ಕನ್ನಡಪ್ರಭ ವಾರ್ತೆ ಪಾಂಡವಪುರ
ಎನ್‌ಎಸ್‌ಎಸ್ ಶಿಬಿರಗಳ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಚಿಂತನೆಗಳನ್ನು ಬೆಳೆಸುವ ಕೆಲಸವನ್ನು ಕನ್ನಡ ಅಧ್ಯಾಪಕರಾದ ಚಲುವೇಗೌಡರು ಮಾಡಿದ್ದಾರೆ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜೇಗೌಡ ಹೇಳಿದರು.ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಭಾನುವಾರ ನಡೆದ ನಿವೃತ್ತ ಉಪನ್ಯಾಸಕ ಎನ್.ಚಲುವೇಗೌಡ ಅಭಿನಂದನೆ ಹಾಗೂ ಛಲಗಾರ ಚಲುವ ಅಭಿನಂದನಾ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅವರ ಆದರ್ಶ, ವಿಶ್ವಮಾನವ ಸಂದೇಶವನ್ನು ಮೈಗೂಡಿಸಿಕೊಂಡು ಸಾರ್ಥಕ ಜೀವನ ಸಾಧಿಸಿದ್ದಾರೆ. ಕನ್ನಡ ಉಪನ್ಯಾಸಕರಾಗಿ ವೃತ್ತಿಯ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವ ಜತೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ನಾಡು-ನುಡಿ, ನೆಲೆ-ಜಲ ವಿಚಾರಗಳಿಗೆ ಧಕ್ಕೆಯಾಗದಂತೆ ಸೇವೆಸಲ್ಲಿಸಿದ್ದಾರೆ ಎಂದರು.ಉಪನ್ಯಾಸಕರಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಶಿಬಿರ ನಡೆಸುವ ಮೂಲಕ ಮಕ್ಕಳಲ್ಲಿ ಶಿಸ್ತು, ಸಂಯಮ ಬೆಳೆಸುವ ಜತೆಗೆ ದೇಶ ಪ್ರೇಮ ಬೆಳೆಸುವ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಮಾತನಾಡಿ, ಹೃದಯವಂತಿಕೆ, ಸಮಾಜವನ್ನು ಪ್ರೀತಿಸುವ ಮನೋಭಾವ ಹಾಗೂ ಧನ್ಯತಾ ಭಾವನೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಸಮಾಜ ಸದಾ ಗೌರವಿಸುವ ಕೆಲಸ ಮಾಡುತ್ತದೆ. ಅಂತವರ ಸಾಲಿನಲ್ಲಿ ಚಲುವೇಗೌಡರು ನಿಲುತ್ತಾರೆ ಎಂದು ಬಣ್ಣಿಸಿದರು.ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಪರಿಸ್ಥಿತಿ ಅನಾನೂಕೂಲ ಇರುವಂತಹ ಸ್ಥಳಗಳಲ್ಲಿ ಪ್ರತಿಯೊಬ್ಬರು ಸಾಹಸಿಗಳಾಗುತ್ತಾರೆ. ಹಾಗೆಯೇ ಚಲುವೇಗೌಡರು ತುಂಬ ಕಷ್ಟವನ್ನು ಅನುಭವಿಸಿ ಹೋರಾಟದ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ನಿವೃತ್ತಿಯ ನಂತರ ಪ್ರತಿಯೊಬ್ಬರು ಹೊಸ ಬದುಕು ಆರಂಭಿಸಬೇಕೆ. ಅದನ್ನು ಬಿಟ್ಟು ನಿವೃತ್ತಿಯ ನಂತರ ನಮಗೆ ವಯಸ್ಸಾಗಿದೆ ಮುಂದೆ ಸಾವು ಬರುತ್ತಿದೆ ಎಂಬ ಭಾವನೆಯನ್ನು ದೂರ ಮಾಡಬೇಕು ಎಂದು ಸಲಹೆ ನೀಡಿದರು.ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ಮಾತನಾಡಿದರು. ಇದೇ ವೇಳೆ ಎನ್.ಚಲುವೇಗೌಡರ ಅವರ ಕುರಿತ ಛಲಗಾರ ಚಲುವ ಎಂಬ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು. ನಿವೃತ್ತ ಉಪನ್ಯಾಸಕ ಎನ್.ಚಲುವೇಗೌಡ ದಂಪತಿಯನ್ನು ಅಭಿನಂಧಿಸಲಾಯಿತು.
ಸಮಾರಂಭದಲ್ಲಿ ವಿದ್ಯಪ್ರಚಾರ ಸಂಘದ ಕಾರ್‍ಯದರ್ಶಿ ಕೆ.ಬಿ.ಬಸವರಾಜು, ಪ್ರೊ.ಎಚ್.ಆರ್.ತಿಮ್ಮೇಗೌಡ, ತಹಸೀಲ್ದಾರ್ ಸಂತೋಷನ್, ಭುವನೇಶ್ವರಿ, ಪ್ರೊ.ಬಿ.ನಾರಾಯಣಗೌಡ, ಎಸ್.ನಾಗರಾಜು, ಚಿಕ್ಕಮರಳಿಬೋರೇಗೌಡ, ಜಿ.ಉಮೇಶ್, ಲೋಕೇಶ್‌ಚಂದಗಾಲು, ಎಸ್.ಕೃಷ್ಣಸ್ವರ್ಣಸಂದ್ರ ಸೇರಿದಂತೆ ವಿದ್ಯಾ ಪ್ರಚಾರ ಸಂಘದ ನಿರ್ದೇಶಕರು, ಬಂಧುಗಳು ಹಾಜರಿದ್ದರು.