ಕನ್ನಡಪ್ರಭ ವಾರ್ತೆ ಹಿರೇಕೆರೂರು
ತಾಲೂಕಿನಲ್ಲಿ ಸಹಕಾರಿ ರಂಗದ ಮುಖಾಂತರ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ನಮ್ಮ ವಿದ್ಯಾಸಂಸ್ಥೆಯು ಉನ್ನತ ಶಿಕ್ಷಣ ಸಂಸ್ಥೆಯ ಅತ್ಯುನ್ನತ ಶಿಖರ ಪ್ರಾಯವಾದ ಪಿಎಚ್‌ಡಿ ಸಂಶೋಧನಾ ಕೇಂದ್ರ ತೆರೆಯುವ ಮೂಲಕ ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಅದ್ವಿತೀಯ ಸಾಧನೆ ಮಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ರಾಜ್ಯದಲ್ಲಿಯೇ ಮಾದರಿ ಸಂಸ್ಥೆಯಾಗಿದೆ ಎಂದು ಸಿಇಎಸ್ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.ಪಟ್ಟಣದ ಸಿಇಎಸ್ ವಿದ್ಯಾ ಸಂಸ್ಥೆಯ ಶಾಂತಿನಿಕೇತನ ಆವರಣದ ಕುವೆಂಪು ಅಡಿಟೋರಿಯಮ್ ನಲ್ಲಿ ನಡೆದ ಪಿಎಚ್‌ಡಿ ಸಂಶೋಧನಾ ಚಟುವಟಿಕೆಗಳ ಚಾಲನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಥೆಯ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ನಡೆಸಿದ ನಂತರ ಮೈಸೂರು ಮುಕ್ತ ವಿಶ್ವವಿದ್ಯಾಲಯವು ಪಿಎಚ್‌ಡಿ ಸಂಶೋಧನಾ ಕೇಂದ್ರವನ್ನು ನೀಡಿದ್ದು, ನಮ್ಮ ಪಿಎಚ್‌ಡಿ ಸಂಶೋಧನಾ ಕೇಂದ್ರವು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಮೈಸೂರು ವಿದ್ಯಾಲಯ ಹೊರತು ಪಡಸಿ ರಾಜ್ಯದಲ್ಲಿ ಇರುವ ಏಕೈಕ ಸಂಶೋಧನಾ ಕೇಂದ್ರವಾಗಿದೆ. ದಿವಂಗತ ಡಿ.ಆರ್. ತಂಬಾಕದರವರು 1952 ರಲ್ಲಿ ಮುಂಬೈ ಸಹಕಾರಿ ಸಂಘಗಳ ಕಾನೂನಿನಡಿಯಲ್ಲಿ ಸಹಕಾರಿ ಶಿಕ್ಷಣ ಸಂಸ್ಥೆಯನ್ನು 1 ಧರ್ಮ ಶಾಲೆಯಲ್ಲಿ ಕೇವಲ 7 ವಿದ್ಯಾರ್ಥಿಗಳೊಂದಿಗೆ ಪ್ರಾರಂಭಿಸಿದ ಈ ಸಂಸ್ಥೆ ಇಂದು ಉತ್ತರ ಕರ್ನಾಟಕದಲ್ಲಿಯೇ ಹೆಮ್ಮರವಾದ ಶಿಕ್ಷಣ ಸಂಸ್ಥೆಯಾಗಿ ಬೆಳೆದು ಅದರ ಅಧೀನದಲ್ಲಿ 1 ಪ್ರಾಥಮಿಕ 5 ಪ್ರೌಢಶಾಲೆ | ಪದವಿಪೂರ್ವ ಮಹಾವಿದ್ಯಾಲಯ 1 ಕೈಗಾರಿಕಾ ಮಹಾವಿದ್ಯಾಲಯ 1 ಪದವಿ ಮಹಾವಿದ್ಯಾಲಯ 1 ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಪಿಎಚ್.ಡಿ ಸಂಶೋಧನಾ ಕೇಂದ್ರ | ಶಿಕ್ಷಣ ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಯು.ಜಿ ಪಿ.ಜಿ ಹಾಗೂ ಸರ್ಟಿಫಿಕೇಟ್ ಕೋರ್ಸಗಳನ್ನು ಪ್ರಾರಂಭಿಸಿದೆ. ಈ ಸಂಸ್ಥೆಗಳಲ್ಲಿ ಇಂದು 5000 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸಂಸ್ಥೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದೆ ಎಂದರು.ಸಂಸ್ಥೆಯ ಅಧ್ಯಕ ಎಸ್.ಬಿ. ತಿಪ್ಪಣ್ಣನವರ ಮಾತನಾಡಿ, ಇಂದು ಅನೇಕರು ಎಂಜಿನಿಯರ ಕಾಲೇಜುಗಳನ್ನು ತರೆದು ನಿರುದ್ಯೋಗ ಸೃಷ್ಠಿ ಮಾಡುತ್ತಿದ್ದಾರೆ. ಆದರೆ ನಮ್ಮ ಸಹಕಾರಿ ವಿದ್ಯಾ ಸಂಸ್ಥೆ ಪಿಎಚ್‌ಡಿ ಸಂಶೋಧನಾ ಕೇಂದ್ರ ತೆರೆಯವ ಮೂಲಕ ಸಮಾಜಕ್ಕೆ ಹೊಸ ಹೊಸ ಆವಿಷ್ಕಾರಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಎಸ್.ವೀರಭದ್ರಯ್ಯ ಮಾತನಾಡಿ, ಒಂದು ಸಂಸ್ಥೆಗೆ ಇಂತಹ ಉನ್ನತ ಮಟ್ಟದ ಸಂಶೋಧನಾ ಕೇಂದ್ರ ಲಭಿಸಬೇಕಾದರೇ ಆ ಸಂಸ್ಥೆ ಸತತವಾಗಿ ಶಿಕ್ಷಣದ ಗುಣಮಟ್ಟ ಕಾಯ್ದುಕೊಂಡು ಬಂದಾಗ ಮಾತ್ರ ಸಾಧ್ಯ. ಈ ಪಿಎಚ್‌ಡಿ ತರಗತಿಗೆ ರಾಜ್ಯದ ವಿವಿಧ ಪ್ರದೇಶಗಳಿಂದ ಪ್ರವೇಶ ಪಡೆದ23 ಸಂಶೋಧನಾ ವಿದ್ಯಾರ್ಥಿಗಳು ಪ್ರಮಾಣಿಕವಾಗಿ ಶ್ರಮಪಟ್ಟು ಪಿಎಚ್‌ಡಿ ಪದವಿ ಪಡೆಯಿರಿ ಎಂದರು.
ಹಿರಿಯ ಪ್ರಾಧ್ಯಾಪಕರಾದ ಡಾ. ಚಿತ್ರಾ ಸಿ.ಎನ್., ಡಾ. ವೆನ್ನಿಲಾ ಆರ್., ಡಾ. ರಜಿನಿ ಎಲ್.ಎಂ. ವಿದ್ಯಾರ್ಥಿಗಳಿಗೆ ಯುಜಿಸಿ ಹಾಗೂ ವಿಶ್ವವಿದ್ಯಾಲಯದ ನಿಯಮಗಳಂತೆ ಪಿಎಚ್.ಡಿಗೆ ಬೇಕಾದ ಎಲ್ಲ ಅಗತ್ಯತೆಗಳನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಸ್.ಬಿ. ಚನ್ನಗೌಡ್ರ, ಪಿಎಚ್‌ಡಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ರಂಜೀತ್ ಕುಮಾರ ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.