ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ಬಿ ಎನ್ ಚಂದ್ರಶೇಖರ್

KannadaprabhaNewsNetwork | Published : Aug 15, 2024 1:48 AM

ಸಾರಾಂಶ

ಬೇಲೂರಿನ ಅರ್ಬನ್ ಕೋ- ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಿ ಎನ್ ಚಂದ್ರಶೇಖರ್‌ರವರು ಒಂದು ಮತದ ಅಂತರದಿಂದ ವಿಜೇತರಾದರು. ೧೩ ಜನ ಸದಸ್ಯರ ಬೆಂಬಲ ಕೋರಿ ಬಿ ಎನ್ ಚಂದ್ರಶೇಖರ್‌ ಹಾಗೂ ಎಸ್ ಕೆ ನಾಗೇಶ್ ಅವರು ನಾಮಪತ್ರ ಸಲ್ಲಿಸಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ ೭ ಮತಗಳನ್ನು ಚಂದ್ರಶೇಖರ್ ಪಡೆದರು. ೬ ಮತಗಳನ್ನು ಪಡೆದ ಎಸ್ ಕೆ ನಾಗೇಶ್ ೧ ಮತದ ಅಂತರದಲ್ಲಿ ಪರಾಭವಗೊಂಡರು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಪಾಂಡುರಂಗ ದೇವಸ್ಥಾನ ರಸ್ತೆಯಲ್ಲಿರುವ ಅರ್ಬನ್ ಕೋ- ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಿ ಎನ್ ಚಂದ್ರಶೇಖರ್‌ರವರು ಒಂದು ಮತದ ಅಂತರದಿಂದ ವಿಜೇತರಾದರು. ೧೩ ಜನ ಸದಸ್ಯರ ಬೆಂಬಲ ಕೋರಿ ಬಿ ಎನ್ ಚಂದ್ರಶೇಖರ್‌ ಹಾಗೂ ಎಸ್ ಕೆ ನಾಗೇಶ್ ಅವರು ನಾಮಪತ್ರ ಸಲ್ಲಿಸಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ ೭ ಮತಗಳನ್ನು ಚಂದ್ರಶೇಖರ್ ಪಡೆದರು. ೬ ಮತಗಳನ್ನು ಪಡೆದ ಎಸ್ ಕೆ ನಾಗೇಶ್ ೧ ಮತದ ಅಂತರದಲ್ಲಿ ಪರಾಭವಗೊಂಡರು.

ಚುನಾವಣಾಧಿಕಾರಿ ಲೀಲಾ ಅವರು ಚಂದ್ರಶೇಖರ್ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು. ಈ ವೇಳೆ ಮಾತನಾಡಿದ ಬ್ಯಾಂಕಿನ ಹಿರಿಯ ಸದಸ್ಯರಾದ ಹೇಮಾವತಿ ಮಂಜುನಾಥ್, ನಮ್ಮ ಬ್ಯಾಂಕಿನಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ನಮ್ಮ ಈ ಬ್ಯಾಂಕಿನಲ್ಲಿ ಚುನಾವಣೆಗಳು ನಡೆಯಬಾರದು ಅವಿರೋಧವಾಗಿ ಆಯ್ಕೆಯಾಗುವ ಕೆಲಸ ಆಗಬೇಕು. ಚುನಾವಣೆ ನಡೆದು ಅಧ್ಯಕ್ಷರಾಗಿರುವವರು ಎಲ್ಲರ ಸಹಕಾರ ಪಡೆದು ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ನಿಕಟ ಪೂರ್ವ ಅಧ್ಯಕ್ಷ ಸ್ವಾಮಿಗೌಡ ಮಾತನಾಡಿ, ಯಾವುದೇ ಸಹಕಾರಿ ಕ್ಷೇತ್ರ, ಬ್ಯಾಂಕ್‌ಗಳಲ್ಲಿ ಅನಿವಾರ್ಯ ಇದ್ದಾಗ ಚುನಾವಣೆ ನಡೆಯುತ್ತದೆ. ಹಿಂದೆ ನಾನು ಅಧ್ಯಕ್ಷನಾಗಿದ್ದಾಗ ಅವರೋಧವಾಗಿ ಆಯ್ಕೆಯಾಗಿದ್ದೆ. ಆದರೆ ಇಂದು ಚುನಾವಣೆ ಮೂಲಕ ಚಂದ್ರಶೇಖರ್ ಅವರು ಜಯಶೀಲರಾಗಿದ್ದಾರೆ. ಈ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡುವುದಾಗಿ ತಿಳಿಸಿದರು.

ನೂತನ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ೪ನೇ ಬಾರಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ನನ್ನೆಲ್ಲಾ ಆಡಳಿತ ವರ್ಗ ಹಾಗೂ ನಿರ್ದೇಶಕರಿಗೆ ಷೇರುದಾರರಿಗೆ ಧನ್ಯವಾದ ಅರ್ಪಿಸುತ್ತೇನೆ. ಈಗಾಗಲೇ ನಮ್ಮ ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿ ವ್ಯವಹಾರ ನಡೆಸುತ್ತಿದ್ದು ಸ್ವಂತ ಕಟ್ಟಡವನ್ನು ಮಾಡುವ ಉದ್ದೇಶದಿಂದ ನನ್ನೆಲ್ಲಾ ನಿರ್ದೇಶಕರ ಸಹಕಾರ ಪಡೆದು ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು. ಅಲ್ಲದೆ ನಮ್ಮ ಬ್ಯಾಂಕ್‌ನಲ್ಲಿ ಸುಮಾರು ೧೦ ಕೋಟಿವರೆಗೂ ಸಾಲಕೊಟ್ಟಿದ್ದು, ದುಡಿಮೆ‌ ಬಂಡವಾಳ ೧೮ ಕೋಟಿಯೊಂದಿಗೆ ವ್ಯವಹಾರ ಮಾಡುತ್ತಿದ್ದು ಈ ೨೩-೨೪ರ ಸಾಲಿನಲ್ಲಿ ೧ ಲಕ್ಷ.೮೦.ಸಾವಿರ ನಿವ್ವಳ ಲಾಭದೊಂದಿಗೆ ವ್ಯವಹಾರ ನಡೆಸುತ್ತಿದ್ದು, ೨೬೦೦ ಜನ ಷೇರುದಾರರು ಇದ್ದು ಇನ್ನು ಹೆಚ್ಚಿನ ಷೇರುದಾರರನ್ನು ಸೇರಿಸಲಾಗುವುದು. ಸಾರ್ವಜನಿಕರು ಸ್ಥಳೀಯ ಬ್ಯಾಂಕುಗಳಲ್ಲಿ ವ್ಯವಹಾರ ಮಾಡುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು. ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಹಜ, ಚುನಾವಣೆ ನಂತರ ಎಲ್ಲರೂ ಬ್ಯಾಂಕಿನ ಸದಸ್ಯರುಗಳಾಗಿ ಇರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷ ಆರ್‌ ಎಸ್ ಸುಬ್ರಹ್ಮಣ್ಯ, ಬಲರಾಮೇಗೌಡ, ಶಿವರಾಜ್, ವಿಜಿಕುಮಾರ್‌, ಪ್ರಸನ್ನ ಲೀಲಾ ವೆಂಕಟೇಶ್, ತಾರಾನಾಥ್, ಸೋಮಶೇಖರ್‌, ಲಕ್ಷ್ಮಣ್ ಗೌಡ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ಶಿವಕುಮಾರ್‌, ಕಲ್ಯಾಣ ಕುಮಾರ್, ಜಯಂತಿ, ತೀರ್ಥಕುಮಾರ್, ಸುರೇಶ್ ಇತರರು ಹಾಜರಿದ್ದರು.

Share this article