ಕನ್ನಡಪ್ರಭ ವಾರ್ತೆ ಜಮಖಂಡಿ
ಕಿತ್ತೂರು ರಾಣಿ ಚನ್ನಮ್ಮಾಜಿ 1824ರಲ್ಲಿಯೇ ಅಚ್ಚಳಿಯದ ಇತಿಹಾಸ ಸೃಷ್ಟಿಸಿದ್ದಾರೆ. ಅವರ ಚರಿತ್ರೆ ಸ್ವಾಭಿಮಾನದ ದ್ಯೋತಕ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅಭಿಪ್ರಾಯಪಟ್ಟರು.ತಹಸೀಲ್ದಾರ್ ಕಚೇರಿಯಲ್ಲಿ ಏರ್ಪಡಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಕ್ಷಿಣ ಭಾರತದ ಮೊದಲ ಸ್ವಾತಂತ್ಯ್ರ ಸಂಗ್ರಾಮಕ್ಕೆ ನಾಂದಿ ಹಾಡಿದ್ದ ಚನ್ನಮ್ಮ ತನ್ನ ಸಾಮ್ರಾಜ್ಯದ, ಸ್ವಾಭಿಮಾನದ ಉಳಿವಿಗಾಗಿ ಹೋರಾಟ ಮಾಡಿದರು. ಎಲ್ಲಾ ಮಹಿಳೆಯರಿಗೆ ಅವರ ಜೀವನ ಸ್ಫೂರ್ತಿಯಾಗಬೇಕು. ಚನ್ನಮ್ಮರಂತೆ ಈಗಿನ ತಂದೆ ತಾಯಿಗಳು ಹೆಣ್ಣುಮಕ್ಕಳಿಗೆ ದಿಟ್ಟತನ, ಹೋರಾಟದ ಮನೋಭಾವ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಬಾಲ್ಯದಿಂದಲೇ ಹೆಣ್ಣುಮಕ್ಕಳನ್ನು ಸಂಸ್ಕಾರವಂತರಾಗಿ ಬೆಳಸಿ, ಒಳಿತು-ಕೆಡಕು ಜ್ಞಾನ ನೀಡಬೇಕು. ಸಮಾಜದಲ್ಲಿ ಪ್ರಜ್ಞಾವಂತ ಮಹಿಳೆಯರಾಗಿ ಹೊರಹೊಮ್ಮುವಂತೆ ಪಾಲಕರು ನೋಡಿಕೊಳ್ಳಬೇಕು. ಒಗ್ಗಟ್ಟು, ಸ್ವಾಭಿಮಾನ, ಮುಂತಾದ ತಿಳುವಳಿಕೆಯನ್ನು ಮನೆಯಲ್ಲಿಯೇ ತಿಳಿಸಿಕೊಡಬೇಕು ಎಂದು ವಿವರಿಸಿದರು.ಕಾರ್ಯಕ್ರಮ ಸಾನ್ನಿಧ್ಯ ವಹಿಸಿದ್ದ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, ರಾಣಿ ಚನ್ನಮ್ಮನ ಆದರ್ಶಗಳನ್ನು ಪಾಲಿಸಬೇಕು. ಪಂಚಮಸಾಲಿ ಸಮಾಜ ಗಟ್ಟಿಗೊಳ್ಳಬೇಕು. ಎಲ್ಲರೂ ಒಗ್ಗಟ್ಟಾಗಿ ಸಮಾಜದ ಬೆಳವಣಿಗೆಗೆ ಶ್ರಮಿಸಬೇಕು ಎಂದರು.
ಉಪನ್ಯಾಸಕ ಎನ್.ವಿ.ಅಸ್ಕಿ ಉಪನ್ಯಾಸ ನೀಡಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ 1824ರಲ್ಲಿ ನಡೆದ ಕಿತ್ತೂರು ಬಂಡಾಯವೇ ಮೂಲ ಪ್ರೇರಣೆಯಾಗಿದೆ. ಕಿತ್ತೂರು ಹೋರಾಟದ ಫಲವಾಗಿ 19 ಸಣ್ಣ ಸಂಸ್ಥಾನಗಳ ಉಳಿದುಕೊಂಡವು. ಕಿತ್ತೂರಿನ ಇತಿಹಾಸ ಹುಡುಕಿ ತೆಗೆಯಬೇಕಾದ ಅವಶ್ಯಕತೆ ಇದೆ. ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಿತ್ತೂರಿನ ಇತಿಹಾಸದ ದಾಖಲೆ ಹುಡುಕಿ ಅದರ ಸಮಗ್ರ ಅಧ್ಯಯನ ನಡೆಯಬೇಕಿದೆ. ಬ್ರಿಟಿಷರು ಕಿತ್ತೂರಿನ ಇತಿಹಾಸ ಉಳಿಯದಂತೆ ನೋಡಿಕೊಂಡಿದ್ದಾರೆ. ಚನ್ನಮ್ಮಾಜಿಯವರ ನಂತರ ಬ್ರಿಟಿಷರು ಬಳಸುತ್ತಿದ್ದ ವಸ್ತುಗಳು, ಉಡುಗೆಗಳನ್ನು ಹರಾಜು ಹಾಕಿದರು. ನಂತರ ಅವರ ಅರಮನೆಯನ್ನು ತೋಪಿನಿಂದ ಉಡಾಯಿಸಿ ನಾಶ ಮಾಡಿದ್ದು ಐತಿಹಾಸಿಕ ದುರಂತ. ಇಲ್ಲದಿದ್ದರೇ ಮೈಸೂರಿನಂತೆ ಕಿತ್ತೂರು ಸಾಮ್ರಾಜ್ಯದ ಕುರುಹುಗಳು ಇಂದಿಗೂ ಇರುತ್ತಿದ್ದವು ಎಂದರು.ತಹಸೀಲ್ದಾರ್ ಸದಾಶಿವ ಮಕ್ಕೊಜಿ ನಿರೂಪಿಸಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಮಹಾದೇವಪ್ಪ ಈಟಿ, ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಸ್ವಾಮೀಜಿ, ಯೋಗಪ್ಪ ಸವದಿ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಚನ್ನಮ್ಮಾಜಿಯ ಭಾವಚಿತ್ರ, ಸ್ವಾಮೀಜಿಗಳನ್ನು ಹಾಗೂ ಚನ್ನಮ್ಮ ವೇಷದಾರಿ ಮಕ್ಕಳನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು.