15 ತಿಂಗಳ ನಂತರ ಮುಂಡರಗಿ ಪುರಸಭೆಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ - ಉಪಾಧ್ಯಕ್ಷರ ಮುಂದಿವೆ ಸವಾಲುಗಳು

KannadaprabhaNewsNetwork |  
Published : Aug 25, 2024, 02:08 AM ISTUpdated : Aug 25, 2024, 11:49 AM IST
 ಮುಂಡರಗಿ ಪಟ್ಟಣದ ಹೆಸರೂರು ರಸ್ತೆ ಆಶ್ರಯ ಕಾಲೋನಿಯ ವಾರ್ಡ ನಂಬರ್ 23ರಲ್ಲಿ 3-4 ತಿಂಗಳ ಹಿಂದೆ ಕಾಮಗಾರಿ ಪ್ರಾರಂಭಿಸಿದರೂ  ಇನ್ನೂ ಮುಗಿಯದಿರುವುದು. ಪಟ್ಟಣದ ಹೆಸರೂರು ರಸ್ತೆಯಲ್ಲಿರುವ ವಸತಿ ನಿಲಯದ ಮುಂದಿನ ರಸ್ತಯಲ್ಲಿ ಹಾಕಿರುವ ಕಸ.  | Kannada Prabha

ಸಾರಾಂಶ

ರಾಮಣ್ಣ ಲಮಾಣಿ ಶಾಸಕರಾಗಿದ್ದಾಗ ಸರ್ಕಾರದಿಂದ ಮಂಜೂರಾಗಿದ್ದ ನಗರೋತ್ಥಾನ ಅನುದಾನದ ಕಾಮಗಾರಿ 15 ತಿಂಗಳಾದರೂ ಮುಕ್ತಾಯಗೊಳ್ಳುತ್ತಿಲ್ಲ

 ಮುಂಡರಗಿ :  15 ತಿಂಗಳ ನಂತರ ಮುಂಡರಗಿ ಪುರಸಭೆಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿದ್ದು, ಪಟ್ಟಣದ 23 ವಾರ್ಡ್‌ಗಳಲ್ಲಿಯೂ ಒಂದಿಲ್ಲೊಂದು ಸಮಸ್ಯೆಗಳಿದ್ದು, ಕೆಲವು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಾದ ಸವಾಲುಗಳೂ ಇವೆ.

ಪುರಸಭೆ ವ್ಯಾಪ್ತಿಯಲ್ಲಿ ಸಾವಿರಾರು ಜನ ನಿರಾಶ್ರಿತರಿದ್ದು, ಅವರಿಗೆ ನಿವೇಶನ ನೀಡುವುದಕ್ಕಾಗಿ ರಾಮಕೃಷ್ಣ ದೊಡ್ಡಮನಿ ಶಾಸಕರಾಗಿದ್ದಾಗ 25 ಎಕರೆ ಜಮೀನು ಖರೀದಿಸಿದ್ದರು. ಸುಮಾರು 7-8 ವರ್ಷಗಳಾದರೂ ಇದುವರೆಗೂ ಅಲ್ಲಿ ನಿವೇಶನ ಹಂಚಿಕೆ ಮಾಡಿಲ್ಲ. ಅಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ನಿವೇಶನಗಳಾಗಲಿದ್ದು, ಅಷ್ಟು ಜನ ನಿರಾಶ್ರಿತರಿಗೆ ಆಶ್ರಯ ದೊರೆತಂತಾಗುತ್ತದೆ. ಈ ಕಾರ್ಯ ಹಿಂದಿನ ಆಡಳಿತ ಮಂಡಳಿ ಇದ್ದಾಗಿನಿಂದಲೂ ಸವಾಲಾಗಿ ಪರಿಣಮಿಸಿದೆ.

ಇನ್ನು ಪಟ್ಟಣದಲ್ಲಿ ರಾಮಣ್ಣ ಲಮಾಣಿ ಶಾಸಕರಾಗಿದ್ದಾಗ ಸರ್ಕಾರದಿಂದ ಮಂಜೂರಾಗಿದ್ದ ನಗರೋತ್ಥಾನ ಅನುದಾನದ ಕಾಮಗಾರಿ 15 ತಿಂಗಳಾದರೂ ಮುಕ್ತಾಯಗೊಳ್ಳುತ್ತಿಲ್ಲ. ಪಟ್ಟಣದ 7ನೇ ವಾರ್ಡ್‌, 8ನೇ ವಾರ್ಡ್‌, 17ನೇ ವಾರ್ಡ್‌, ನೂತನ ಉಪಾಧ್ಯಕ್ಷರ 18ನೇ ವಾರ್ಡ್‌, 23ನೇ ವಾರ್ಡ್‌ಗಳೂ ಸೇರಿದಂತೆ ಅನೇಕ ವಾರ್ಡುಗಳಲ್ಲಿ ಈ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಸಾರ್ವಜನಿಕರು ಅನೇಕ ಬಾರಿ ಪುರಸಭೆಗೆ ಮನವಿ ಮಾಡಿದರೂ ಸಹ ಗುತ್ತಿಗೆದಾರರು ಆ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ಸಾರ್ವಜನಿಕರು ಅನೇಕ ಬಾರಿ ಒತ್ತಾಯಿಸುತ್ತಾ ಬಂದಿದ್ದು, ಜಿಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಸಾರ್ವಜನಿಕರು ಇಲ್ಲಿನ ರಸ್ತೆಯ ಮೇಲೆ ಓಡಾಡಲು ಪ್ರತಿದಿನ ಹರಸಾಹಸ ಪಡಬೇಕಾಗಿದೆ. ತಕ್ಷಣವೇ ಈ ಕುರಿತು ಗಮನಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಬೇಕಿದೆ.

ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿಯೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಹಗಲು-ರಾತ್ರಿ ಎನ್ನದೇ ಎಲ್ಲ ವೇ‍ಳೆಯಲ್ಲಿಯೂ ಹೊರಗಡೆಗೆ ಓಡಾಡುವುದು ಅತ್ಯಂತ ಕಷ್ಟದ ಕೆಲಸವಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಸಚಿವ ಡಾ. ಎಚ್.ಕೆ.ಪಾಟೀಲರೇ ಈ ಬಗ್ಗೆ ಪುರಸಭೆ ಹಾಗೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸಿ ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸಲು ಸೂಚಿಸಿದರೂ ಯಾವುದೇ ಕ್ರಮ ನಡೆದಿಲ್ಲ. ಹೀಗಾಗಿ ಈಗಲೂ ಜನ ಬೀದಿ ನಾಯಿಗಳಿಂದ ತೊಂದರೆ ಅನುಭವಿಸುತ್ತಲೇ ಇದ್ದಾರೆ.

ರಾಜ್ಯಾದ್ಯಂತ ಡೆಂಘೀ ಹರಡುತ್ತಿದ್ದರೂ ಸಹ ಪಟ್ಟಣದ ಕೆಲವು ಪ್ರದೇಶಗಳಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಹೆಸರೂರು ರಸ್ತೆಯ ಎಡ ಮತ್ತು ಬಲ ಎರಡೂ ಪಕ್ಕದಲ್ಲಿ ಪಟ್ಟಣದ ವಿವಿಧ ವ್ಯಾಪಾರ, ವಹಿವಾಟಿನ ಕಸತಂದು ಹಾಕುತ್ತಿದ್ದು, ಅಲ್ಲದೇ ಅದೇ ರಸ್ತೆಯ ಹಳ್ಳದ ಮುಂದೆ ದೊಡ್ಡ ಬಯಲು ಜಾಗೆಯಲ್ಲಿಯೂ ಸಹ ಅನೇಕ ಕಸ ತಂದು ಹಾಕಿದ್ದು ಅದರ ಎದುರಿನಲ್ಲಿಯೇ ಕಾಲೇಜು ವಿದ್ಯಾರ್ಥಿನಿಯರಿಗೆ ವಸತಿ ನಿಲಯವಿದೆ. ಅಲ್ಲಿ ಕಸ ಸ್ವಚ್ಛಗೊಳಿಸುವುದರ ಜತೆಗೆ ಸಿಸಿ ಕ್ಯಾಮೆರಾ ಅಳವಡಿಸಿ ಕಸ ಹಾಕುವವರ ವಿರುದ್ಧ ಕ್ರಮ ಜರುಗಿಸಲು ಮುಂದಾಗಬೇಕಿದೆ. ಪಟ್ಟಣದಲ್ಲಿ ಮನೆ ಮನೆಗೆ ಶೌಚಾಲಯ ನಿರ್ಮಾಣಕ್ಕೆ ಪುರಸಭೆಯಿಂದ ಕೋಟ್ಯಾಂತರ ಧನ ಸಹಾಯ ನೀಡಿದ್ದರೂ ಸಹ ಇನ್ನೂ ಅನೇಕರು ಬಯಲು ಬಹಿರ್ದೆಸೆಗೆ ಹೋಗುತ್ತಿರುವುದು ಕಂಡು ಬರುತ್ತಿದೆ. ಅಲ್ಲದೇ ಕೆಲವರಿಗೆ ಶೌಚಾಲಯ ನಿರ್ಮಾಣಕ್ಕೆ ಅನಾನುಕೂಲತೆಗಳಿರುವುದರಿಂದ ಸಾಮೂಹಿಕ ಶೌಚಾಲಯಕ್ಕೆ ಸರಿಯಾದ ವ್ಯವಸ್ಥೆಯಾಗಬೇಕಿದೆ. ಎಲ್ಲವನ್ನೂ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹೇಗೆ ನಿಭಾಯಿಸುವರೋ ಕಾದು ನೋಡಬೇಕಿದೆ.

ತಾವು ತಕ್ಷಣವೇ ಪುರಸಭೆ ಅಧಿಕಾರಿ ಹಾಗೂ ಪೌರ ಕಾರ್ಮಿಕರ ಸಭೆ ಕರೆದು ಪಟ್ಟಣದಲ್ಲಿನ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಹಾಗೂ ಆಶ್ರಯ ನಿವೇಶ ಹಂಚಿಕೆ, ನಗರೋತ್ಥಾನ ಕಾಮಗಾರಿಗಳ ವಿಳಂಬ, ಸ್ವಚ್ಛತೆ ಸೇರಿದಂತೆ ಎಲ್ಲ ವಿಷಯಗಳ ಕುರಿತು ಚರ್ಚಿಸಿ ಹಂತ ಹಂತವಾಗಿ ಎಲ್ಲ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ನಿರ್ಮಲಾ ಕೊರ್ಲಹಳ್ಳಿ, ನಾಗೇಶ ಹುಬ್ಬಳ್ಳಿ ತಿಳಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ