ಕನ್ನಡಪ್ರಭ ವಾರ್ತೆ ಹಾವೇರಿ
ದುಡಿದ ಹಣ ಮತ್ತು ರಕ್ತ ಯಾವತ್ತೂ ನಿಲ್ಲಬಾರದು, ಚಲನಶೀಲವಾಗಿರಬೇಕು. ದುಡಿದ ದುಡ್ಡಿಗೆ ದಾನವೇ ರಕ್ಷಣೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ನಗರದ ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ೬೪ನೇ ರೋಟರಿ ಸಂಸ್ಥಾಪನ ದಿನದಂದು ರೋಟರಿ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಹಣ ದಾನದ ರೂಪದಲ್ಲಿ ಹರಿಯಬೇಕು. ನಮಗೆ ಬೇರೆ ರೂಪದಲ್ಲಿ ಅದರ ಫಲ ದೊರೆಯುತ್ತದೆ. ರಕ್ತ ಚಲಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ರೋಟರಿ ಶಾಲೆ ಹಾವೇರಿ ಹಾಗೂ ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದ ಬಾಗಿಲಾಗಿದೆ. ಮಕ್ಕಳು ಹಾಗೂ ಪೋಷಕರ ಪಾಲಿನ ಜ್ಞಾನ ದೇಗುಲವಾಗಿದೆ. ಮಠ ಮಾನ್ಯಗಳು ಮಾಡುವ ಕೆಲಸವನ್ನು ರೋಟರಿ ಶಾಲೆ ಮಾಡುತ್ತಿದೆ ಎಂದರು.ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ ಬಸೇಗಣ್ಣಿ ಮಾತನಾಡಿ, ಮೊದಲಿಗೆ ಕನ್ನಡ ಮಾಧ್ಯಮ ಪ್ರಾರಂಭಿಸಿ ಯಶಸ್ವಿಯಾದ ರೋಟರಿ ಶಾಲೆ ಕಾಲಕ್ಕೆತಕ್ಕಂತೆ ಸಮಾಜದ ಎಲ್ಲಾ ವರ್ಗದವರಿಗೂ ಆಂಗ್ಲಮಾಧ್ಯಮ ವಿದ್ಯಾಭ್ಯಾಸ ದೊರೆಯಬೇಕೆಂದು ತಿಳಿದು ೨೦೧೦ರಲ್ಲಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿ ಯಶಸ್ವಿಯಾಗಿದೆ. ಎರಡು ಮಾಧ್ಯಮ ಒಂದೇ ಕಟ್ಟಡದಲ್ಲಿ ನಡೆಯುತ್ತಿದ್ದು, ಸಂಸ್ಥೆ ಈಗ ಬಹಳಷ್ಟು ಬೆಳೆದಿರುವುದರಿಂದ ಆಂಗ್ಲ ಮಾಧ್ಯಮ ಶಾಲೆಗೆ ಪ್ರತ್ಯೇಕ ಕಟ್ಟಡ ನಿರ್ಮಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಕಳೆದ ವರ್ಷ ಸಾಧನೆಗೈದ ರೋಟರಿ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ಸುಜಿತ್ ಜೈನ್ ವಹಿಸಿದ್ದರು. ಅಜಿತ್ ಮಾಗಾವಿ ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಿ.ಡಿ.ಜಿ ಆನಂದ್ ಕುಲಕರ್ಣಿ ಆಗಮಿಸಿದ್ದರು.ಸಭೆಯಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಮಾಲತೇಶ್ ಅರಳಿಮಟ್ಟಿ, ಕಾರ್ಯದರ್ಶಿ ಎಸ್.ಸಿ. ಹಿರೇಮಠ, ಶಾಲಾ ಕಾರ್ಯದರ್ಶಿ ಎನ್.ಎಂ. ಹಾವೇರಿ, ಇನ್ನರ್ ವೀಲ್ ಅಧ್ಯಕ್ಷೆ ಮಮತಾ ಬಾಲೇಹೊಸೂರ, ಕಾರ್ಯದರ್ಶಿ ಪ್ರತಿಭಾ ಹಾವನೂರ, ರೋಟ್ರಾಕ್ಟ್ ಅಧ್ಯಕ್ಷ ಗುರುರಾಜ್ ಮೊಕ್ತಾಲಿ ಇದ್ದರು.
ಡಾ. ವಾಣಿಶ್ರೀ ಭಗವತಿ ಪ್ರಾರ್ಥಿಸಿದರು. ಸುಜಿತ್ ಜೈನ್ ಸ್ವಾಗತಿಸಿದರು. ಎಸ್.ಎ. ವಜ್ರಕುಮಾರ್ ನಿರೂಪಿಸಿದರು.