ದಾವಣಗೆರೆ: ಆರೋಗ್ಯವಂತ ಮಾನವನಲ್ಲಿ ದೇಹ ಮತ್ತು ಮನಸ್ಸು ಎರಡೂ ಸಮತೋಲನ ಕಾಪಾಡಿಕೊಂಡಿರುತ್ತವೆ. ವಿವಿಧ ಕಾರಣಗಳಿಂದ ಸಮತೋಲನದಲ್ಲಿ ಏರುಪೇರು ಆಗುತ್ತದೆ. ಆಗ ಸಮತೋಲನವನ್ನು ಮತ್ತೆ ತರುವ ಪ್ರಕ್ರಿಯೆಯಲ್ಲಿ ದೇಹ ಮತ್ತು ಮನಸ್ಸಿನಲ್ಲಿ ಆಗುವ ಬದಲಾವಣೆಗಳನ್ನು ಒತ್ತಡ ಎನ್ನಲಾಗುತ್ತದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಎಚ್.ಹೇಮಾವತಿ ತಿಳಿಸಿದರು.
ನಗರದ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ, ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಗುರುವಾರ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಮಾನಸಿಕ ಒತ್ತಡ-ನಿಭಾಯಿಸುವ ಸುಲಭ ಸೂತ್ರಗಳು ವಿಷಯ ಕುರಿತು ಅವರು ಮಾಹಿತಿ ನೀಡಿದರು.ದೈಹಿಕ ಕಾಯಿಲೆಗಳು, ಜೀವನದಲ್ಲಿ ಬರುವ ವಿವಿಧ ಸಂಕಷ್ಟಗಳು ಉದಾಹರಣೆಗೆ ನಾನಾ ರೀತಿಯ ಸೋಲುಗಳು (ವಿದ್ಯೆ, ನೌಕರಿ, ಪ್ರೇಮ ಪ್ರಕರಣಗಳಲ್ಲಿ), ಅಗಲಿಕೆ (ಸಾವು, ವಿಛ್ಛೇದನ), ಆರ್ಥಿಕ ಮುಗ್ಗಟ್ಟು ಇವುಗಳು ಒತ್ತಡದ ಕಾರಣಗಳು ಎಂದರು.
ದೇಹದಲ್ಲಿ-ನಾನಾ ರೀತಿಯ ನೋವುಗಳು, ಸುಸ್ತು, ನಿದ್ರಾಹೀನತೆ, ಹಸಿವು ಕಡಿಮೆಯಾಗುವುದು, ಲೈಂಗಿಕ ನಿರಾಸಕ್ತಿ, ಮನಸ್ಸಿನಲ್ಲಿ-ಭಯ, ದುಃಖ, ಏಕಾಗ್ರತೆ ಕಡಿಮೆಯಾಗುವುದು, ಮರೆಗುಳಿತನದಿಂದ ಒತ್ತಡ ಪ್ರಕಟಗೊಳ್ಳುತ್ತದೆ. ಸಾಮಾನ್ಯವಾಗಿ ಒತ್ತಡವನ್ನು ಅನಾರೊಗ್ಯಕರವಾಗಿ ನಿರ್ವಹಿಸಲಾಗುತ್ತದೆ. ಉದಾಹರಣೆಗೆ ಸಮಸ್ಯೆಯನ್ನು ಒಪ್ಪಿಕೊಳ್ಳದಿರುವುದು, ಸಮಸ್ಯೆ ಇಲ್ಲ ಎಂದುಕೊಳ್ಳುವುದು, ಇತರರ ಮೇಲೆ ದೋಷ ಹೊರಿಸುವುದು, ಮದ್ಯಪಾನ/ಧೂಮಪಾನ ಮಾಡುವುದು. ಆದರೆ ಇವು ನಿರೀಕ್ಷಿತ ಪರಿಣಾಮ ನೀಡುವುದಿಲ್ಲ ಮತ್ತು ಇನ್ನೂ ಹೆಚ್ಚಿನ ತೊಂದರೆ ಉಂಟುಮಾಡುತ್ತವೆ ಎಂದು ತಿಳಿಸಿದರು.ಒತ್ತಡವನ್ನು ಆರೋಗ್ಯಕರವಾಗಿ ನಿರ್ವಹಿಸುವುದು: ಸಮಸ್ಯೆಯನ್ನು ಒಪ್ಪಿಕೊಳ್ಳುವುದು, ಸಮಸ್ಯೆ ನಿವಾರಣೆಯ ಜವಾಬ್ದಾರಿ ತಾವೇ ಹೊತ್ತುಕೊಳ್ಳುವುದು. ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದು. ಸಮಸ್ಯೆ ಬಗ್ಗೆ ಬಂಧು-ಮಿತ್ರರಲ್ಲಿ ಚರ್ಚೆ ಮಾಡುವುದು, ಇಲ್ಲಿ ತನಕಕೈಗೊಂಡ ಕ್ರಮಗಳು ಫಲ ನೀಡಿದವೋ ಇಲ್ಲವೋ ತಿಳಿಯುವುದು. ಬೇರೆ ಇನ್ನು ಯಾವ ರೀತಿಯಲ್ಲಿ ಬಗೆಹರಿಸಬಹುದು ಎಂದು ಯೋಚಿಸುವುದು ಮತ್ತು ಕ್ರಮಕೈಗೊಳ್ಳುವುದು. ಸಕಾರಾತ್ಮಕವಾಗಿ ಯೋಚಿಸುವುದು, ಭಾವನೆಗಳ ಮೇಲೆ ನಿಯಂತ್ರಣ ಸಾಧಿಸುವುದು. ಆತಂಕ ನಿವಾರಣೆಗಾಗಿ ಧ್ಯಾನ, ಯೋಗ, ವ್ಯಾಯಾಮ, ಸಾಧ್ಯವಾದಂತಹ ಹವ್ಯಾಸಗಳು ಆಟೋಟಗಳು, ಸಂಗೀತ, ನೃತ್ಯ, ಛಾಯಾಗ್ರಹಣ, ಮನೆಯಲ್ಲಿಯೇ ತೋಟಗಾರಿಕೆ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು. ಅಗತ್ಯ ಬಿದ್ದಲ್ಲಿ ಮನೋವೈದ್ಯರಲ್ಲಿ ಆಪ್ತ ಸಮಾಲೋಚನೆ ಪಡೆಯುವುದರಿಂದ ಒತ್ತಡವನ್ನು ಆರೋಗ್ಯಕರವಾಗಿ ನಿರ್ವಹಿಸಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ, ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಜಿ.ಗುರುಪ್ರಸಾದ್, ಡಾ.ರೇವಪ್ಪ, ಡಾ.ಮೃತ್ಯುಂಜಯ, ಸಿದ್ದೇಶ್ವರ ಗುಬ್ಬಿ, ರೊಳ್ಳಿ ಮಂಜುನಾಥ, ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು ಇತರರು ಇದ್ದರು.