ಕನ್ನಡಪ್ರಭ ವಾರ್ತೆ ಚಾಮರಾಜನಗರ
''''ಕೃಷಿಯಲ್ಲಿ ಕಂಡು ಬರುವ ಕಳೆ, ಕೀಟ ಮತ್ತು ರೋಗಗಳ ಸಮಸ್ಯೆಗಳಿಗೆಲ್ಲ ರಾಸಾಯನಿಕ ಕ್ರಮ ಒಂದೇ ಅಸ್ತ್ರವಲ್ಲ, ಹೇಳಬೇಕೆಂದರೆ ಅದು ಕೊನೆಯ ಅಸ್ತ್ರವಾಗಬೇಕು'''' ಎಂದು ಬೇಸಾಯ ಶಾಸ್ತ್ರಜ್ಞ ಡಾ.ಪಿ. ಪ್ರಕಾಶ್ ಹೇಳಿದ್ದಾರೆ.ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಕೃಷಿ ಮಹಾವಿದ್ಯಾಲಯ ಚಾಮರಾಜನಗರ ವತಿಯಿಂದ ಅಂತಿಮ ವರ್ಷದ ಬಿಎಸ್ಸಿ(ಹಾನರ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹರವೆ ಹೋಬಳಿಯ ಬೆಟ್ಟದಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ''''ಸೂರ್ಯಕಾಂತಿ ಬೆಳೆ ವಿಚಾರ ಸಂಕಿರಣ'''' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮದಲ್ಲಿ ಬೆಳೆಯುವ ಸೂರ್ಯಕಾಂತಿ ತಳಿಗಳಿಗೂ ಹಾಗೂ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಬಿಡುಗಡೆ ಮಾಡಿರುವ ಕೆ.ಬಿ.ಎಸ್.ಎಚ್ ತಳಿಗಳಿಗೂ ಇರುವ ವ್ಯತ್ಯಾಸವನ್ನು ಮುಂಬರುವ ದಿನಗಳಲ್ಲಿ ತಮ್ಮ ವಿದ್ಯಾರ್ಥಿಗಳು ಕೃಷಿ ಸಂಗ್ರಹಾಲಯದ ಮೂಲಕ ತೋರಿಸುವರು. ಸೂರ್ಯಕಾಂತಿ ಮತ್ತು ಇತರ ಬೆಳೆಗಳಲ್ಲಿ ಅಜಟೋಬ್ಯಾಕ್ಟರ್, ರೈಸೋಬಿಯಂ, ರಂಜಕ ಕರಗಿಸುವ ಬ್ಯಾಕ್ಟೀರಿಯಾ ಮೂಲಕ ಮಾಡುವ ಬೀಜೋಪಚಾರದ ಮಹತ್ವವನ್ನು ತಿಳಿಸಿದರು.ರೌಂಡಪ್‌ನಂತಹ ಕಳೆ ನಾಶಕಗಳಿಗೆ ತಡೆ ಹಾಕಿ, ಜೈವಿಕ, ತಾಂತ್ರಿಕ ಕ್ರಮಗಳು ಹಾಗೂ ಅಂತರ ಬೆಳೆಗಳ ಮೂಲಕ ಅವುಗಳ ನಿರ್ವಹಣೆ ಮಾಡಬಹುದೆಂದು ತಿಳಿಸಿದರು. ಹೀಗೆ ರೈತರ ಹಲವಾರು ಪ್ರಶ್ನೆಗಳಿಗೆ ತಾಂತ್ರಿಕವಾಗಿ ಉತ್ತರಿಸಿದ ಅವರು ಹಲವಾರು ತಾಂತ್ರಿಕತೆಗಳ ಬಗ್ಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೂರ್ಯಕಾಂತಿ ಸುಧಾರಿತ ಬೇಸಾಯ ಕ್ರಮಗಳನ್ನು ಆಡಿಯೋ ವಿಡಿಯೋ ದೃಶ್ಯಗಳ ಸಹಾಯದಿಂದ ಗ್ರಾಮಸ್ಥರಿಗೆ ವಿವರಿಸಿದರು. ಅದರಲ್ಲಿ ಬರುವ ರೋಗ ಕೀಟ ಹಾಗೂ ಪೋಷಕಾಂಶಗಳ ನಿರ್ವಹಣೆ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ.ಎ.ಎಸ್ ಕಾಂಬಳೆ, ಡಾ.ಪ್ರದೀಪ್, ಡಾ. ರವೀಂದ್ರ, ಶಿವಕುಮಾರ್ ಗ್ರಾಪಂ ಅಧ್ಯಕ್ಷರು, ಸುಭದ್ರಮ್ಮ (ಕಡಪ್ಪ) ಗ್ರಾಪಂ ಸದಸ್ಯರು, ಚನ್ನಬಸಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಗ್ರಾಮದ ಎಲ್ಲ ಗಣ್ಯರು, ಗ್ರಾಮಸ್ಥರು ಮತ್ತು ಮಕ್ಕಳು ಉಪಸ್ಥಿತರಿದ್ದರು.