ಉದ್ಯೋಗ ಕೊಡಿಸುತ್ತೇನೆಂದು ಮೋಸ: ಪ್ರಕರಣ ದಾಖಲು

KannadaprabhaNewsNetwork | Published : Jun 15, 2024 1:00 AM

ಸಾರಾಂಶ

ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿರುವ ಅಘನಾಶಿನಿಯ ಕೆಳಗಿನಕೇರಿ ನಿವಾಸಿ ಮಾಲಿನಿ ಜಿ. ಅಂಬಿಗ(೨೭) ದೂರು ನೀಡಿದ್ದು, ಬಳಿಕ ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಟಾ: ಉದ್ಯೋಗ ಕೊಡಿಸುತ್ತೇನೆಂದು ನಂಬಿಸಿ ಲಕ್ಷಾಂತರ ರು. ವಂಚಿಸಿದ ಬಗ್ಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.

ಸ್ಟಾಫ್ ನರ್ಸ ಆಗಿ ಕೆಲಸ ಮಾಡುತ್ತಿರುವ ಅಘನಾಶಿನಿಯ ಕೆಳಗಿನಕೇರಿ ನಿವಾಸಿ ಮಾಲಿನಿ ಜಿ. ಅಂಬಿಗ(೨೭) ದೂರು ನೀಡಿದ್ದು, ಬಳಿಕ ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಿರ್ಜಾನದ ಶ್ರೀಧರ ಈಶ್ವರ ನಾಯ್ಕ(೪೯), ಗೋಪಾಲಕೃಷ್ಣ ಈಶ್ವರ ನಾಯ್ಕ(೪೦), ಶಶಿಕಲಾ ಗೋಪಾಲಕೃಷ್ಣ ನಾಯ್ಕ(೩೫), ಬಾಡದ ಸತೀಶ ಹನುಮು ಪಟಗಾರ(೪೨), ಬೆಂಗಳೂರಿನ ಧರ್ಮೇಂದ್ರ ಪಿ. ಕುಲಕರ್ಣಿ(೪೯) ವಂಚನೆ ಆರೋಪಿತರು. ಮಾಲಿನಿ ಅಂಬಿಗ ಇವರು ಕುಮಟಾದಲ್ಲಿ ಸ್ಟಾಫ್ ನರ್ಸ್‌ ಕೆಲಸ ಮಾಡಿಕೊಂಡು ಬಂದಿದ್ದಲ್ಲದೇ, ರೋಗಿಗಳ ಮನೆಗಳಿಗೆ ಕೂಡ ಹೋಗಿ ಸೇವೆ ನೀಡಿ ಹೋಮ್ ನರ್ಸ್‌ ಆಗಿ ಕೂಡ ಕೆಲಸ ಮಾಡುತ್ತಿದ್ದರು. ಅವರೊಂದಿಗೆ ಇನ್ನೂ ಕೆಲವು ನರ್ಸ್‌ ವಿದ್ಯಾರ್ಥಿನಿಯರನ್ನು ಸೇರಿಸಿಕೊಂಡು ಕೆಲಸ ಮಾಡುತ್ತಿದ್ದರು.

ಇದನ್ನು ತಿಳಿದ ಅರೋಪಿತರು ನರ್ಸ್‌ ವಿದ್ಯಾರ್ಥಿನಿಯರಿಗೆ ಆಯಾ ತಾಲೂಕಿನಲ್ಲಿ ಸರ್ಕಾರಿ ಇಲ್ಲವೇ ಖಾಸಗಿ ಕಂಪನಿಗಳಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ನಂಬಿಸಿ, ಒಬ್ಬ ವಿದ್ಯಾರ್ಥಿಗೆ ₹೩ ಲಕ್ಷ ಮುಂಗಡ ಹಣ ಪಾವತಿಸುವಂತೆ ಹೇಳಿದ್ದರು. ಅದರಂತೆ ಮಾಲಿನಿ ಅಂಬಿಗ ₹೩.೨೦ ಹಾಗೂ ಉಳಿದ ೧೧ ಜನ ನರ್ಸಿಂಗ್ ವಿದ್ಯಾರ್ಥಿನಿಯರಿಂದ ₹೨ ಲಕ್ಷಕ್ಕೂ ಮೇಲ್ಪಟ್ಟು ಹಣವನ್ನು ಆರೋಪಿ ಶಶಿಕಲಾ ಗೋಪಾಲಕೃಷ್ಣ ನಾಯ್ಕ ಖಾತೆಗೆ ಜಮಾ ಮಾಡಿದ್ದರು. ಆರೋಪಿ ಶ್ರೀಧರ ಈಶ್ವರ ನಾಯ್ಕ ಹಾಗೂ ಸತೀಶ ಹನುಮು ಪಟಗಾರ ಅವರಿಗೆ ನಗದು ಮತ್ತು ಫೋನ್ ಪೇ ಮೂಲಕವೂ ಹಣ ನೀಡಲಾಗಿದೆ. ಈವರೆಗೂ ಉದ್ಯೋಗ ಕೊಡಿಸದೇ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Share this article