ಕನ್ನಡಪ್ರಭ ವಾರ್ತೆ ಮಸ್ಕಿ
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಬಗರ್ ಹುಕುಂ ಸಮಿತಿಯ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ನೇತೃತ್ವದಲ್ಲಿ ಸಮಿತಿಯ ಮೊದಲ ಸಭೆ ಜರುಗಿತು.
ಸಭೆಯಲ್ಲಿ ತಹಸೀಲ್ದಾರ್ ಅರಮನೆ ಸುಧಾ ಮಾತನಾಡಿ, ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 1013 ಅರ್ಜಿ ಬಂದಿದ್ದವು. ಆದರೆ ಸರಿಯಾದ ದಾಖಲೆಗಳು ಇಲ್ಲದ ಕಾರಣದಿಂದ 300ಕ್ಕೂ ಅಧಿಕ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ. ಇನ್ನುಳಿದ 620 ಅರ್ಜಿಗಳು ಇವೆ. ಆದ್ದರಿಂದ ಗ್ರಾಮ ಲೆಕ್ಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿಯ ಅಧ್ಯಕ್ಷ ಶಾಸಕ ಆರ್.ಬಸನಗೌಡರಿಗೆ ಮಾಹಿತಿ ನೀಡಿದರು.ನಂತರ ಖಾದಿ ಹಾಗೂ ಗ್ರಾಮದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್. ಬಸನಗೌಡ ತುರ್ವಿಹಾಳ್ ಮಾತನಾಡಿ, ಸರ್ಕಾರ ಬಗರ್ ಹುಕುಂ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಮೊಬೈಲ್ ಆ್ಯಪ್ ತಂದಿದ್ದು ಇದರಿಂದ ಸಾಗುವಳಿ ಮಾಡುವ ರೈತರಿಗೆ ಅನೂಕೂಲವಾಗಲಿದೆ. ಆದ್ದರಿಂದ ಅರ್ಜಿಗಳನ್ನು ಆದಷ್ಟು ಬೇಗ ಇತ್ಯರ್ಥ ಮಾಡಿ ಹಕ್ಕು ಪತ್ರ ವಿತರಣೆ ಮಾಡಲು ಸಿದ್ಧತೆ ನಡೆಸಿ ಎಂದರು.
ಸಮಿತಿಯ ಸದಸ್ಯರಾದ ಬಸ್ಸಪ್ಪ, ನಾಗರಾಜ್, ನಾಗರತ್ನ ಸೇರಿದಂತೆ ಶಿರಸ್ತೇದಾರ ಸಯ್ಯದ್ ಅಕ್ತರ ಅಲಿ, ವಿಜಯಕುಮಾರ್ ಸಜ್ಜನ, ಅರುಣಕುಮಾರ್ ಸೇರಿದಂತೆ ಇತರರು ಇದ್ದರು.
ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಭೂಮಿ ಇಲ್ಲದ ಬಡ ರೈತರು ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಯಾವುದೋ ಕಾರಣಗಳಿಂದ ಅವರ ಅರ್ಜಿಗಳು ತಿರಸ್ಕಾರವಾದರೆ ರೈತರು ತೊಂದರೆ ಅನುಭವಿಸುವಂತಾಗುತ್ತದೆ. ಆದ್ದರಿಂದ 393 ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಿ ಎಂದು ಸೂಚನೆ ನೀಡಿದರು.
ಮಸ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರ ನಿಗದಿ ಪಡಿಸಿರುವ ಕಂದಾಯ ಗ್ರಾಮಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸರಿಯಾದ ರೀತಿಯಲ್ಲಿ ಸ್ಥಳ ಪರಿಶೀಲಿಸಿ ಹಕ್ಕು ಪತ್ರಗಳನ್ನು ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.