-ಎಚ್.ಕೆ.ಬಿ. ಸ್ವಾಮಿ
ಕನ್ನಡಪ್ರಭ ವಾರ್ತೆ ಸೊರಬತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬೆ ಭಕ್ತರಿಗೆ ಮೂಲಭೂತ ಸೌಕರ್ಯ ಎನ್ನುವುದು ಮರೀಚಿಕೆಯಾಗಿದೆ. ಈ ಬಾರಿಯ ಜಾತ್ರೆಗೂ ಬಯಲೇ ಶೌಚಾಲಯ, ಸ್ತ್ರೀಯರ ಸೀರೆ ಸ್ನಾನದ ಗೃಹ, ಮರ-ಗಿಡಗಳ ಪೊದೆಯಲ್ಲಿ ದೇಹಬಾಧೆ ತೀರಿಸಿಕೊಳ್ಳುವ ದುಸ್ಥಿತಿ.ಈಗಾಗಲೇ ಅಂಬೆಯ ಜಾತ್ರೋತ್ಸವದ ಧಾರ್ಮಿಕ ವಿಧಿ-ವಿಧಾನಗಳಿಗೆ ಚಾಲನೆ ದೊರೆತಿದ್ದು, ಮಾ.೭ ಹೂವಿನ ರಥೋತ್ಸವ, ೮ರಂದು ಮಹಾರಥೋತ್ಸವ ಜರುಗಲಿದೆ. ೧೯೮೪ರಲ್ಲಿ ಬೆತ್ತಲೆ ಸೇವೆ ಪದ್ಧತಿಯ ವಿರುದ್ಧ ಪ್ರಗತಿಪರ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ಜಾತ್ರೆ ಅಲ್ಲದೇ ಸಾರ್ವಜನಿಕ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಗಿತ್ತು. ಆದರೆ ಕಳೆದ ೮ ವರ್ಷಗಳಿಂದ ಬೆತ್ತಲೆಸೇವೆ ಹೊರತುಪಡಿಸಿ ಇತರೆ ಧಾರ್ಮಿಕ ಆಚರಣೆಗಳಿಗೆ ಸಡಿಲಿಕೆ ನೀಡಲಾಗಿದೆ.ಶಿವಮೊಗ್ಗ ಜಿಲ್ಲೆಯ ಮೂರು ಎ ಗ್ರೇಡ್ ದೇವಸ್ಥಾನಗಳಲ್ಲಿ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನವೂ ಒಂದಾಗಿದೆ. ಭಕ್ತರ ರೂಪದಲ್ಲಿ ವರ್ಷಕ್ಕೆ ೨.೫೦ ಕೋಟಿ ರು. ಆದಾಯ ಇದೆ. ಹಣ ಮಾತ್ರ ಮುಜುರಾಯಿ ಇಲಾಖೆ ಖಜಾನೆ ಸೇರುತ್ತದೆ. ಇದರಿಂದ ಭಕ್ತರಿಗೆ ಮೂಲಭೂತ ಸೌಲಭ್ಯಗಳಿಂದ ವಂಚಿಸಲಾಗಿದೆ.
ದೇವಿಯ ದರ್ಶನಕ್ಕೆಂದು ಬರುವ ಭಕ್ತರು ರಥಬೀದಿಯಲ್ಲಿಯೇ ಉಳಿಯುತ್ತಾರೆ. ಗ್ರಾಮದ ಕಿರು ರಸ್ತೆ, ಕೃಷಿ ಜಮೀನುಗಳಲ್ಲಿ ದೇಹ ಬಾಧೆ ಮುಗಿಸುತ್ತಾರೆ. ರಥ ಬೀದಿ ಆಜುಬಾಜಿನಲ್ಲಿ ಅಡುಗೆ ತಯಾರಿಸುವುದರಿಂದ ಇಡೀ ಪ್ರದೇಶ ಮಲೀನವಾಗುತ್ತದೆ. ಬಯಲಿನಲ್ಲಿಯೇ ಸ್ನಾನ ಮಾಡುತ್ತಾರೆ. ಮಹಿಳೆಯರು ಬಟ್ಟೆ ಬದಲಾಯಿಸುವಾಗ ಸುತ್ತಲೂ ಸೀರೆ ಕಟ್ಟಿಕೊಳ್ಳೋ ದುಸ್ಥಿತಿ. ಇದು ಹಿಂದಿನ ಬೆತ್ತಲೆ ಸೇವೆಗಿಂತಲೂ ಹೀನಾಯ ಸ್ಥಿತಿಯಾಗಿದೆ ಎಂದು ಪ್ರಗತಿಪರ ಚಿಂತಕರು ಆಕ್ರೋಷ ವ್ಯಕ್ತಪಡಿಸುತ್ತಾರೆ. ರಾಜ್ಯ ಮತ್ತು ಹೊರ ರಾಜ್ಯದ ಲಕ್ಷಾಂತರ ಭಕ್ತರ ದಂಡು ಜಾತ್ರೆಯ ಸಮಯದಲ್ಲಿ ಆಗಮಿಸುತ್ತಾರೆ. ಆದರೆ ಬೆಟ್ಟದಷ್ಟು ಸಮಸ್ಯೆಗಳು ಪರಿಹಾರ ಕಂಡುಕೊಳ್ಳದೇ ಭಕ್ತಾದಿಗಳು ಯಾತನೆಯಿಂದಲೇ ದೇವಿಯ ದರ್ಶನ ಪಡೆಯುತ್ತಾರೆ. ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ, ವಸತಿ ನಿಲಯ, ವಿದ್ಯುತ್ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳನ್ನು ಪೂರೈಸುವಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಮುಜರಾಯಿ ಇಲಾಖೆ ಸಂಪೂರ್ಣ ಸೋತಿದೆ.ಮಿನಿ ವಾಟರ್ ಟ್ಯಾಂಕ್, ತೆರೆದ ಬಾವಿಯಲ್ಲಿ ಗಲೀಜು :ಗ್ರಾಮದಲ್ಲಿರುವ ೨ ಮಿನಿ ವಾಟರ್ ಟ್ಯಾಂಕ್ ಮತ್ತು ಸರ್ಕಲ್‌ನಲ್ಲಿರುವ ತೆರೆದ ಬಾವಿಯಲ್ಲಿ ನೀರಿದ್ದರೂ ಹುಳು, ಉಪ್ಪಟಗಳಿಂದ ಬಳಸಲು ಯೋಗ್ಯವಾಗಿಲ್ಲ. ಮಿನಿ ವಾಟರ್ ಟ್ಯಾಂಕ್ ಸ್ವಚ್ಛತೆ ಕಂಡಿಲ್ಲ. ಅಲ್ಲದೇ ಚಂದ್ರಗುತ್ತಿ ಗ್ರಾಮದ ಮುಖ್ಯರಸ್ತೆ ಸೇರಿದಂತೆ ರಥಬೀದಿಯ ಆಜುಬಾಜಿನಲ್ಲಿ ಚರಂಡಿ ಕಸ-ಕಡ್ಡಿಗಳಿಂದ ಕೊಳೆತು ಹುಳುಗಳ ಆವಾಸಸ್ಥಾನವಾಗಿ ದುರ್ನಾತ ಬೀರುತ್ತವೆ. ಪ್ರತೀ ವರ್ಷ ಬರುವ ದೇವಿಯ ಭಕ್ತರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ. ಇದಕ್ಕೆ ಸ್ಥಳೀಯ ಗ್ರಾ.ಪಂ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡದಿರುವುದು ಕಾರಣವಾಗಿದೆ.ಉಧೋ... ಉಧೋ.... ಎಂದು ಉಸುರುತ್ತಾ ಬರುವ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ರೇಣುಕೆ. ಆದರೆ ತನ್ನ ನೆಲೆವೀಡಿನಲ್ಲಿ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ಬಡವಾಗುತ್ತಿರುವ ಚಂದ್ರಗುತ್ತಿ ಗ್ರಾಮದ ಅಭಿವೃದ್ಧಿ ಸಂಕಲ್ಪ ಮಾಡುವ ಇಚ್ಛಾಶಕ್ತಿ ಸ್ಥಳೀಯ ಆಡಳಿತಕ್ಕಾಗಲೀ, ಮುಜರಾಯಿ ಇಲಾಖೆಗಾಗಲೀ ಇಲ್ಲದಿರುವುದು ಭಕ್ತರ ಬೇಸರಕ್ಕೆ ಕಾರಣವಾಗಿದೆ.ರೇಣುಕಾದೇವಿ ಕ್ಷೇತ್ರದಲ್ಲಿ ಕಲ್ಯಾಣ ಮಂಟಪ, ಪ್ರವಾಸಿ ಮಂದಿರ ಇದೆ. ಆದರೆ ಯಾವುದೇ ವ್ಯವಸ್ಥೆ ಇಲ್ಲ. ಶೌಚಾಲಯಗಳು ಶುಚಿತ್ವ ಇಲ್ಲದೇ ಗಬ್ಬು ನಾರುತ್ತವೆ. ಗ್ರಾಮಾಭಿವೃದ್ಧಿಯ ವಿವಿಧ ಯೋಜನೆಗಳಿಗೆ ನೀಡುವ ಹಣವನ್ನು ಸ್ವಚ್ಛತೆಗೆ ವಿನಿಯೋಗಿಸುವ ಮೂಲಕ ಶುಚಿತ್ವ ಕಾಯ್ದುಕೊಳ್ಳಬಹುದು. ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಚಿಂತಿಸುವ ಅವಶ್ಯಕತೆ ಇದೆ- ಸಂಗಪ್ಪ ಹವಾಲ್ದಾರ್ ಹಂಸಬಾವಿ, ದೇವಿ ಭಕ್ತ
ಕೋಟ್ :-2ಚಂದ್ರಗುತ್ತಿ ಗ್ರಾಮ ಮೂಲಭೂತ ಸಮಸ್ಯೆಗಳಿಂದ ಹೊರಬಂದಿಲ್ಲ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವಸತಿ ಗೃಹಗಳು ಜಾತ್ರೆಗೆ ಮಾತ್ರ ಸೀಮತವಾಗದೇ ಭಕ್ತರಿಗೆ ನಿರಂತರ ಉಪಯೋಗವಾಗಬೇಕು. ದೇವಸ್ಥಾನದ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಬೇಕೆಂದು ರಾಜ್ಯ ಸರ್ಕಾರ ಹೇಳುತ್ತಿದೆ. ಇದು ಮುಜರಾಯಿ ಮತ್ತು ಪ್ರಾಚ್ಯವಸ್ತು ಇಲಾಖೆಗೆ ಸಂಬಂಧ ಪಡುತ್ತದೆಯೇ ಎನ್ನುವುದನ್ನು ತಿಳಿಸಿಲ್ಲ– ಟಿ.ರಾಜಪ್ಪ ಮಾಸ್ತರ್ ಸೊರಬ, ಪ್ರಗತಿಪರ ಸಂಘಟನೆಗಳ ಹೋರಾಟಗಾರ
ಜಾತ್ರಾ ಸಮಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಾಗರ ಎಸಿ ಆದೇಶದ ಮೇರೆಗೆ ಮೊಬೈಲ್ ಶೌಚಾಲಯ ಅಳವಡಿಸಲಾಗಿದೆ. ಸ್ವಚ್ಛತೆ, ಬೀದಿ ದೀಪ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಸರ್ಕಾರದಿಂದ ೨.೮೪ ಲಕ್ಷ ರು.ಗಳು ಮಂಜೂರಾಗಿದೆ. ಹಣ ಬಿಡುಗಡೆಯಾದ ತಕ್ಷಣ ಮೂಲಭೂತ ಸಮಸ್ಯೆಗಳಿಗೆ ವಿನಿಯೋಗಿಸಲಾಗುವುದು– ಪ್ರಮೀಳಾಕುಮಾರಿ, ಶ್ರೀ ರೇಣುಕಾಂಬಾ ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ