ಚನ್ನಗಿರಿ ಕ್ರೀಡಾಂಗಣಕ್ಕೆ ಕಾಡುತ್ತಿದೆ ಮೂಲ ಸೌಲಭ್ಯಗಳ ಕೊರತೆ

KannadaprabhaNewsNetwork | Published : Apr 18, 2025 12:36 AM

ಸಾರಾಂಶ

ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣಗೊಂಡು 13 ವರ್ಷಗಳೇ ಕಳೆದಿವೆ. ಆದರೆ, ಕ್ರೀಡಾಪಟುಗಳು, ವಾಯು ವಿಹಾರಿಗಳಿಗೆ ಮುಖ್ಯವಾಗಿ ಬೇಕಾದ ಮೂಲಸೌಲಭ್ಯಗಳೇ ಕಲ್ಪಿಸಿಲ್ಲ. ಇದರಿಂದ ಕ್ರೀಡಾಂಗಣವಿದ್ದೂ ಇಲ್ಲದಂತಾಗಿದೆ.

- 13 ವರ್ಷಗಳಿಂದ ಕ್ರೀಡಾಭ್ಯಾಸ, ವಾಯುವಿಹಾರಿಗಳಿಗೆ ತೀವ್ರ ಸಮಸ್ಯೆ । ಮಹಿಳಾ ವ್ಯಾಯಾಮ ಶಾಲೆ ಇದೆ, ತರಬೇತುದಾರರೇ ಇಲ್ಲ!

- ಕ್ರೀಡಾಂಗಣದ 24 ವಾಣಿಜ್ಯ ಮಳಿಗೆಗಳಿಂದ ವಾರ್ಷಿಕ ₹30 ಲಕ್ಷ ಆದಾಯವಿದ್ದರೂ ಅಭಿವೃದ್ಧಿಪಡಿಸಲು ಅಧಿಕಾರಿಗಳಲ್ಲಿ ನಿರಾಸಕ್ತಿ

- - -

* ಬಾ.ರಾ.ಮಹೇಶ್, ಚನ್ನಗಿರಿ ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣಗೊಂಡು 13 ವರ್ಷಗಳೇ ಕಳೆದಿವೆ. ಆದರೆ, ಕ್ರೀಡಾಪಟುಗಳು, ವಾಯು ವಿಹಾರಿಗಳಿಗೆ ಮುಖ್ಯವಾಗಿ ಬೇಕಾದ ಮೂಲಸೌಲಭ್ಯಗಳೇ ಕಲ್ಪಿಸಿಲ್ಲ. ಇದರಿಂದ ಕ್ರೀಡಾಂಗಣವಿದ್ದೂ ಇಲ್ಲದಂತಾಗಿದೆ.

ಈ ಕ್ರೀಡಾಂಗಣದಲ್ಲಿ ಪುರುಷರು, ಮಹಿಳೆಯರು, ಮಕ್ಕಳು, ವಯೋವೃದ್ಧರು ಹೀಗೆ ಎಲ್ಲ ವರ್ಗದ ಜನರೂ ಬೆಳಗಿನ ಜಾವ 4 ಗಂಟೆಯಿಂದಲೇ ವಾಯು ವಿಹಾರ, ಕ್ರೀಡೆ ಮತ್ತು ವ್ಯಾಯಾಮ ಚಟುವಟಿಕೆಗಳಿಗೆ ಆಗಮಿಸುತ್ತಾರೆ. ದಾವಣಗೆರೆ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಇಲ್ಲಿ ಮಹಿಳಾ ವ್ಯಾಯಾಮ ಶಾಲೆ ಆರಂಭಗೊಂಡಿದೆ. ಆದರೆ, ತರಬೇತುದಾರು ಇಲ್ಲದೇ ಮಹಿಳಾ ವ್ಯಾಯಾಮ ಪಟುಗಳ ಆಸಕ್ತಿ, ಸಾಧನೆ ಉದ್ದೇಶಕ್ಕೆ ತಣ್ಣೀರೆರಚಿದಂತಾಗಿದೆ.

2011ರಲ್ಲಿ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ₹1 ಕೋಟಿ ಅನುದಾನದಲ್ಲಿ ಆಗಿನ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಅವರಿಂದ ಕ್ರೀಡಾಂಗಣ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಿದ್ದರು. 2012ರಲ್ಲಿ ಕ್ರೀಡಾಂಗಣ ನಿರ್ಮಾಣಗೊಂಡು, ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ 24 ವಾಣಿಜ್ಯ ಮಳಿಗೆಗಳನ್ನು ಸಹ ನಿರ್ಮಿಸಲಾಯಿತು. ಈ ವಾಣಿಜ್ಯ ಮಳಿಗೆಗಳಿಂದ ವಾರ್ಷಿಕವಾಗಿ ₹30 ಲಕ್ಷ ಆದಾಯ ಬಾಡಿಗೆ ರೂಪದಲ್ಲಿ ಬರುತ್ತಿದೆ. ಈ ಆದಾಯ ಕ್ರೀಡಾಂಗಣ ನಿರ್ವಹಣೆಗೆ ಸಹಕಾರಿಯಾಗಲಿ ಎಂಬ ದೂರದೃಷ್ಠಿತ್ವ ಸಹ ಹೊಂದಲಾಗಿತ್ತು. ಆದರೆ, ಈ ಉದ್ದೇಶ ಮಾತ್ರ ಸಾಫಲ್ಯತೆ ಕಂಡಿಲ್ಲ.

ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಕುಳಿತು ಕೊಳ್ಳಲು ಆಸಗಳಿಲ್ಲ. ಶೌಚಾಲಯ ವ್ಯವಸ್ಥೆಯೇ ಇಲ್ಲ. ಪರಿಣಾಮ ಕ್ರೀಡಾಪಟುಗಳು, ವಾಯುವಿಹಾರಿಗಳು ಕ್ರೀಡಾ ಚಟುವಟಿಕೆ ಮೊಟಕುಗೊಳಿಸಿ, ದೇಹಬಾಧೆ ನಿವಾರಿಸಿಕೊಳ್ಳಲು ಮನೆಗಳ ಶೌಚಾಲಯವನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ.

ಒಳಾಂಗಣ ಕ್ರೀಡಾಂಗಣಕ್ಕೂ ಗರ:

ಇದೇ ಕ್ರೀಡಾಂಗಣದಲ್ಲಿ 2020ರಲ್ಲಿ ₹3.50 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಸಹ ನಿರ್ಮಿಸಲಾಗಿದೆ. ಆದರೆ, ಇಲ್ಲಿ ಯಾವುದೇ ಕ್ರೀಡಾ ಚಟುವಟಿಕೆಗಳು ನಡೆಯದೇ ಹಾಳುಬಿದ್ದಿದೆ. ಈ ತಾಲೂಕು ಕ್ರೀಡಾಂಗಣ ಯುವಜನ ಸೇವಾ ಕ್ರೀಡಾ ಇಲಾಖೆಗೆ ಸೇರಿದೆ. ಕ್ರೀಡಾಂಗಣದ ವಾಣಿಜ್ಯ ಮಳಿಗೆಗಳಿಂದ ಬರುವ ಆದಾಯದಿಂದಲೇ ಕ್ರೀಡಾಂಗಣಕ್ಕೆ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸುವ ಹಣಕಾಸಿನ ಸಂಪನ್ಮೂಲವೂ ಇದೆ. ಆದರೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಆಶಯ ಮಣ್ಣುಪಾಲಾಗುತ್ತಿದೆ ಎಂಬು ಹಿರಿಯ ನಾಗರೀಕರಾದ ಉಮೇಶಣ್ಣ, ಮಹೇಶಣ್ಣ, ಸಿದ್ರಾಮಣ್ಣ, ಸುರೇಶ್, ನಿಖಿಲ್ ಬೇಸರ ವ್ಯಕ್ತಪಡಿಸುತ್ತಾರೆ.

ವಾಯು ವಿಹಾರಿಗಳು ಕ್ರೀಡಾಂಗಣದ ಒಳಗೆ ಬರಲು ಮೂರು ಪ್ರವೇಶ ದ್ವಾರಗಳಿವೆ. ಪ್ರಮುಖವಾಗಿ ಸರ್ಕಾರಿ ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯದ್ವಾರ, ಕ್ರೀಡಾಂಗಣದ ವಾಣಿಜ್ಯ ಮಳಿಗೆಗಳ ಮಧ್ಯದ ದ್ವಾರ ಹಾಗೂ ಕ್ರೀಡಾಂಗಣದ ಕೊನೆಯ ಭಾಗದ ಕಗತೂರು ರಸ್ತೆಯ ಬಳಿಯಿರುವ ದ್ವಾರ. ಈ ಮೂರು ದ್ವಾರಗಳಲ್ಲಿ ಎರಡು ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ. ಕ್ರೀಡಾಂಗಣದ ಕೊನೆಯ ಭಾಗದ ದಾರಿಯ ಬಾಗಿಲು ಮಾತ್ರ ತೆರೆದಿರುತ್ತಾರೆ. ಇದರಿಂದ ಮಕ್ಕಳು ಮತ್ತು ವೃದ್ಧರು ಸುತ್ತಿ ಬಳಸಿ ಕ್ರೀಡಾಂಗಣ ತಲುಪುವಂತಾಗಿದೆ.

- - -

(ಬಾಕ್ಸ್‌-1) * ಪ್ರವೇಶಕ್ಕೆ ಅನುಕೂಲ ಕಲ್ಪಿಸಿ- ಸ್ವಾಮೀಜಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಪ್ರತಿದಿನ ಕ್ರೀಡಾಂಗಣಕ್ಕೆ ವಾಯು ವಿಹಾರಕ್ಕಾಗಿ ಬರುತ್ತಿದ್ದಾರೆ. ಅವರೇ ಹೇಳುವಂತೆ, ಕ್ರೀಡಾಂಗಣದಲ್ಲಿ ಪ್ರಮುಖವಾದ ಬೆಳಕಿನ ವ್ಯವಸ್ಥೆಗಳೂ ಹಳಿತಪ್ಪಿವೆ. ಕ್ರೀಡಾಂಗಣದೊಳಗೆ ವಿಷಜಂತುಗಳು ನುಸುಳುವ ಸಾಧ್ಯತೆ ಇದೆ. ಹೀಗಾಗಿ ಕ್ರೀಡಾಂಗಣದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಶೀಘ್ರ ಆಗಬೇಕಿದೆ. ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಬಳಿಯ ಮುಖ್ಯದ್ವಾರದ ಬಾಗಿಲಿನ ಪಕ್ಕದ ಚಿಕ್ಕ ಗೇಟ್ ತೆರೆದು ಜನರು ಪ್ರವೇಶಿಸಲು ಅನುಕೂಲ ಮಾಡಿಕೊಡಲಿ ಎಂದು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

- - -

(ಬಾಕ್ಸ್-2) * ಕ್ರೀಡಾಂಗಣಕ್ಕೆ ಶೀಘ್ರ ಮೂಲಸೌಲಭ್ಯ: ಕ್ರೀಡಾಧಿಕಾರಿ ಕ್ರೀಡಾಂಗಣ ಅವ್ಯವಸ್ಥೆಗಳ ಬಗ್ಗೆ ಜಿಲ್ಲಾ ಯುವಜನ ಸೇವಾ ಕ್ರೀಡಾಧಿಕಾರಿ ರಾಮಲಿಂಗಪ್ಪ ಪ್ರತಿಕ್ರಿಯಿಸಿದ್ದು, ಎಲ್ಲರಿಗೂ ಅನುಕೂಲ ಆಗುವಂತೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು. ಈಗಾಗಲೇ ಸಮಸ್ಯೆಗಳ ಬಗ್ಗೆ ಕ್ಷೇತ್ರ ಶಾಸಕ ಬಸವರಾಜು ಶಿವಗಂಗಾ ಗಮನ ಸೆಳೆಯಲಾಗಿದೆ. ಜಿಲ್ಲಾಧಿಕಾರಿ ಸಹ ಒಪ್ಪಿಗೆ ಸೂಚಿಸಿದ್ದಾರೆ. ಈಗಾಗಲೇ ಒಳಾಂಗಣ ಕ್ರೀಡಾಂಗಣದ ಶೇ.80ರಷ್ಟು ಕೆಲಸ ಮುಗಿದಿದೆ. ಉಳಿದ ಶೇ.20ರಷ್ಟು ಕೆಲಸಕ್ಕೆ ಸರ್ಕಾರದಿಂದ ಹಣ ಮಂಜೂರಾಗಿದೆ. ನಿರ್ಮಿತಿ ಕೇಂದ್ರದ ಮೂಲಕ ಮುಂದಿನ 3 ತಿಂಗಳ ಒಳಗೆ ಕ್ರೀಡಾಂಗಣದ ಬಳಕೆಗೆ ಬೋರ್‌ ಸೇರಿದಂತೆ ತುರ್ತು ಅಗತ್ಯವಾದ ಮೂಲ ಸೌಲಭ್ಯಗಳ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

- - -

-16ಕೆಸಿಎನ್‌ಜಿ2: ಚನ್ನಗಿರಿ ಕ್ರೀಡಾಂಗಣದ ಮಹಿಳಾ ವ್ಯಾಯಾಮ ಶಾಲೆ.

-16ಕೆಸಿಎನ್‌3: ಕ್ರೀಡಾ ಚಟುವಟಿಕೆ ನಡೆಯದೇ ಹಾಳುಬಿದ್ದಿರುವ ಒಳಾಂಗಣ ಕ್ರೀಡಾಂಗಣ.

-16ಕೆಸಿಎನ್‌ಜಿ4: ಚನ್ನಗಿರಿ ಪಟ್ಟಣದಲ್ಲಿರುವ ತಾಲೂಕು ಕ್ರೀಡಾಂಗಣ.

Share this article