ಶೈಕ್ಷಣಿಕವಾಗಿ ಹಿಂದುಳಿದ, ಬಡತನ, ಮೌಢ್ಯ, ಬಾಲ್ಯ ವಿವಾಹದಂತಹ ಪಿಡುಗು ಹೆಚ್ಚಿರುವ ಚಾಮರಾಜನಗರ ಜಿಲ್ಲೆಯ ಸಮಸ್ಯೆಗಳು ಪರಿಹಾರವಾಗಬೇಕಾದರೆ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು, ಉನ್ನತ ಶಿಕ್ಷಣದ ದಾಖಲಾತಿ ಸರಾಸರಿ ಏರಿಕೆಯಾಗಬೇಕು. ಇದು ಸಾಧ್ಯ ಮಾಡಲು ವಿಶ್ವವಿದ್ಯಾಲಯ ಸ್ಥಾಪಿಸಿ ಉನ್ನತ ಶಿಕ್ಷಣ ಬಲಪಡಿಸಬೇಕು.
ದೇವರಾಜು ಕಪ್ಪಸೋಗೆ
ಚಾಮರಾಜನಗರ : ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ, ಬಡತನ, ಮೌಢ್ಯ, ಬಾಲ್ಯ ವಿವಾಹದಂತಹ ಪಿಡುಗು ಹೆಚ್ಚಿರುವ ಚಾಮರಾಜನಗರ ಜಿಲ್ಲೆಯ ಸಮಸ್ಯೆಗಳು ಪರಿಹಾರವಾಗಬೇಕಾದರೆ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು, ಉನ್ನತ ಶಿಕ್ಷಣದ ದಾಖಲಾತಿ ಸರಾಸರಿ ಏರಿಕೆಯಾಗಬೇಕು. ಇದು ಸಾಧ್ಯ ಮಾಡಲು ವಿಶ್ವವಿದ್ಯಾಲಯ ಸ್ಥಾಪಿಸಿ ಉನ್ನತ ಶಿಕ್ಷಣ ಬಲಪಡಿಸಬೇಕು.
- ಹೀಗಂತ ಭಾವಿಸಿ ರಾಜ್ಯ ಸರ್ಕಾರ ಎರಡು ವರ್ಷಗಳ ಹಿಂದೆ ಚಾಮರಾಜನಗರ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ತಂದಿತು. ವಿವಿಯೇನೋ ಅಸ್ತಿತ್ವಕ್ಕೆ ಬಂತು. ಆದರೆ, ಇಲ್ಲಿ ಇಂದಿಗೂ ಒಬ್ಬರೂ ಕಾಯಂ ಬೋಧಕರಿಲ್ಲ. ಅನುದಾನದ ತೀವ್ರ ಕೊರತೆಯಿಂದ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ.
ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಚಾಮರಾಜನಗರ ಜಿಲ್ಲೆಯ 22 ಪದವಿ ಕಾಲೇಜುಗಳನ್ನು ಸೇರಿಸಿ 2023ರಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯವನ್ನು ಹಿಂದಿನ ಸರ್ಕಾರ ಸ್ಥಾಪಿಸಿತ್ತು. ಇದೇ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 10 ಹೊಸ ವಿವಿಗಳನ್ನು ಸ್ಥಾಪಿಸಿದ ಆಗಿನ ಸರ್ಕಾರ ಒಂದು ರೀತಿ ಶೂನ್ಯ ಬಜೆಟ್ ಪರಿಕಲ್ಪನೆಯಲ್ಲಿ ಅರ್ಥಾತ್ ಯಾವುದೇ ಜಮೀನು, ಕಟ್ಟಡ, ಬೋಧಕ, ಬೋಧಕೇತರ ಸಿಬ್ಬಂದಿ, ಮೂಲಸೌಕರ್ಯ, ಅನುದಾನ ಸೇರಿದಂತೆ ಏನನ್ನೂ ಕೇಳುವಂತಿಲ್ಲ ಎಂಬ ಷರತ್ತು ವಿಧಿಸಿತ್ತು.
ಇದೇ ಷರತ್ತಿನಲ್ಲೇ ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ಚಾಮರಾಜನಗರ ವಿಶ್ವವಿದ್ಯಾಲಯವು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.
ಒಂದೆಡೆ ಈ ವಿವಿಗೆ ಲಭಿಸಿರುವುದು ಕೇವಲ 22 ಕಾಲೇಜುಗಳು. ಇವುಗಳಿಂದ ಬರುವ ವಾರ್ಷಿಕ ಸಂಯೋಜನಾ ಶುಲ್ಕ, ವಿದ್ಯಾರ್ಥಿಗಳ ದಾಖಲಾತಿ ಅನುಮೋದನಾ ಶುಲ್ಕ, ವಿದ್ಯಾರ್ಥಿಗಳಿಂದ ಪಡೆಯುವ ಪರೀಕ್ಷಾ ಶುಲ್ಕ ಇಷ್ಟೇ ಈ ವಿವಿಯ ಆದಾಯದ ಸಂಪನ್ಮೂಲಗಳು. ಇದರಿಂದ ಬರುವ ಹಣದಲ್ಲಿ ವಿವಿಯ ಅತಿಥಿ ಉಪನ್ಯಾಸಕರು, ಹೊರಗುತ್ತಿಗೆ ನೌಕರರಿಗೂ ವೇತನ ನೀಡಲು ಕಷ್ಟವಾಗುತ್ತಿದೆ. ಒಬ್ಬರೂ ಕಾಯಂ ಬೋಧಕರಿಲ್ಲ. ಸರ್ಕಾರದಿಂದ ಯಾವುದೇ ಹುದ್ದೆಗಳ ಮಂಜೂರಾತಿಯೂ ದೊರೆತಿಲ್ಲ.
ಹಿಂದಿನ ಸರ್ಕಾರದ ಷರತ್ತುಗಳನ್ನು ತೋರಿಸಿಕೊಂಡು ಈಗಿನ ಸರ್ಕಾರವೂ ವಿವಿಗಳಿಗೆ ಹೊಸ ಕ್ಯಾಂಪಸ್, ಸೂಕ್ತ ಅನುದಾನ ಸೇರಿದಂತೆ ವಿವಿಯ ಯಾವ ಬೇಡಿಕೆ, ಪ್ರಸ್ತಾವನೆಗಳಿಗೂ ಮನ್ನಣೆ ನೀಡುತ್ತಿಲ್ಲ. ಬದಲಿಗೆ ಮುಚ್ಚುವ ಆಲೋಚನೆ ನಡೆಸಿರುವುದು ಜಿಲ್ಲೆಯ ಜನರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ದಾಖಲಾತಿ ದುಪ್ಪಟ್ಟು:
ಜಿಲ್ಲೆಯಲ್ಲಿ ವಿವಿ ಆದ ಬಳಿಕ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಅದರಲ್ಲೂ ಹೆಣ್ಣುಮಕ್ಕಳ ದಾಖಲಾತಿ ಹೆಚ್ಚಾಗುತ್ತಿದೆ. ಈ ವಿವಿ ಸ್ಥಾಪನೆಗೆ ಮುನ್ನ ಚಾಮರಾಜನಗರ ಜಿಲ್ಲೆಯ 1500 ವಿದ್ಯಾರ್ಥಿಗಳು ಮೈಸೂರು ವಿವಿಯಲ್ಲಿ ಪದವಿ ಶಿಕ್ಷಣಕ್ಕೆ ನೋಂದಾಯಿಸಿಕೊಂಡಿದ್ದರು. ಚಾಮರಾಜನಗರ ಪ್ರತ್ಯೇಕ ವಿವಿಯಾದ ಬಳಿಕ 2023ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ 2,484ಕ್ಕೆ ಏರಿಕೆಯಾಗಿದೆ.
ಸಂಯೋಜಿತ ಕಾಲೇಜುಗಳೂ ಸೇರಿದಂತೆ ಒಟ್ಟಾರೆಯಾಗಿ ಸುಮಾರು 7500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಮಹಿಳಾ ವಿದ್ಯಾರ್ಥಿಗಳೇ ಹೆಚ್ಚು. ಅವರು 4,281 ಮಂದಿ ಇದ್ದರೆ, ಪುರುಷ ವಿದ್ಯಾರ್ಥಿಗಳ ಸಂಖ್ಯೆ 3,371. ಗಡಿ ಭಾಗದ ಹಾಗೂ ಕಾಡಂಚಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದಿದ್ದಾರೆ. ಹಣಕಾಸು ಕೊರತೆಯಿಂದ ಸರ್ಕಾರ ಈ ವಿವಿ ಮುಚ್ಚಿದರೆ ಇಂತಹ ಸಾವಿರಾರು ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಶಿಕ್ಷಣ ತಜ್ಞರು, ಅಧಿಕಾರಿಗಳು.
ಅತಿಥಿ ಉಪನ್ಯಾಸಕರೇ ಗಟ್ಟಿ:
ವಿವಿಯಲ್ಲಿ ಸದ್ಯ 14 ಸ್ನಾತಕೋತ್ತರ ಪದವಿ ಕೋರ್ಸ್‌ಗಳು, ಏಳು ಪದವಿ ಕೋರ್ಸುಗಳಿದ್ದು ಇವುಗಳ ಬೋಧನೆಗೆ ಒಬ್ಬರೂ ಕಾಯಂ ಪ್ರಾಧ್ಯಾಪಕರಿಲ್ಲ. 63 ಮಂದಿ ಅತಿಥಿ ಬೋಧಕರೇ ಪಾಠ ಮಾಡಲು ಆಧಾರವಾಗಿದ್ದಾರೆ. 44 ಗುತ್ತಿಗೆ ಆಧಾರದ ಬೋಧಕೇತರ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ವಿವಿಯ ಆಂತರಿಕ ಆದಾಯದಲ್ಲೇ ತಕ್ಕಮಟ್ಟಿಗೆ ಕಾರ್ಯನಿರ್ವಹಿಸುತ್ತಿರುವ ವಿವಿಯಲ್ಲಿ ಹಿಂದುಳಿದ, ದಲಿತ ಹಾಗೂ ಕಾಡಂಚಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಸರ್ಕಾರ ಈ ವಿವಿಯನ್ನು ಮುಚ್ಚುವ ಆಲೋಚನೆ ಬದಲು ಹಿಂದಿನ ಸರ್ಕಾರದಲ್ಲಿ ಹಂಚಿಕೆಯಾಗಿದ್ದ 2 ಕೋಟಿ ರು.ಗಳ ಬಿಡುಗಡೆ ಜೊತೆಗೆ ಇನ್ನಷ್ಟು ಆರ್ಥಿಕ ನೆರವು ನೀಡಬೇಕು. ಇದರಿಂದ ಬರುವ ವರ್ಷಗಳಲ್ಲಿ ವಿವಿ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎನ್ನುವುದು ಸ್ಥಳೀಯರ ಮನವಿ.
ಉನ್ನತ ಶಿಕ್ಷಣದಲ್ಲಿ ಜಿಲ್ಲೆ ತೀರಾ ಹಿಂದೆ
ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಚಾಮರಾಜನಗರ ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ (ಶೇ.10.9) ತೀರಾ ಕಡಿಮೆ. ಜಿಲ್ಲೆಯ 100 ವಿದ್ಯಾರ್ಥಿಗಳ ಪೈಕಿ 10ರಿಂದ 11 ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯುವತ್ತ ಆಸಕ್ತಿ ತೋರುತ್ತಿದ್ದಾರೆ. 2009-10ರಲ್ಲಿ ಅಂದಿನ ಕೇಂದ್ರ ಸರ್ಕಾರ ಜಿಲ್ಲಾವಾರು ಜಿಇಆರ್ (ಗ್ರಾಸ್ ಎನ್‌ರೋಲ್‌ಮೆಂಟ್ ರೇಶಿಯೋ) ಅಧ್ಯಯನ ನಡೆಸಿದಾಗ ಇದು ಬೆಳಕಿಗೆ ಬಂತು. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಜ್ಞಾನ ಆಯೋಗಕ್ಕೆ ಸೂಚಿಸಿತು.
ಆಯೋಗವು ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಜಿಲ್ಲೆಯು ಶೈಕ್ಷಣಿಕ ಪ್ರಗತಿ ಸಾಧಿಸಬಹುದು ಎಂಬ ಶಿಫಾರಸು ಮಾಡಿತ್ತು. ಈ ವರದಿ ಹಿನ್ನೆಲೆಯಲ್ಲಿ ಮೈಸೂರು ವಿವಿಯು ಚಾಮರಾಜನಗರ ಜಿಲ್ಲೆಯಲ್ಲಿ ತಾತ್ಕಾಲಿಕ ಕಟ್ಟಡವೊಂದರಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪಿಸಿತ್ತು. ನಂತರ 2016ರಲ್ಲಿ 54 ಎಕರೆ ಪ್ರದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಅಧ್ಯಯನ ಕೇಂದ್ರವಾಯಿತು. ಬಳಿಕ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಸೇರಿದಂತೆ ಇತರೆ ರಾಜಕೀಯ ನಾಯಕರ ಪರಿಶ್ರಮದಿಂದ 2023ರ ಮಾ.23ರಲ್ಲಿ ಹಿಂದಿನ ಸರ್ಕಾರ ಚಾಮರಾಜನಗರ ವಿವಿ ಸ್ಥಾಪನೆ ಮಾಡಿತು.
ಬುಡಕಟ್ಟು ಜನರಿಗೆ ವಿವಿ ಅನುಕೂಲ
ಚಾಮರಾಜನಗರ ವಿವಿ ಸ್ಥಾಪನೆಯಾದ ಬಳಿಕ ಅದುವರೆಗೆ ಶಿಕ್ಷಣಕ್ಕಾಗಿ ಜಿಲ್ಲೆ ಬಿಟ್ಟು ಹೊರಗೆ ಹೋಗದ ಕಾಡಂಚಿನ ಜನ, ಬುಡಕಟ್ಟು ಜನಾಂಗದವರ ಮಕ್ಕಳೂ ಉನ್ನತ ಶಿಕ್ಷಣಕ್ಕೆ ಬರುವಂತಾಗಿದೆ. ಆಂತರಿಕ ಅನುದಾನದಲ್ಲೇ ತಕ್ಕಮಟ್ಟಿಗೆ ಸುಸೂತ್ರವಾಗಿ ನಡೆಯುತ್ತಿದೆ. ಸದ್ಯ ಎಂಕಾಂ, ಎಂಬಿಎ ಕೋರ್ಸ್‌ಗಳಿಗೆ ಭಾರೀ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಜಿಲ್ಲೆಯಿಂದ ಹೊರಗೆ ಹೋಗುವುದನ್ನು ತಪ್ಪಿಸಲು ಬಹು ಬೇಡಿಕೆ ಇರುವ ಹೊಸ ಕೋರ್ಸ್‌ಗಳನ್ನು ತೆರೆಯಲು ಕ್ರಮ ವಹಿಸಲಾಗುತ್ತಿದೆ.
- ಡಾ.ಎಂ.ಆರ್.ಗಂಗಾಧರ್, ಚಾಮರಾಜನಗರ ವಿವಿ ಕುಲಪತಿ
ಸಿಎಂ ಬಳಿಗೆ ನಿಯೋಗನಂಜುಂಡಪ್ಪ ವರದಿಯ ಪ್ರಕಾರ ತೀರಾ ಹಿಂದುಳಿದಿರುವ ಜಿಲ್ಲೆಯಾದ ಚಾಮರಾಜನಗರಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ತೀರಾ ಕಡಿಮೆ ಇದೆ. ಇಂತಹ ಶೈಕ್ಷಣಿಕ ಅಸಮತೋಲನ ಸರಿದೂಗಿಸಲು ವಿವಿಯ ಅಗತ್ಯವಿತ್ತು. ಇದನ್ನು ಮನಗಂಡು ಆರಂಭಿಸಿರುವ ವಿವಿಯನ್ನು ಈಗಿನ ಸರ್ಕಾರ ಮುಚ್ಚಲು ಮುಂದಾದರೆ ಜಿಲ್ಲೆ ಮತ್ತೆ ಹಿಂದುಳಿಯಲಿದೆ. ಇಲ್ಲಿನ ಜನರು ಶಾಪ ಹಾಕುತ್ತಾರೆ. ವಿವಿಯ ಉಳಿವಿಗಾಗಿ ಮುಖ್ಯಮಂತ್ರಿ ಬಳಿಗೆ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಕೊಂಡೊಯ್ಯುತ್ತೇನೆ
–ವೆಂಕಟರಮಣಸ್ವಾಮಿ (ಪಾಪು), ಚಾಮರಾನಗರ ವಿವಿ ಉಳಿಸಿ ಹೋರಾಟ ಸಮಿತಿ ಮುಖಂಡ