹಾಗೂ ತಾಂತ್ರಿಕತೆ ಬಳಸಿ ವಿವಿಧ ರೂಪಗಳಲ್ಲಿ ಬದಲಾಯಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಮಾಲಿ ಪಾಟೀಲ್, ರಾಯಚೂರು ಆಡಳಿತ ಮಂಡಳಿ ಸದಸ್ಯ ಮಲ್ಲಿಕಾರ್ಜುನ.ಡಿ, ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ.ಗೌಡಪ್ಪ, ಕವಡಿಮಟ್ಟಿ ಕೃಷಿ ವಿಶ್ವ ವಿದ್ಯಾಲಯ ವಿಜ್ಞಾನಿ ಡಾ. ಜಯಪ್ರಕಾಶ್ ನಾರಾಯಣ್, ಭೀಮರಾಯನಗುಡಿ ಕೃಷಿ ವಿದ್ಯಾಲಯದ ಡೀನ್ ಡಾ. ಪ್ರಕಾಶ್ ಕುಚನೂರು, ಭೀಮರಾಯನ ಗುಡಿ ಕೃಷಿ ವಿಸ್ತರಣಾ ಮುಂದಾಳು ಡಾ. ಪಾಲಯ್ಯ, ಭೀಮರಾಯಗುಡಿ ಕೃಷಿ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಶ್ಯಾಮರಾವ ಕುಲಕರ್ಣಿ, ಜಂಟಿ ಕೃಷಿ ನಿರ್ದೇಶಕಿ ಮಂಜುಳಾ ಬಸರೆಡ್ಡಿ, ಶಹಾಪುರ ಕೃಷಿ ಸಹಾಯಕ ನಿರ್ದೇಶಕ ಸುನೀಲಕುಮಾರ ಯರಗೋಳ, ಸುರಪುರ ಸಹಾಯಕ ನಿರ್ದೇಶಕ ಭೀಮರಾಯ ಹವಾಲ್ದಾರ್, ಯಾದಗಿರಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ವಾರದ್, ತಹಸೀಲ್ದಾರ್ ಉಮಾಕಾಂತ ಹಳ್ಳಿ, ತಾಲೂಕು ಪಂಚಾಯತ್ ಅಧಿಕಾರಿ ಸೋಮಶೇಖರ ಬಿರಾದಾರ್, ವಡಗೇರಾದ ಮಲ್ಲಿಕಾರ್ಜುನ ಸೇರಿ ಇತರರಿದ್ದರು.ಇಂದಿನ ಯುವಕರು ಡಾಬಾ, ಪಿಜ್ಜಾ ಬರ್ಗರ್ ಹಾಗೂ ಬೇಕರಿ ವಸ್ತು ಜಾಸ್ತಿ ಇಷ್ಟಪಡುತ್ತಾರೆ. ಇದರಿಂದ ಆರೋಗ್ಯ ಮತ್ತು ಹಣ ಎರಡನ್ನು ಕಳೆದುಕೊಳ್ಳುತ್ತಾರೆ. ಸುಸ್ಥಿರ ಸಮಾಜಕ್ಕಾಗಿ ಇಂದಿನ ಯುವಕರಿಗೆ ಸಿರಿಧಾನ್ಯ ಬಗ್ಗೆ ಹೆಚ್ಚು ತಿಳಿಸಿಕೊಡುವ ಅಗತ್ಯವಿದೆ.
ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಶಾಸಕ, ಯಾದಗಿರಿ