ಕನ್ನಡಪ್ರಭ ವಾರ್ತೆ ಯಾದಗಿರಿ
ಹಿಂದೂ ಸಾಮ್ರಾಜ್ಯ ಒಗ್ಗೂಡಿಸಲು ಛತ್ರಪತಿ ಶಿವಾಜಿ ಅವರ ಕೊಡುಗೆ ಹಾಗೂ ಸ್ಫೂರ್ತಿ ಅಪಾರವಾಗಿದೆ ಎಂದು ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ್ ಹೇಳಿದರು.ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೂ ಸಾಮ್ಯಾಜ್ಯ ಒಗ್ಗೂಡಿಸುವಲ್ಲಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ತಾಯಿ ಜೀಜಾಬಾಯಿ ಅವರ ಸಂಸ್ಕಾರದಿಂದ ಛತ್ರಪತಿಯಾಗಿ ಐತಿಹಾಸಿಕವಾಗಿ ಪ್ರಸಿದ್ಧಿ ಹೊಂದಿದ್ದ ಶಿವಾಜಿ ಅವರಿಂದ ಕಲಿಯುವ ವಿಷಯ ಹೆಚ್ಚಾಗಿದೆ. ದೃಢ ನಿರ್ಧಾರ ಎಲ್ಲವನ್ನೂ ಸಾಧಿಸಲು, ಸಮಾಜದ ಮುಖ್ಯವಾಹಿನಿಗೆ ಬರಲು ಶೈಕ್ಷಣಿಕ ಕ್ಷೇತ್ರದಲ್ಲಿ ದೃಢ ನಿರ್ಧಾರ ಮಾಡಿ ಒಳ್ಳೆಯ ಶಿಕ್ಷಣ ಕೊಡಿಸುವಲ್ಲಿ ಶಿಕ್ಷಣ ಒಂದು ದೊಡ್ಡ ಸಂಸ್ಕಾರ ಸಂಸ್ಕೃತಿಯಾಗಿದೆ ಎಂದರು.ಆಧುನಿಕ ಜಗತ್ತಿನಲ್ಲಿ ಬದುಕಲು, ಶಿಕ್ಷಣ ಮತ್ತು ಸಂಸ್ಕಾರ ನಿವೆಲ್ಲರೂ ಮಕ್ಕಳಿಗೆ ನೀಡಬೇಕು. ಶಿವಾಜಿಯಂತಹ ವ್ಯಕ್ತಿತ್ವ ರೂಪಿಸಲು, ಧೈರ್ಯ, ಸಾಹಸ ಬೆಳೆಸಲು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಮುಂದೆ ಬರಲು ಅವಕಾಶ ಕಲ್ಪಿಸಬೇಕು. ಶಿವಾಜಿ ಅವರಂತಹ ವ್ಯಕ್ತಿತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಸಂತೋಷದ ಜೀವನಕ್ಕೆ ನಾಂದಿ ಆಗುವುದು ಎಂದು ಹೇಳಿದರು.
ಶಹಾಪುರ ಸಹಾಯಕ ಖಜಾನೆ ಅಧಿಕಾರಿ ಡಾ. ಎಂ.ಎಸ್. ಶಿರವಾಳ ಉಪನ್ಯಾಸ ನೀಡಿ ಮಾತನಾಡಿ, ವಿಜಯಪುರದ ಆದಿಲ್ ಷಾಹಿಯ ಆಸ್ಥಾನದಲ್ಲಿ ಪ್ರಮುಖ ಸೇನಾಧಿಪತಿಯಾಗಿದ್ದ ಶಹಾಜಿ ಭೋಸ್ಲೆ ಮತ್ತು ಜೀಜಾಬಾಯಿ ದಂಪತಿ ಮಗನಾಗಿ ಶಿವನೇರಿ ದುರ್ಗದಲ್ಲಿ ಜನ್ಮತಾಳಿದ ಶಿವಾಜಿ ಬಾಲ್ಯದಲ್ಲಿ ತಾಯಿ ಜೀಜಾಬಾಯಿಯವರಿಂದ ರಾಮಾಯಣ, ಮಹಾಭಾರತಗಳಂಥ ಕಥೆ ಕೇಳುತ್ತಾ, ಉತ್ತಮ ಸಂಸ್ಕಾರ ಪಡೆದು ನಂತರ ಗುರು ದಾದಾಜಿ ಕೊಂಡದೇವರ ಬಳಿ ಶಸ್ತ್ರ ಮತ್ತು ಶಾಸ್ತ್ರ ಎರಡರಲ್ಲೂ ಪಾಂಡಿತ್ಯವನ್ನು ಗಳಿಸುತ್ತಾರೆ. ಒಡೆದು ನಶಿಸಿ ಹೋಗುತ್ತಿದ್ದ ಹಿಂದೂ ಸಮಾಜ ಒಗ್ಗೂಡಿಸಿದ ಖ್ಯಾತಿ ದೈರ್ಯ, ಧರ್ಮಶ್ರದ್ಧೆ ಬೆಳೆಸಿಕೊಂಡಿದ್ದರು ಎಂದು ಹೇಳಿದರು.ಡಿಎಸ್‌ಪಿ ಅರುಣ ಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಎಸ್. ಮಠಪತಿ, ನಾರಾಯಣ ರಾವ ಚವ್ಹಾಣ, ಶ್ರೀರಂಗ ಜಾಧವ ರಾಜ್ಯ ಕಾರ್ಯದರ್ಶಿ ಗಣೇಶ ಕುಮಾರ್ ಭಾಪಕರ್, ತಾಲೂಕಾಧ್ಯಕ್ಷ ಜೀತೇಂದ್ರ ನವಗಿರಿ, ಜಯಂತ್ಯುತ್ಸವ ಸಮಿತಿ ಜಿಲ್ಲಾಧ್ಯಕ್ಷ ರಾಜಕುಮಾರ ದವಳೆ, ರಾಜು ಚವ್ಹಾಣ ಸೇರಿದಂತೆ ಇತರರಿದ್ದರು.