ಹಳಿಯಾಳ: ರೈತರು ಸಾವಯವ ಗೊಬ್ಬರದ ಬದಲು ಕೃತಕ ರಸಗೊಬ್ಬರಗಳನ್ನು ನಿಗದಿತ ಪ್ರಮಾಣಕ್ಕಿಂತ ಯಥೇಚ್ಛವಾಗಿ, ವಿವೇಚಣೆಯಿಲ್ಲದೇ ಅಸಮರ್ಪಕವಾಗಿ ಬಳಸುತ್ತಿರುವುದರಿಂದ ಕೃಷಿ ಉತ್ಪಾದನೆ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿವೆ. ಅದಕ್ಕಾಗಿ ರೈತರು ಸಾವಯವ ಗೊಬ್ಬರದ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹಳಿಯಾಳ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಪಿ.ಐ. ಮಾನೆ ಹೇಳಿದರು.
ಗುರುವಾರ ಪಟ್ಟಣದಲ್ಲಿ ಕಲಘಟಗಿ ಮಾರ್ಗದಲ್ಲಿರುವ ರೇಣಕೆ ಅವರು ಕೃಷಿ ಜಮೀನಿನಲ್ಲಿ ರೈತರಿಗಾಗಿ ಆಯೋಜಿಸಿದ ಡ್ರೋನ್ ಮೂಲಕ ರಸಾಯನಿಕ ಸಿಂಪಡನೆಯ ಪ್ರಾತ್ಯಕ್ಷಿಕ ಕಾರ್ಯಾಗಾರ ಚಾಲನೆ ನೀಡಿ ಅವರು ಮಾತನಾಡಿದರು.ಯೂರಿಯಾ ರಸಗೊಬ್ಬರ ಬಳಕೆಯು ಸರ್ಕಾರದ ಮೇಲೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೇ ಇನ್ನೊಂದೆಡೆ ದೇಶದ ಕೃಷಿ ಉತ್ಪನವನ್ನು ಕುಂಠಿತವನ್ನಾಗಿಸಿರುವುದರಿಂದ ಸರ್ಕಾರ ಸಾವಯವ ಗೊಬ್ಬರದ ಬಳಕೆಗೆ ಆದ್ಯತೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಪರಿಸರಕ್ಕೆ ಮಾರಕ:ರಸಗೊಬ್ಬರಗಳ ಬೆಲೆಗಳು ಹೆಚ್ಚಳವಾಗುತ್ತಿರುವುದರಿಂದ ಕಡಿಮೆ ದರದಲ್ಲಿ ಲಭ್ಯವಾಗುವ ಯೂರಿಯ ರಸಗೊಬ್ಬರವನ್ನು ಅಧಿಕವಾಗಿ ಬಳಸಲಾಗುತ್ತಿದೆ. ಅಧಿಕ ಯೂರಿಯ ಬಳಕೆಯಿಂದ ಮಣ್ಣಿನಲ್ಲಿರುವ ಸೂಕ್ಷ್ಮಣು ಜೀವಿಗಳು ನಾಶವಾಗುತ್ತದೆ. ರಾಸಾಯನಿಕ ಗುಣಧರ್ಮಗಳು ವ್ಯತ್ಯಾಸವಾಗಿ ಮಣ್ಣು ಹುಳಿಯಾಗಿ ಪರಿವರ್ತನೆ ಗೊಳ್ಳುತ್ತದೆ ಎಂದರು.
ಯೂರಿಯಾ ಅಧಿಕ ಬಳಕೆಯಿಂದ ಯೂರಿಯಾವು ಅಮೋನಿಯವಾಗಿ ನಂತರ ನೈಟ್ರೇಟ್ ಆಗಿ ಪರಿವರ್ತನೆಗೊಂಡು ಭೂಮಿಯೊಳಗಿನ ಅಂತರ್ಜಲ ಸೇರಿ ಕುಡಿಯುವ ನೀರು ಸಹ ಕುಲುಷಿತವಾಗುತ್ತದೆ. ನೀರಿನಲ್ಲಿ ನೈಟ್ರೇಟ್ ಪ್ರಮಾಣ ಹೆಚ್ಚಾದಲ್ಲಿ ಅಂತಹ ನೀರು ಕುಡಿಯುಲು ಸಹ ಯೋಗ್ಯವಾಗಿರುವುದಿಲ್ಲ ಎಂದರು.ಸಾವಯವ ಗೊಬ್ಬರ ಬಳಸಿ:
ಅದಕ್ಕಾಗಿ ರೈತರು ಪರಿಸರ ಹಾಗೂ ಆರೋಗ್ಯಕ್ಕೂ ಹಾನಿಕಾರಕ ಯೂರಿಯಾ ಬಳಕೆಯನ್ನು ಬಿಟ್ಟು ಸಾವಯವ ರಸಗೊಬ್ಬರದ ಬಳಕೆಗೆ ಮುಂದಾಗಬೇಕು. ಕೊಟ್ಟಿಗೆ ಗೊಬ್ಬರ, ಕುರಿಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಹಸಿರೆಲೆ ಗೊಬ್ಬರದ ಬಳಕೆಯನ್ನು ಹೆಚ್ಚಿಸಬೇಕು. ಯೂರಿಯ ಬದಲು ನ್ಯಾನೋ ಯೂರಿಯಾ ಬಳಕೆ ಮಾಡಿ ಎಂದರು.ಸಾಂಪ್ರದಾಯಿಕ ಕೃಷಿ ಬೇಸಾಯ ಬದಲು ಕೃಷಿಯಲ್ಲಿ ಬಂದಿರುವ ಹೊಸ ಅವಿಷ್ಕಾರಗಳನ್ನು ತಂತ್ರಜ್ಞಾನವನ್ನು ಬಳಕೆ ಮಾಡಿ ಹೆಚ್ಚಿನ ಇಳುವರಿ ಹಾಗೂ ಹೆಚ್ಚಿನ ಆದಾಯವನ್ನು ಗಳಿಸಿ. ಕೃಷಿಯನ್ನು ಬೇಸಾಯದ ಬದಲು ಉದ್ಯಮವನ್ನಾಗಿಸಲು ಮುಂದಾಗಿ ಎಂದರು.
ಕೃಷಿ ಇಲಾಖೆಯ ಟಿ.ಎಸ್. ಚಿಕ್ಕಮಠ ಅತಿಯಾದ ರಸಾಯನಿಕ ಗೊಬ್ಬರದ ಬಳಕೆಯಿಂದ ಕೃಷಿಯ ಮೇಲಾಗುವ ದುಷ್ಪರಿಣಾಮಗಳ ಹಾಗೂ. ಆಧುನಿಕ ಕೃಷಿ ಯಂತ್ರಗಳನ್ನು ಖರೀದಿ ಹಾಗೂ ಸರ್ಕಾರದ ಸಬ್ಸಿಡಿಯ ಬಗ್ಗೆ ಬಗ್ಗೆ ಮಾಹಿತಿ ನೀಡಿದರು.ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ರಾಜ್ಯ ಉಪಾಧ್ಯಕ್ಷ ಎಂ.ವಿ. ಘಾಡಿ, ಪ್ರಗತಿಪರ ಕೃಷಿಕ ಅನಂತ ಘೋಟ್ನೆಕರ, ಪತ್ರಕರ್ತ ನಾಗರಾಜ ಶಹಾಪುರಕರ, ತೇರಗಾಂವ ಗ್ರಾಮದ ಅನ್ವರ ಪುಂಗಿ, ಹವಗಿಯ ಪಾಟೀಲ ಸಹೋದರರು, ಸಂಜು ಉಪ್ಪೀಣ, ಟಿಎಪಿಎಂಎಸ್ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಪಾಟೀಲ, ರೈತ ಸೇವಾ ಸಹಕಾರಿ ಸಂಘದ ಮುಖ್ಯ ಕಾಯ ನಿರ್ವಹಣಾಧಿಕಾರಿ ಬಿ.ವೈ. ಪವಾರ, ಕೃಷಿ ಇಲಾಖೆಯ ಸುಧಾಕರ ಇದ್ದರು.
ಇಪ್ಕೋ ಸಂಸ್ಥೆಯಿಂದ ಡ್ರೋನ್ ಮೂಲಕ ರಸಾಯನಿಕ ಸಿಂಪಡನೆಯ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು. ಸಂಸ್ಥೆಯ ಸುಬ್ರಹ್ಮಣ್ಯ ಹಾಗೂ ದರ್ಶನ ಮತ್ತು ಸಿಬ್ಬಂದಿ ಹಾಗೂ ಕೃಷಿ ಸಖಿಯರು ಇದ್ದರು.