ಕನ್ನಡಪ್ರಭ ವಾರ್ತೆ ಚೇಳೂರುಚೇಳೂರು ತಾಲೂಕು ಎಂದು ಘೋಷಿಸಿ ಕೆಲವು ವರ್ಷ ಕಳೆದಿದೆ. ಆದರೆ ಪಟ್ಟಣದಲ್ಲಿ ಅನೇಕ ವರ್ಷದಿಂದ ಸುಸಜ್ಜಿತ ಸಂತೆ ಮಾರುಕಟ್ಟೆ ಇಲ್ಲದೇ ವ್ಯಾಪಾರಿಗಳು ರಸ್ತೆಯನ್ನು ಮಾರುಕಟ್ಟೆಯನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಸಂಚಾರಕ್ಕೆ ಸಂಚಕಾರ ಉಂಟಾದರೂ ಯಾರೂ ಕೇಳುವವರಿಲ್ಲದಂತಾಗಿದೆ.
ನೂತನ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಕಚೇರಿಗಳನ್ನು ಸಂಪರ್ಕಿಸುವ ರಸ್ತೆ ಶುಕ್ರವಾರ ಸಂತೆ ಮಾರುಕಟ್ಟೆಯಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಗ್ರಾಮ ಪಂಚಾಯತಿ ಕಚೇರಿಗೆ ಬರುವವರಿಗೆ ಸಮಸ್ಯೆ ಉಂಟಾಗುತ್ತಿದ್ದು, ಕ್ಷೇತ್ರದ ಶಾಸಕರು ಹಾಗೂ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಮಾತ್ರ ತಮಗೆ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.25 ಗ್ರಾಮಗಳ ಏಕೈಕ ಸಂತೆಕೇಂದ್ರ ಸ್ಥಾನಕ್ಕೆ ಅಂದಾಜು 20 ರಿಂದ 25ಕ್ಕೂ ಹೆಚ್ಚು ಗ್ರಾಮಸ್ಥರು ಸಂತೆಗೆ ಆಗಮಿಸುತ್ತಾರೆ. ಪಟ್ಟಣವಲ್ಲದೇ ಗಡಿ ಭಾಗದಲ್ಲಿ ಇರುವ ಅಂಧ್ರಪ್ರದೇಶದ ಕಡೆಯಿಂದಲೂ ಇಲ್ಲಿನ ಪಟ್ಟಣಕ್ಕೆ ವಾರಕ್ಕೊಮ್ಮೆ ಸಂತೆಗೆ ವ್ಯಾಪಾರಕ್ಕಾಗಿ ಬರುತ್ತಾರೆ. ಇವರೆಲ್ಲ ಈ ಸಂತೆಯನ್ನೇ ಅವಲಂಬಿಸಿದ್ದಾರೆ. ಪಟ್ಟಣಕ್ಕೆ ತಾಲೂಕು ಭಾಗ್ಯ ದೊರೆತಿದೆ. ಆದರೆ ಸೌಲಭ್ಯಗಳು ಮಾತ್ರ ಶೂನ್ಯ. ಇದು ಜನಪ್ರತಿನಿಧಿಧಿಗಳ ಹಾಗೂ ಗ್ರಾಮ ಪಂಚಾಯಿತಿ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ವ್ಯಾಪಾರಿಗಳು ಪ್ಲಾಸ್ಟಿಕ್ ಟಾರ್ಪಲ್‌ಗಳನ್ನು ಮೇಲ್ಛಾವಣಿಗಾಗಿ ಬಳಸುತ್ತಾರೆ. ಬಲವಾದ ಗಾಳಿ, ಮಳೆ ಬಂದಾಗ ಸಂತೆ ಅತಂತ್ರವಾಗುತ್ತದೆ.
ಮೂಲ ಸೌಕರ್ಯ ಕೊರತೆ:ಗ್ರಾಪಂ ರಸ್ತೆಯೂ ಪಕ್ಕ ಮಣ್ಣಿನಿಂದ ಕೂಡಿದ್ದು, ಇದು ಮಳೆ ಬಂದರೆ ಕೆಸರು ಗದ್ದೆಯಾಂತಾಗುತ್ತದೆ. ರಕ್ಷಣೆ ಕೊರತೆ ಒಂದೆಡೆಯಾದರೆ ಮತ್ತೊಂದೆಡೆ ಮೂಲ ಸೌಲಭ್ಯಗಳ ಕೊರತೆ ಸಂತೆಗೆ ಬರುವವರಿಗೆ ಪ್ರಮುಖ ಸಮಸ್ಯೆಯಾಗಿದೆ. ಸಾರ್ವಜನಿಕ ಶೌಚಾಲಯವಿಲ್ಲದೆ ಬಯಲನ್ನೇ ಆಶ್ರಯಿಸಬೇಕಿದ್ದು, ಕುಡಿಯುವ ನೀರಿಗೆ ಸಂಕಷ್ಟವಿದೆ. ಪಟ್ಟಣದಲ್ಲಿ ಸ್ವಚ್ಛತೆಯಂತೂ ಇಲ್ಲಿ ಮರೀಚಿಕೆಯಾಗಿದೆ. ಇದರಿಂದ ಸಂತೆಗೆ ಬರುವವರೆಲ್ಲರೂ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ.ಗ್ರಾಪಂ ಪಿಡಿಒ ಏನಂತಾರೆ?
ಸರ್ಕಾರಿ ಶಾಲೆಯ ಮುಂಭಾಗದ ಸಂತೆಯ ಜಾಗದಲ್ಲಿ ಕೆಲವು ನಿರಾಶ್ರಿತರು ಗುಡಿಸಲುಗಳು ಹಾಕಿಕೊಂಡಿದ್ದು, ಅವರಿಗೆ ಸೂಕ್ತ ಜಾಗ ಗುರುತಿಸಿ ತದನಂತರ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲಾಗುವುದು ಎಂದು ಚೇಳೂರು ಗ್ರಾಪಂ ಪಿಡಿಒ ಪ್ರತಿಕ್ರಿಯೆ ನೀಡಿದ್ದಾರೆ.