ಕನ್ನಡಪ್ರಭ ವಾರ್ತೆ ಮೈಸೂರು
ಹಣ್ಣುಗಳ ರಾಜ ಮಾವು. ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣುಗಳದ್ದೇ ಕಾರುಬಾರು. ಇಂತಹ ಮಾವಿನ ಹಣ್ಣುಗಳನ್ನು ಬೆಳೆಯುವ ರೈತರು ಮಾವಿನ ಮರದ ರೆಂಬೆ, ಕೊಂಬೆಯನ್ನು ಸವರುವಿಕೆ ಅಥವಾ ಚಾಟನಿ ಮಾಡುವುದು (ಪ್ರೂನಿಂಗ್) ಅಗತ್ಯವಾಗಿದೆ.ಹೌದು, ಪ್ರಸಕ್ತ ಹಂಗಾಮಿನಲ್ಲಿ (ಜುಲೈ, ಆಗಸ್ಟ್) ಮಾವಿನ ರೆಂಬೆಗಳನ್ನು ತೆರವುಗೊಳಿಸಿ ಮರದ ಎಲ್ಲಾ ಭಾಗಗಳಲ್ಲಿ ಸೂರ್ಯನ ಬೆಳಕು ಹಾಗೂ ಗಾಳಿಯಾಡುವಿಕೆ ಉತ್ತಮಗೊಳಿಸುವುದರ ಮೂಲಕ ಹೂ ಬಿಡುವಿಕೆ, ಫಸಲಿನ ಪ್ರಮಾಣ ಮತ್ತು ಹಣ್ಣಿನ ಗುಣಮಟ್ಟವನ್ನು ಅಧಿಕಗೊಳಿಸಲು ಸಾಧ್ಯ. ಅಲ್ಲದೆ, ಈ ಕ್ರಮದಿಂದ ಹಿಟ್ಟಿತಿಗಣೆ ಹಾಗೂ ಜಿಗಿ ಹುಳುವಿನ ಬಾದೆಯನ್ನು ಕಡಿಮೆಗೊಳಿಸಬಹುದಾಗಿದೆ.
ಸವರುವಿಕೆಗೆ ಪ್ರೂನಿಂಗ್ ಗರಗಸವನ್ನು ಬಳಸಬಹುದು. ಮರದ ಮಧ್ಯದ ಒಂದೆರೆಡು ರೆಂಬೆಗಳನ್ನು ತೆಗೆದು ಮೇಲ್ಭಾಗದಿಂದ ಸೂರ್ಯನ ಕಿರಣಗಳು ಮರದ ಒಳಗಿನ ಎಲ್ಲಾ ಭಾಗಗಳಿಗೆ ತಲುಪುವಂತೆ ಮಾಡುವುದು. ಇದಾದ ನಂತರ ಮರದ ಬದಿಗಳ ದಟ್ಟತೆಯನ್ನು ಕಡಿಮೆ ಮಾಡಲು ಹಲವಾರು ಬದಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು. ಈ ಕ್ರಮದಿಂದ ಗಾಳಿಯಾಡುವಿಕೆ ಉತ್ತಮವಾಗಿರುವುದು.ಕತ್ತರಿಸಿದ ಭಾಗಗಳಿಗೆ ಶಿಲೀಂಧ್ರನಾಶಕ + ಕೀಟನಾಶಕದ ಮುಲಾಮನ್ನು ಲೇಪಿಸುವುದು ಅವಶ್ಯ. ಹಣ್ಣಿನ ಕೊಯ್ಲು ಆದ ನಂತರ, ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಚಾಟನಿ ಮಾಡಲು ಸೂಕ್ತ ಸಮಯ.
ಕೆಲವು ಮಾವಿನ ಅನಿಯಮಿತ ತಳಿಗಳಾದ ಬಾದಾಮಿ, ಕೇಸರ ಮತ್ತು ದಶಹರಿ ಎರಡು ವರ್ಷಕ್ಕೊಮ್ಮೆ ಹೆಚ್ಚು ಇಳುವರಿ ಕೊಟ್ಟು, ಮಧ್ಯದ ವರ್ಷಗಳಲ್ಲಿ ಇಳುವರಿ ಬಹಳ ಕಡಿಮೆ ಇರುತ್ತದೆ. ಇದು ಪ್ರಕೃತಿ ದತ್ತವಾದ ನಿಯಮ. ಇದನ್ನು ತಡೆಯಲು ಹಾಗೂ ನಿಯಮಿತ ಇಳುವರಿ ಪಡೆಯಲು ಮಾವು ಹೂ ಬಿಡುವ ನೂರು ದಿನಗಳ ಮುಂಚೆ ಐದು ಮಿ.ಲೀ. ಪ್ಯಾಕ್ಲೋಬುಟ್ರಜಾಲ್ ಸಂಯುಕ್ತ ವಸ್ತುವನ್ನು ಹತ್ತು ಲೀಟರ್ ನೀರಿನಲ್ಲಿ ಬೆರೆಸಿ ಗಿಡದ ಪಾತಿಗಳಿಗೆ ಕಾಂಡದಿಂದ 90 ಸೆಂ.ಮೀ. ದೂರದಲ್ಲಿ ಸುರಿಯುವುದರಿಂದ (ಸಾಮಾನ್ಯವಾಗಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ) ಪ್ರತಿ ವರ್ಷವೂ ಹೂ ಬಿಡುವಂತೆ ಮಾಡಬಹುದಾಗಿದೆ ಎಂದು ಮೈಸೂರು ತಾಲೂಕು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ರಾಹುಲ್ ದಾಸ್ ತಿಳಿಸಿದ್ದಾರೆ.----
-- ಬಾಕ್ಸ್--ಹಳೆಯ ಗಿಡಗಳ ಪುನಶ್ಚೇತನ
ಹಳೆಯ ಮತ್ತು ನಿರುಪಯುಕ್ತ ಮಾವಿನ ಮರಗಳಲ್ಲಿ ಮೂರನೇ ಹಂತದ ರೆಂಬೆಗಳನ್ನು ಭೂಮಿಯ ಮೇಲ್ಮಟ್ಟದಿಂದ 5 ಮೀ. ಎತ್ತರದಲ್ಲಿ ಚಾಟನಿ ಮಾಡಿ ಕತ್ತರಿಸಿ ತೆಗೆಯಬೇಕು. ಕತ್ತರಿಸಿದ ಭಾಗವನ್ನು ಶೇ.1.0ರ ಬೋರ್ಡೋ ಮುಲಾಮು/ ಬ್ಲೈಟಾಕ್ಸನಿಂದ ಉಪಚರಿಸಬೇಕು, ಲೇಪಿಸಬೇಕು. ಇದನ್ನು ಜುಲೈ- ಆಗಸ್ಟ್ ತಿಂಗಳಲ್ಲಿ ಮಾಡಬೇಕು.ಪ್ರತಿ ವರ್ಷವೂ ಜೂನ್, ಜುಲೈ ತಿಂಗಳಲ್ಲಿ ಎಲ್ಲಾ ವಯಸ್ಸಿನ ಮಾವಿನ ಮರಗಳಿಗೆ 50 ಕೆ.ಜಿ ಕೊಟ್ಟಿಗೆ ಗೊಬ್ಬರವನ್ನು ನೀಡಬೇಕು. ಮೊದಲ ವರ್ಷದ ನಂತರ ಪ್ರತಿ ವರ್ಷ ಪ್ರತಿ ಗಿಡಕ್ಕೆ 75 ಗ್ರಾಂ ಸಾರಜನಕ, 20 ಗ್ರಾಂ ರಂಜಕ, 70 ಗ್ರಾಂ ಪೊಟ್ಯಾಷ್ ನೀಡಬೇಕು. ನಂತರ ಎರಡನೇ ವರ್ಷದಿಂದ ಒಂಭತ್ತು ವರ್ಷದವರೆಗೂ ರಸಗೊಬ್ಬರದ ಪ್ರಮಾಣವನ್ನು ಕ್ರಮೇಣ ಹೆಚ್ಚಿಸುತ್ತಾ ಹೋಗಬೇಕು.
ಜೂನ್, ಜುಲೈ ತಿಂಗಳಿನಲ್ಲಿ ಶೇ.50 ರಷ್ಟು ಸಾರಜನಕ, ಪೂರ್ತಿ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಗೊಬ್ಬರಗಳನ್ನು ಕೊಡಬೇಕು. ಉಳಿದ ಶೇ.50ರ ಸಾರಜನಕವನ್ನು 6- 8 ವಾರಗಳ ನಂತರ ಮೇಲುಗೊಬ್ಬರವಾಗಿ ನೀಡಬೇಕು. ರಸಗೊಬ್ಬರಗಳನ್ನು ಮಾವಿನ ಗಿಡದ ಪಾತಿಯಲ್ಲಿ ಸಮವಾಗಿ ಹರಡಿ ಮಣ್ಣಿನಲ್ಲಿ ಮಿಶ್ರಣ ಮಾಡಬೇಕು ಎಂದು ವಿಸ್ತರಣಾ ಶಿಕ್ಷಣ ಘಟಕದ ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ರಾಹುಲ್ ದಾಸ್ ಸಲಹೆ ನೀಡಿದ್ದಾರೆ.ರೈತರು ಹೆಚ್ಚಿನ ಮಾಹಿತಿಗೆ ಮೊ. 98803 38630 ಸಂಪರ್ಕಿಸಬಹುದು.