ಜಂಬೂಸವಾರಿ ಮೆರವಣಿಗೆಯಲ್ಲಿ ಹಿಂದೆಂದೂ ಕಾಣದ ಅವ್ಯವಸ್ಥೆ..ಅಶಿಸ್ತು ತಾಂಡವ

KannadaprabhaNewsNetwork |  
Published : Oct 13, 2024, 01:05 AM IST
182 | Kannada Prabha

ಸಾರಾಂಶ

ಜಾನಪದ ಕಲಾತಂಡವಾಗಲಿ, ಸ್ತಬ್ಧಚಿತ್ರವಾಗಲಿ, ಜಂಬೂ ಸವಾರಿಯಾಗಲಿ ಕಾಣದಂತೆ ತುಂಬಿ ಹೋದರು. ಕೆಲವರು ಕೂರಲು ಸ್ಥಳವಿಲ್ಲದೆ ಮಾಧ್ಯಮದವರಿಗೆ ಮೀಸಲಿದ್ದ ಸ್ಥಳದಲ್ಲಿ ಬಂದು ಕುಳಿತರು. ಉಳಿದ ಅನೇಕರು ಮೆರವಣಿಗೆಯನ್ನು ಸುತ್ತುವರೆದರು.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಅಂಗವಾಗಿ ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಹಿಂದೆಂದೂ ಕೇಳರಿಯದ ಅವ್ಯವಸ್ಥೆ ಕಂಡುಬಂತು. ಅಶಿಸ್ತು ತಾಂಡವಾಡುತ್ತಿತ್ತು. ಇದನ್ನು ನಿಯಂತ್ರಿಸಬೇಕಾದ ಹಿರಿಯ ಪೊಲೀಸ್ ಅಧಿಕಾರಿಗಳು ಕಾಣಲಿಲ್ಲ.

ಅರಮನೆ ಹೊರಗೆ ಮೆರವಣಿಗೆ ಶಿಸ್ತುಬದ್ಧವಾಗಿ ಹೋದರೂ, ಅರಮನೆ ಆವರಣದಲ್ಲಿ ಮಾತ್ರ ಅಶಿಸ್ತು ತಾಂಡವಾಡುತ್ತಿತ್ತು. ಆರಂಭದಿಂದ ಕೊನೆವರೆಗೂ ಮೆರವಣಿಗೆ ಮಾರ್ಗದ ಉದ್ದಕ್ಕೂ ಜನವೋ ಜನ.

ಮೆರವಣಿಗೆ ಮಾರ್ಗದಲ್ಲಿ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳೇ ತುಂಬಿದ್ದರು. ವಿವಿಧ ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳು ತೆರಳುವಾಗ ಸುತ್ತಲೂ ಸಮಿತಿ ಪದಾಧಿಕಾರಿಗಳು, ನೂರಾರು ಸಂಖ್ಯೆಯ ಪದಾಧಿಕಾರಿಗಳು ನೆರೆದಿದ್ದರು.

ಸ್ತಬ್ಧಚಿತ್ರ ಸಮಿತಿ, ಮೆರವಣಿಗೆ ಸಮಿತಿ, ಎನ್.ಸಿಸಿ ಕೆಡೆಟ್ಗಳು, ಜಾನಪದ ಕಲಾತಂಡಗಳ ಸಮಿತಿ ಸೇರಿದಂತೆ ಅನೇಕ ಸಮಿತಿಯ ಪದಾಧಿಕಾರಿಗಳು ಮೆರವಣಿಗೆ ಮಾರ್ಗದ ಸುತ್ತಲೂ ನಿಂತಿದ್ದರು. ಅಲ್ಲದೇ ಮೊಬೈಲ್ನಲ್ಲಿ ಫೋಟೋ ತೆಗೆಯುತ್ತಾ, ವಿಡಿಯೋ ರೆಕಾರ್ಡ್ ಮಾಡುತ್ತಾ ಹೆಚ್ಚು ಕಿರಿಕಿರಿ ಮಾಡಿದರು. ಮಾಧ್ಯಮದವರು ವರದಿ ಮಾಡಲು ಬಂದಿರುತ್ತಾರೆ. ಅವರ ಮುಂದೆ ನಿಲ್ಲಬಾರದು ಎಂಬ ಕನಿಷ್ಠ ಪ್ರಜ್ಞೆಯೂ ಅವರಿಗೆ ಇದ್ದಂತೆ ವರ್ತಿಸಲಿಲ್ಲ. ಹೀಗಾಗಿ ಜನರು ಮೆರವಣಿಗೆ ನೋಡುವ ಬದಲು ಉದ್ದಕ್ಕೂ ನಿಂತವರನ್ನು ನೋಡುವಂತಾಗಿತ್ತು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಇತರ ಜನಪ್ರತಿನಿಧಿಗಳು ಬರುವವರೆಗೆ ಹತ್ತಿರಕ್ಕೂ ಸುಳಿಯದವರು, ಅವರೆಲ್ಲರೂ ಅರಮನೆ ಆವರಣಕ್ಕೆ ಆಗಿಮಿಸುತ್ತಿದ್ದಂತೆಯೇ ಮೆರವಣಿಗೆ ಮಾರ್ಗದಲ್ಲಿ ಪೂರ್ತಿ ಅವರೇ ಇದ್ದರು.

ಜಾನಪದ ಕಲಾತಂಡವಾಗಲಿ, ಸ್ತಬ್ಧಚಿತ್ರವಾಗಲಿ, ಜಂಬೂ ಸವಾರಿಯಾಗಲಿ ಕಾಣದಂತೆ ತುಂಬಿ ಹೋದರು. ಕೆಲವರು ಕೂರಲು ಸ್ಥಳವಿಲ್ಲದೆ ಮಾಧ್ಯಮದವರಿಗೆ ಮೀಸಲಿದ್ದ ಸ್ಥಳದಲ್ಲಿ ಬಂದು ಕುಳಿತರು. ಉಳಿದ ಅನೇಕರು ಮೆರವಣಿಗೆಯನ್ನು ಸುತ್ತುವರೆದರು.

ಎನ್.ಸಿ.ಸಿ ಕೆಡೆಟ್ಗಳು ಮೆರವಣಿಗೆಗೆ ಅಡ್ಡಲಾಗಿ ನಿಂತರೇ ಹೊರತು, ಜನರನ್ನು ನಿಯಂತ್ರಿಸುವ ಕೆಲಸ ಮಾಡಲಿಲ್ಲ. ಬದಲಿಗೆ ಜಂಬೂ ಸವಾರಿ ಬರುವಾಗ ಮಾತ್ರ ಪೊಲೀಸರೆ ಒಂದಷ್ಟು ಮಂದಿಯನ್ನು ಹೊರಗೆ ಕಳುಹಿಸಿದರಾದರೂ ಆ ನಂತರ ಪ್ರಭಾವ ಹೊಂದಿರುವ ಅನೇಕರು ಮೆರವಣಿಗೆಯಲ್ಲಿ ಕಾಣಿಸಿಕೊಂಡರು. ತಾವೇ ಸೆಲ್ಫಿ ತೆಗೆದುಕೊಳ್ಳುತ್ತ ಕಾಲಾಹರಣ ಮಾಡಿದರು.

ಆದರೆ ಬಲರಾಮ ದ್ವಾರದಿಂದ ಹೊರಗೆ ಇಷ್ಟೊಂದು ಜನಸಂದಣಿ ಉಂಟಾಗಲಿಲ್ಲ. ಮೆರವಣಿಗೆಯು ಸಾಂಗವಾಗಿ ತೆರಳಿತು.

ಕ್ರಮಬದ್ಧವಾಗಿ ತೆರಳದ ಸ್ತಬ್ಧ ಚಿತ್ರ:

ಜಂಬೂಸವಾರಿ ಮೆರವಣಿಗೆಯಲ್ಲಿ ತೆರಳುವ ಸ್ತಬ್ಧಚಿತ್ರಗಳಾಗಲಿ, ಜಾನಪದ ಕಲಾತಂಡವಾಗಲಿ ಆಯಾ ಉಪ ಸಮಿತಿಗಳು ನೀಡಿದ ಪಟ್ಟಿಯ ಅನುಸಾರ ಕ್ರಮಬದ್ಧವಾಗಿ ತೆರಳಲಿಲ್ಲ.

ಬದಲಿಗೆ ಯಾವುದ್ಯಾವುದೋ ಸ್ತಬ್ಧಚಿತ್ರವು ಯಾವಾಗಲೋ ಹೋಯಿತು. ಅಂತೆಯೇ ಜಾನಪದ ಕಲಾತಂಡಗಳು ಕೂಡ ಹಾಗೆಯೇ ತೆರಳಿದವು. ಮಳೆ ಬರುವ ಮುನ್ಸೂಚನೆ ಇದ್ದರಿಂದ ಆರಂಭದಲ್ಲಿ ವೇಗ ಪಡೆದ ಜಾನಪದ ಕಲಾತಂಡಗಳು ಮತ್ತು ಸ್ತಬ್ಧಚಿತ್ರಗಳು, ಕೊನೆ ಕೊನೆಯಲ್ಲಿ ನಿಧಾನವಾಗಿ ಸಾಗಿದವು.

ಟ್ರಾಫಿಕ್ ಜಾಮನ್ ನೆನಪಿಸಿದ ಅರಮನೆ ಆವರಣ:

ಅಂಬಾರಿ ಆನೆ ಬರುವ ಮುನ್ನಾ ಒಂದು ಕಡೆ ಕಲಾತಂಡಗಳು ತೆರಳುತ್ತಿದ್ದರು ಮತ್ತೊಂದು ಕಡೆಯಿಂದ ಅಶ್ವಾರೋಹಿ ತಂಡ, ಅರಣ್ಯ ಇಲಾಖೆಯ ತಂಡ ಬರುತ್ತಿದ್ದವು. ಇದರಿಂದ ಟ್ರಾಫಿಕ್ ಜಾಮ್ ಆದ ಪರಿಸ್ಥಿತಿ ಉಂಟಾಗಿತ್ತು. ಸ್ತಬ್ಭಚಿತ್ರಗಳು, ಕಲಾತಂಡಗಳು ಕೆಲಕಾಲ ನಿಂತಲ್ಲೇ ನಿಲ್ಲಬೇಕಾಯಿತು.ಡಿಸಿ ವಿಚಾರಿಸಿದ ಡಿಸಿಎಂ

ಅಂಬಾರಿ ಆನೆಗೆ ಪುಷ್ಪಾರ್ಚನೆ ನೆರವೇರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರರು ವೇದಿಕೆಯಿಂದ ನಿರ್ಗಮಿಸಿದ ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಅವರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರನ್ನು ಮೆರವಣಿಗೆಯಲ್ಲಿ ಸೇರಿದ್ದ ಜನಸ್ತೋಮದ ಬಗ್ಗೆ ವಿಚಾರಿಸಿದರು. ಅವರ ಮಾತುಕತೆಯು ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದಂತಿತ್ತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ