ಅಕ್ರಂಪಾಷ ತಲಕಾಡು
ತಲಕಾಡು ಹೋಬಳಿ ಸುತ್ತ ಪ್ರವಾಹದಿಂದ ಭೋರ್ಗರೆಯುತ್ತಿದ್ದ ಕಾವೇರಿ-ಕಪಿಲಾ ಪ್ರವಾಹ ಕಡಿಮೆಯಾಗಿ, ಜನ ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿಯೇ, ಮತ್ತೆ ಎರಡನೇ ಬಾರಿಗೆ ಪ್ರವಾಹ ಉಂಟಾಗಿದೆ.
ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯದಿಂದ ಮಂಗಳವಾರ ಮಧ್ಯಾಹ್ನ 2 ಲಕ್ಷ ಕ್ಯುಸೆಕ್ ನೀರು ಹೊರಬಿಟ್ಟಿರುವ ಮಾಹಿತಿ, ನದಿ ಪಾತ್ರದ ನಿವಾಸಿಗಳಿಗೆ ಹಾಗೂ ಜಲಾವೃತಗೊಳ್ಳುವ ಬೆಳೆ ರೈತರಿಗೆ ಕಂಗೆಡುವಂತೆ ಮಾಡಿದೆ. ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಇಲ್ಲಿನ ಗ್ರಾಪಂ ಆಟೋ ಧ್ವನಿವರ್ಧಕದಲ್ಲಿ ಟಾಮ್ ಟಾಮ್ ಮೂಲಕ ಎಚ್ಚರಿಸುವ ಕೆಲಸ ಮಾಡಿದೆ.ಪ್ರವಾಹದಿಂದ ನಿನ್ನೆಯಷ್ಟೆ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಿದ್ದ ಹೆಮ್ಮಿಗೆ ಸಂಪರ್ಕ ಸೇತುವೆ ಮತ್ತೆ ಬುಧವಾರದಿಂದ ಬಂದ್ ಆಗುವ ಲಕ್ಷಣವಿದೆ. ತಲಕಾಡು ಹೋಬಳಿ ಪ್ರವೇಶಕ್ಕೆ ಹೆಬ್ಬಾಗಿಲಾದ ಇಲ್ಲಿನ ಸೇತುವೆ ಎರಡು ದಿನ ಬಂದ್ ಆಗಿದ್ದಕ್ಕೆ ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾಗಿದ್ದರು. ಈಗ ಮತ್ತೆ ಸಂಚಾರ ಸ್ಥಗಿತಗೊಳ್ಳುವುದು ಜನತೆಯನ್ನು ಆತಂಕಕ್ಕೆ ದೂಡಿದೆ.
ಮಂಗಳವಾರ ಹೆಮ್ಮಿಗೆ ಸೇತುವೆ ಬಳಿ ದೌಡಾಯಿಸಿದ್ದ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜ್, ಜಿಪಂ ಉಪಕಾರ್ಯದರ್ಶಿ ಡಾ. ಕೃಷ್ಣರಾಜು, ತಾಲೂಕು ತಹಸೀಲ್ದಾರ್ ಸುರೇಶಾಚಾರ್, ತಾಪಂ ಇಒ ಸಿ. ಕೃಷ್ಣ, ತಲಕಾಡು ಠಾಣೆಯ ಸಿಪಿಐ ಆನಂದ್ ಕುಮಾರ್ ಪ್ರವಾಹದ ಪರಿಸ್ಥಿತಿ ಅವಲೋಕಿಸಿ ಸಿಬ್ಬಂದಿ ವರ್ಗಕ್ಕೆ ಮಾರ್ಗದರ್ಶನ ನೀಡಿದರು.
ನದಿದಂಡೆಯ ತಡಿಮಾಲಂಗಿ ಗ್ರಾಮಕ್ಕೆ ಪ್ರವಾಹ ನುಸುಳುವುದರಿಂದ, ನದಿಪಾತ್ರದ ನಿವಾಸಿಗಳನ್ನು ಇಲ್ಲಿನ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ದಿಢೀರನೆ ಇಲ್ಲಿನಕಾಳಜಿ ಕೇಂದ್ರಕ್ಕೆ ತೆರಳಿದ್ದ ಹೆಚ್ಚುವರಿ ಜಿಲ್ಲಾಧಿಕಾರಿಗಳು ಪ್ರವಾಹ ಪೀಡಿತರಿಗೆ ಒದಗಿಸಿರುವ ಸೌಕರ್ಯಗಳ ಬಗ್ಗೆ ಮಂಗಳವಾರ ಪರಿಶೀಲನೆ ನಡೆಸಿದರು.
ನಾಡಕಚೇರಿ ಉಪತಹಸೀಲ್ದಾರ್ ಇ, ಕುಮಾರ್, ಪ್ರಭಾರ ಆರ್‌ಐ ಸತೀಶ್ ಹಾಗೂ ಸಿಬ್ಬಂದಿ ವರ್ಗ, ತಲಕಾಡು, ಹೆಮ್ಮಿಗೆ ಗ್ರಾಪಂ ಅಭಿವೃದ್ದಿ ಅಧಿಕಾರಿಗಳಾದ ಮಹೇಶ್, ಚಿದಾನಂದ ಇದ್ದರು.