ಉಳವಿ ಜಾತ್ರೆಗೆ ಚಕ್ಕಡಿ ಯಾತ್ರೆ

KannadaprabhaNewsNetwork | Published : Feb 24, 2024 2:33 AM

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಉಳವಿಯ ಶ್ರೀ ಚನ್ನಬಸವೇಶ್ವರ ಜಾತ್ರೆಗೆ ಚಕ್ಕಡಿ ಬಂಡಿಯಲ್ಲಿ ಬರುವ ಭಕ್ತಾದಿಗಳು ಉಳವಿ ಕ್ಷೇತ್ರವನ್ನು ಮುಟ್ಟುತ್ತಿದ್ದಂತೆ ತಮ್ಮ ದನಿವನ್ನು ಮರೆತು ಶ್ರೀಚನ್ನಬಸವಣ್ಣನ ದರ್ಶನಕ್ಕೆ ಮುಗಿಬೀಳುವುದನ್ನು ಕಾಣುವುದೇ ಒಂದು ರೋಮಾಂಚನ.

ಗುರುಶಾಂತ ಜಡೆಹಿರೇಮಠ

ದಾಂಡೇಲಿ:

ಅಡಕೇಶ್ವರ ಮಡಕೇಶ್ವರ ಉಳವಿ ಚನ್ನಬಸವೇಶ್ವರ ಬಹುಪರಾಕ್, ಹರಹರಾ ಮಹಾದೇವ ಎಂಬ ಜಯಘೋಷಗಳ ಕೂಗುತ್ತ ನೂರಾರು ಕಿಮೀ ದೂರ ಸಾಗಿ ಉತ್ತರ ಕನ್ನಡ ಜಿಲ್ಲೆಯ ಉಳವಿಯ ಶ್ರೀ ಚನ್ನಬಸವೇಶ್ವರ ಜಾತ್ರೆಗೆ ಚಕ್ಕಡಿ ಬಂಡಿಯಲ್ಲಿ ಬರುವ ಭಕ್ತಾದಿಗಳು ಉಳವಿ ಕ್ಷೇತ್ರವನ್ನು ಮುಟ್ಟುತ್ತಿದ್ದಂತೆ ತಮ್ಮ ದನಿವನ್ನು ಮರೆತು ಶ್ರೀಚನ್ನಬಸವಣ್ಣನ ದರ್ಶನಕ್ಕೆ ಮುಗಿಬೀಳುವುದನ್ನು ಕಾಣುವುದೇ ಒಂದು ರೋಮಾಂಚನ.

೧೦ರಿಂದ ೧೫ ದಿನಗಳ ಪ್ರವಾಸ ಕೈಗೊಂಡು, ಜಾತ್ರೆಯಲ್ಲಿ ಪಾಲ್ಗೊಂಡು, ಭಗವಂತನ ದರ್ಶನ ಪಡೆದು ಪುನೀತರಾಗುತ್ತಾರೆ. ತಾವು ತಂದ ಚಕ್ಕಡಿ ಬಂಡಿಗಳಿಗೆ ಹಾಗೂ ಎತ್ತುಗಳಿಗಾಗಿ ವಿಶೇಷ ವಸ್ತುಗಳನ್ನು ಜಾತ್ರೆಯಲ್ಲಿ ಖರೀದಿಸಿ ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಚನ್ನಬಸವೇಶ್ವರ ಜಾತ್ರೆಯ ತೇರೆಳೆದ ಆನಂತರ ತಮ್ಮ ಚಕ್ಕಡಿ ಬಂಡಿಗಳಿಗೆ ಎತ್ತುಗಳನ್ನು ಕಟ್ಟಿ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ.ಉಳವಿ ಜಾತ್ರೆ ಮುಗಿಸಿಕೊಂಡು ದಾಂಡೇಲಿ ಮಾರ್ಗವಾಗಿ ಹೋಗುವಾಗ ದಾಂಡೇಲಿ ನಗರದಲ್ಲಿರುವ ಶ್ರೀ ಮೃತ್ಯುಂಜಯ ಮಠದ ಆವರಣದಲ್ಲಿ ಚಕ್ಕಡಿ ಬಂಡಿ ನಿಲ್ಲಿಸಿ ದಣಿವಾರಿಸಿಕೊಳ್ಳುತ್ತಾರೆ. ಶ್ರೀ ಮೃತ್ಯುಂಜಯ ಮಠದ ಆಡಳಿತ ಮಂಡಳಿ ದಣಿವಾರಿಸಿಕೊಳ್ಳಲು ಚಕ್ಕಡಿ ಹೊತ್ತು ಬಂದ ದನಕರುಗಳಿಗೆ ಆಶ್ರಯ ನೀಡುವುದಲ್ಲೆ ಅಲ್ಲಿಯೆ ನೀರಿನ ವ್ಯವಸ್ಥೆ ಮಾಡಿಕೊಡುತ್ತಾರೆ.ಚಕ್ಕಡಿ ಬಂಡಿಯಲ್ಲಿ ಜಾತ್ರಾರ್ಥಿಗಳು ನೂರಾರು ಕಿಮೀ ಕ್ರಮಿಸಿ ಉಳವಿಯ ಶ್ರೀ ಚನ್ನಬಸವೇಶ್ವರ ಜಾತ್ರೆಗೆ ಪಾಲ್ಗೊಳ್ಳಲು ಹೊರಡುವಾಗ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಎಲ್ಲಿಲ್ಲದ ಖುಷಿ, ಸಂತೋಷ, ದುಗುಡು ಒಟ್ಟಿಗೆ ಬಂದೆರಗುತ್ತದೆ. ಸುಮಾರು ೨೦ರಿಂದ ೨೫ ದಿನಗಳ ಈ ಪ್ರವಾಸ ರೋಮಾಂಚಕ, ಸಾಹಸ ಹಾಗೂ ಕಷ್ಟಕರದ್ದಾಗಿರುತ್ತದೆ. ಆದರೂ ತಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶದಂತೆ ಪ್ರತಿವರ್ಷ ಚಕ್ಕಡಿ ಬಂಡಿಯಲ್ಲಿ ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರೆಗೆ ಬಂದೇ ಬರುತ್ತೇವೆ ಎನ್ನುತ್ತಾರೆ ಭಕ್ತರು.

ಮೃತ್ಯುಂಜಯ ಮಠದಲ್ಲಿ ತಂಗಿದಂತೆ ದಾರಿಯುದ್ದಕ್ಕೂ ಅಲ್ಲಲ್ಲಿ ದನ ಕಟ್ಟಲು ವ್ಯವಸ್ಥೆ, ನೀರಿನ ಅನುಕೂಲ, ದನಗಳಿಗೆ ಮೇವು ವ್ಯವಸ್ಥೆ ಇರುತ್ತದೆ. ಚಕ್ಕಡಿಯಲ್ಲಿ ದನಗಳಿಗಾಗಿ ಒಣ ಹುಲ್ಲು, ಜೋಳದ ಖನಿಕೆ, ಹೊಟ್ಟು, ತವಡು ಮುಂತಾದ ಆಹಾರ ಹೇರಿಕೊಂಡೆ ಬಂದಿರುತ್ತಾರೆ. ಆದರೆ ಇಡಿ ದಿನ ನಡೆಯುವ ದನಗಳ ಆರೈಕೆ ಮಾಡಿಕೊಂಡು ಅವುಗಳ ಹೊಟ್ಟೆಗೆ ಆಹಾರ, ದಣಿವಾರಿಸಿಕೊಳ್ಳಲು ಅನುಕೂಲ ಇರುವಂತಹ ಸ್ಥಳಗಳಲ್ಲಿ ವಸತಿ ಮಾಡಿ ಮರುದಿನ ಬೆಳಗ್ಗೆ ಮುಂದೆ ಸಾಗುತ್ತಾರೆ. ಇನ್ನು ರೈತರು ತಮ್ಮ ಹೊಟ್ಟೆಗಾಗಿ ಚಕ್ಕಡಿಯಲ್ಲಿ ಕಾಳು, ಕಡಿ, ಹಿಟ್ಟು, ತರಕಾರಿ ಮುಂತಾದವುಗಳನ್ನು ತಂದಿರುತ್ತಾರೆ. ಎತ್ತಿನ ಬಂಡಿ ಎಲ್ಲಿ ನಿಲ್ಲುತ್ತದೆಯೋ ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿ ಮುಂದೆ ಸಾಗುತ್ತಾರೆ. ಶ್ರೀ ಚನ್ನಬಸವಣ್ಣನ ಆಶೀರ್ವಾದಿಂದ ಜಾತ್ರಾ ಮಹೋತ್ಸವವನ್ನು ಅತಿ ಅದ್ಧೂರಿಯಾಗಿ ಆಚರಿಸಿಕೊಂಡು ಸಂತೋಷದಿಂದ ಮರಳಿ ತಮ್ಮ ಊರು ಸೇರುತ್ತಾರೆ.

Share this article