ಗದಗ: ಒಂದು ಜೀವ ಬದುಕಿಸಲು ಮತ್ತೊಂದು ಮುಗ್ಧ ಜೀವ ಬಲಿ ತೆಗೆದುಕೊಳ್ಳುವ ಪದ್ಧತಿ ರಾಷ್ಟ್ರ,ಅಂತಾರಾಷ್ಟ್ರ ಮಟ್ಟದಲ್ಲಿ ಹಿಂದಿನಿಂದಲೂ ನಡೆಯುತ್ತಿದೆ.ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ಜಾರಿಯಾಗಿದ್ದು, ಯಾರಾದರೂ ದುಡ್ಡಿಗಾಗಿ ದೇಹದ ಅಂಗಾಂಗ ಮಾರಾಟಕ್ಕೆ ಮುಂದಾದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಪ್ರಾಚಾರ್ಯ ಜೈಹನುಮಾನ ಎಚ್.ಕೆ ಹೇಳಿದರು.
ಅವರು ಗುರುವಾರ ಗದಗ ನಗರದ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಯೂತ್ ರೆಡ್ ಕ್ರಾಸ್ ಹಾಗೂ ಕೆ.ಎಚ್.ಪಾಟೀಲ ಕಿಡ್ನಿ ಕೇರ್ ಸಂಯುಕ್ತಾಶ್ರಯದಲ್ಲಿ ಅಂಗಾಂಗ ದಾನ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಮಾನವ ಅಂಗ ಕಸಿ ಕಾಯಿದೆ 1994 ಪ್ರಕಾರ ಅಂಗಾಂಗ ಮಾರಾಟ ನಿಷೇಧಿಸಲಾಗಿದೆ. ಅಕ್ರಮ ಎಸಗಿದವರ ವಿರುದ್ಧ 5ರಿಂದ 10 ವರ್ಷ ಕಠಿಣ ಶಿಕ್ಷೆ ಮತ್ತು ಇಪ್ಪತ್ತು ಲಕ್ಷದಿಂದ ಒಂದು ಕೋಟಿ ದಂಡ ವಿಧಿಸಲಾಗುವುದು. ಹೀಗಾಗಿ ಅಂಗಾಂಗ ಮಾರಾಟಕ್ಕೆ ಅವಕಾಶವಿಲ್ಲ. ಕ್ಯಾನ್ಸರ್, ಎಚ್.ಐ.ವಿ ಕಾಯಿಲೆ ಹೊರತುಪಡಿಸಿ, ವಯಸ್ಸು,ಲಿಂಗ ಧರ್ಮದ ನಿರ್ಬಂಧವಿಲ್ಲದೆ ಯಾರು ಬೇಕಾದರೂ ದಾನಿಯಾಗಬಹುದು. ಜೀವಿಸಲು ಒಂದು ಕಿಡ್ನಿ ಸಾಕು ಮತ್ತು ವ್ಯಕ್ತಿ ಯಕೃತ್ತಿನ ಅಲ್ಪ ಭಾಗ ದಾನ ನೀಡಿದರೆ, ಈ ಭಾಗ ಮೂರು ವಾರದಲ್ಲಿ ಪುನರುತ್ಪತ್ತಿ ಆಗುತ್ತದೆ. ಅಂಗಾಂಗ ದಾನ ಮಾಡಿದರೆ ದೇಹ ವಿರೂಪಗೊಳ್ಳುವುದಿಲ್ಲ. ಹೀಗಾಗಿ ದಾನದ ಬಳಿಕ ಶವಸಂಸ್ಕಾರದ ವಿಧಿವಿಧಾನಕ್ಕೆ ಯಾವ ಅಡ್ಡಿಯಾಗುವುದಿಲ್ಲ ಎಂಬ ಮನವರಿಗೆ ಮಾಡಬೇಕು ಎಂದರು.
ಕೆ.ಎಚ್. ಪಾಟೀಲ ಕಿಡ್ನಿ ಕೇರ್ ಸಂಸ್ಥೆಯ ಲೀಡ್ ಸರ್ಜನ್ ಮತ್ತು ಕಾರ್ಯಕ್ರಮದ ನಿರ್ದೇಶಕ ಡಾ. ಅವಿನಾಶ ಓದುಗೌಡರ ಮಾತನಾಡಿ, ಮನುಷ್ಯ ಜೀವವಿದ್ದಾಗ ಜೀವಿಸಬಹುದು ಮತ್ತು ಅವನು ಮರಣದ ನಂತರ ಕೂಡ ಅವನ ಕೇವಲವೊಂದು ಅಂಗಾಂಗ ಇನ್ನೊಬ್ಬ ವ್ಯಕ್ತಿಯ ಶರೀರದಲ್ಲಿದ್ದು, ಜೀವಿಸುವ ಅಕಾಶ ಇದೆ. ಆದರೆ, ಯಾವುದೇ ರೀತಿಯ ಅಕ್ರಮ ಹಾಗೂ ಹಣಕ್ಕಾಗಿ ಅಂಗಾಂಗ ದಾನ ಮಾಡದೇ ಅಗತ್ಯವಿರುವ ರೋಗಿಗಳಿಗೆ ತಾವು ಮರಣದ ನಂತರ ಕೆಲವೊಂದು ಅಂಗಾಂಗ ದಾನ ಮಾಡಬಹುದು. ಇಲ್ಲಿ ಯಾವುದೇ ಸ್ವಾರ್ಥ ಮನೋಭಾವನೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುವ ಅವಕಾಶವು ದೊರೆತಿದೆ. ಸತ್ತ ನಂತರ ದೇಹ ಮಣ್ಣಾಗುವ ಅಥವಾ ಸುಟ್ಟು ಬೂದಿಯಾಗುವ ಬದಲು ಮತ್ತೊಬ್ಬರ ದೇಹದಲ್ಲಿ ಬದುಕುಳಿಯಲು ಅವಕಾಶವಿದೆ. ಹೀಗಾಗಿ ಸಮಾಜದಲ್ಲಿ ಕಾನೂನು ವಿದ್ಯಾರ್ಥಿಗಳು ಸಮಾಜದಲ್ಲಿ ಈ ವಿಷಯಗಳ ಕುರಿತು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.ಸ್ಥಳೀಯ ಆಡಳಿತ ಮಂಡಳಿಯ ಚೇರಮನ್ ಎಸ್.ಎ. ಮಾನ್ವಿ, ಡಾ.ಪಿ. ನೂರಾಣಿ, ಜೆಟಿ ಕಾಲೇಜಿನ ಪ್ರಾಚಾರ್ಯ ಪಿ.ಜಿ. ಪಾಟೀಲ, ಉಪನ್ಯಾಸಕ ಡಾ. ವಿಜಯ ಮುರದಂಡೆ, ಡಾ. ಜ್ಯೋತಿ ಸಿ.ವಿ, ಡಾ. ಶ್ರೀನಿವಾಸ ಪಾಲ್ಕೊಂಡ, ಶರತ್ ದರಬಾರೆ ಸೇರಿದಂತೆ ಇತರರಿದ್ದರು.
ದೈಹಿಕ ನಿರ್ದೇಶಕ ಹಾಗೂ ಯೂತ್ ರೆಡ್ ಕ್ರಾಸ್ ಸಂಯೋಜಕ ಡಾ. ಸಿ.ಬಿ.ರಣಗಟ್ಟಿಮಠ ಸ್ವಾಗತಿಸಿದರು. ವಿದ್ಯಾರ್ಥಿ ಚೈತ್ರಾ ಗೌಡರ ನಿರೂಪಿಸಿದರು.