ಚನ್ನಗಿರಿ ಪಟ್ಟಣ ಸ್ವಚ್ಛತೆಗಾಗಿ ಪುರಸಭೆ ಜತೆ ಕೈ ಜೋಡಿಸಿ

KannadaprabhaNewsNetwork | Published : Sep 20, 2024 1:51 AM

ಸಾರಾಂಶ

ಚನ್ನಗಿರಿ ಪಟ್ಟಣದ ಗಣಪತಿ ಹೊಂಡದ ಬಳಿ ಪುರಸಭೆ ಹಮ್ಮಿಕೊಂಡಿದ್ದ ಸ್ವಚ್ಛತೆಯೇ ಸೇವೆ-2024 ಮತ್ತು ಅಮ್ಮನ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಸ್ವಚ್ಛತೆಗೆ ಪುರಸಭೆ ವತಿಯಿಂದ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ನಾಗರೀಕರು ಸಹಾ ಪುರಸಭೆಯೊಂದಿಗೆ ಕೈ ಜೋಡಿಸಬೇಕು. ಆಗ ಮಾತ್ರ ಚನ್ನಗಿರಿ ಪಟ್ಟಣವನ್ನು ಸುಂದರ ಮತ್ತು ಹಸಿರು ಪಟ್ಟಣವನ್ನಾಗಿ ರೂಪಿಸಲು ಸಾಧ್ಯ ಎಂದು ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಹೇಳಿದರು.

ಪಟ್ಟಣದ ಗಣಪತಿ ಹೊಂಡದ ಬಳಿ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತೆಯೇ ಸೇವೆ-2024 ಮತ್ತು ಅಮ್ಮನ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪುರಸಭೆಯ ಪೌರಕಾರ್ಮಿಕರು ಪ್ರತಿದಿನವು ಪಟ್ಟಣವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಆದರೂ ಪಟ್ಟಣದ ನಾಗರೀಕರು ತಮ್ಮ ಮನೆಗಳ ಕಸವನ್ನು ಪುರಸಭೆ ಕಸದ ಗಾಡಿಗಳಿಗೆ ಕೊಡದೇ, ಮನಬಂದಂತೆ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಪಟ್ಟಣದ ಸ್ವಚ್ಛತೆ ಕಾಳಜಿ ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಬೇಕು. ಆಗ ಮಾತ್ರ ಸುಂದರ ಪರಿಸರ ನಮ್ಮದಾಗಲಿದೆ ಎಂದರು. ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ ಮಾತನಾಡಿ, ಪುರಸಭೆ ವತಿಯಿಂದ ಪಟ್ಟಣದ 23 ವಾರ್ಡ್‌ಗಳಲ್ಲಿಯೂ ಪ್ರತಿದಿನ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಚ್ಛತೆ ಬಗ್ಗೆ, ಹಸಿಕಸ, ಒಣ ಕಸಗಳ ಬೇರ್ಪಡಿಸಿ ಪುರಸಭೆ ಕಸದ ಗಾಡಿಗಳಿಗೆ ನೀಡುವ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಕಾರ್ಯಕ್ರಮವು ಅಕ್ಟೋಬರ್ 2ರವರೆಗೆ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಕಂದಾಯ ಅಧಿಕಾರಿ ಮಂಜುನಾಥ್, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಕೃಷ್ಣಪ್ಪ, ವಿಜಯ್ ಕುಮಾರ್, ನಾಗರಾಜ್, ದೀಪು, ಸೌಮ್ಯ, ಅಕ್ಷತಾ ಸೇರಿದಂತೆ ಪುರಸಭೆ ಪೌರಕಾರ್ಮಿಕರು, ಸಾರ್ವಜನಿಕರು ಹಾಜರಿದ್ದರು.

*ತ್ಯಾಜ್ಯಗಳ ಸುರಿಯಬೇಡಿ:ಪ್ರಸ್ತುತ ಪಟ್ಟಣದಲ್ಲಿರುವ ಗಣಪತಿ ಹೊಂಡದಲ್ಲಿ ಎಲ್ಲ ಮನೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ. ಗಣೇಶ ಮೂರ್ತಿ ವಿರ್ಸಜನೆಗೆ ಬರುವಂಥವರು ಹೊಂಡದಲ್ಲಿ ಹೂವು, ಹಣ್ಣು-ಕಾಯಿ ಸೇರಿದಂತೆ ಇನ್ನಿತರೆ ತ್ಯಾಜ್ಯಗಳನ್ನು ಹಾಕದೇ ಪರಿಸರಸ್ನೇಹಿ ಗಣಪತಿ ಮೂರ್ತಿಯನ್ನು ಮಾತ್ರ ವಿಸರ್ಜನೆ ಮಾಡಬೇಕು. ಅಲ್ಲದೇ, ಹೊಂಡದ ಸ್ವಚ್ಛತೆ ಕಾಪಾಡಲೂ ಸಹರಿಸಬೇಕು ಎಂದರು.

Share this article