ಲಕ್ಷಾಂತರ ಜನಕ್ಕೆ ಚಿಕನ್ ಬಿರಿಯಾನಿ!

KannadaprabhaNewsNetwork | Published : Jan 26, 2024 1:49 AM

ಸಾರಾಂಶ

ರಾಜ್ಯಮಟ್ಟದ ಶೋಷಿತರ ಬೃಹತ್ ಸಮಾವೇಶಕ್ಕೆ ಲಕ್ಷಾಂತರ ಜನಕ್ಕೆ ಚಿಕನ್ ಬಿರಿಯಾನಿ, ಇದಕ್ಕಾಗಿ ಸಾವಿರಾರು ಕೌಂಟರ್ ವ್ಯವಸ್ಥೆ, ಐವತ್ತು ಸಾವಿರ ಜನಕ್ಕೆ ಸಸ್ಯಹಾರಿ ಊಟದ ವ್ಯವಸ್ಥೆ ಮಾಡಲಾಗಿದೆ.

ಚಿತ್ರದುರ್ಗ: ಲಕ್ಷಾಂತರ ಜನಕ್ಕೆ ಚಿಕನ್ ಬಿರಿಯಾನಿ, ಇದಕ್ಕಾಗಿ ಸಾವಿರಾರು ಕೌಂಟರ್ ವ್ಯವಸ್ಥೆ, ಐವತ್ತು ಸಾವಿರ ಜನಕ್ಕೆ ಸಸ್ಯಹಾರಿ ಊಟ..

ಚಿತ್ರದುರ್ಗದಲ್ಲಿ ಜ.28ರಂದು ನಡೆಯರುವ ರಾಜ್ಯಮಟ್ಟದ ಶೋಷಿತರ ಬೃಹತ್ ಸಮಾವೇಶದ ಊಟದ ಮೆನು ಇದು. ಚಿತ್ರದುರ್ಗ ಹೊರ ವಲಯ ಮಾದಾರ ಗುರುಪೀಠದ ಪಕ್ಕದ ವಿಶಾಲವಾದ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿದ್ದು ಹತ್ತು ಲಕ್ಷ ಜನತೆ ಆಗಮಿಸುವ ನಿರೀಕ್ಷೆ ಇದೆ ಎನ್ನುವುದು ಸಂಘಟಕರ ಅಭಿಪ್ರಾಯ. ಹಾಗಾಗಿ ಊಟ ವ್ಯವಸ್ಥೆಗೆ ವಿಶೇಷ ಆಸಕ್ತಿ ವಹಿಸಲಾಗಿದೆ. ಸಸ್ಯಾಹಾರ, ಶಾಖಾಹಾರ ಎರಡೂ ನಮೂನೆಯ ಭೋಜನ ಮೆನೂ ನಲ್ಲಿದೆ. . ಬಂದವರಿಗೆಲ್ಲ ಅರ್ಧ ಲೀಟರ್ ಕುಡಿವ ನೀರು ಪೂರೈಕೆ ಮಾಡಲಾಗುತ್ತದೆ. 150 ತಾತ್ಕಾಲಿಕ ಶೌಚಗೃಹ ನಿರ್ಮಾಣ ಕಾರ್ಯ ಕೂಡಾ ಭರದಿಂದ ಸಾಗಿದೆ.

ಮಾದಾರ ಚನ್ನಯ್ಯ ಗುರುಪೀಠ ಸಮೀಪದ 120 ಎಕರೆ ಜಾಗದಲ್ಲಿ ಕಳೆದೊಂದು ತಿಂಗಳಿನಿಂದಲೂ ಭರದ ಸಿದ್ಧತೆ ನಡೆಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ 5 ಲಕ್ಷ ಆಸನಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಖ್ಯ ವೇದಿಕೆಯಲ್ಲಿ 100 ಮಂದಿಗಷ್ಟೇ ಅವಕಾಶವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಶೋಷಿತ ಸಮುದಾಯಗಳ ಸಚಿವರು, ಶಾಸಕರು ಆಸೀನರಾಗಲಿದ್ದಾರೆ. ಮಠಾಧಿಪತಿಗಳಿಗೆ ಆಹ್ವಾನ ನೀಡಲಾಗಿದೆಯೇ ಎಂಬ ಬಗ್ಗೆ ಸಂಘಟಕರು ಸುಳಿವು ಬಿಟ್ಟುಕೊಟ್ಟಿಲ್ಲ.

ಪ್ರಧಾನ ವೇದಿಕೆ ಎರಡೂ ಕಡೆ ತಲಾ 250 ಆಸನಗಳ ವ್ಯವಸ್ಥೆ ಮಾಡಲಾಗಿದ್ದು ಒಟ್ಟಾರೆ ವೇದಿಕೆ ಮೇಲೆ 600 ಮಂದಿ ಗಣ್ಯರು ಆಸೀನರಾಗಲಿದ್ದಾರೆ. ಶೋಷಿತ ಸಮುದಾಯ ಒಕ್ಕೂಟದ ಜಿಲ್ಲಾ ಅಧ್ಯಕ್ಷರು, ಮುಖಂಡರು, ಹಿಂದುಳಿದ-ಅತಿ ಹಿಂದುಳಿದ ವರ್ಗಗಳ ಮುಖ್ಯಸ್ಥರಿಗೆ ಆಸನ ಮೀಸಲು. ವಾಹನ ನಿಲುಗಡೆಗಾಗಿ ಪೆಂಡಾಲ್ ಪಕ್ಕ ವಿಐಪಿ, ವಿವಿಐಪಿ ವಾಹನಗಳಿಗೆ ವ್ಯವಸ್ಥೆ ಹಾಗೂ ಮುರುಘಾಮಠದ ಹಿಂಭಾಗದಲ್ಲಿರುವ ಬಸವ ಪುತ್ಥಳಿ ಕಾಮಗಾರಿ ಬಳಿ ಬಸ್ಸುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಹೈಕ, ಮಧ್ಯ ಕರ್ನಾಟಕದತ್ತ ಚಿತ್ತ

ರಾಜ್ಯಮಟ್ಟದ ಸಮಾವೇಶವೆಂದು ಸಂಘಟಕರು ಹೇಳಿದ್ದರೂ ಮಧ್ಯ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದಿಂದ ಜನರ ಕರೆತರುವ ವ್ಯವಸ್ಥೆ ಮಾಡಲಾಗಿದೆ. ಕೊಪ್ಪಳ, ವಿಜಯನಗರ, ಬಳ್ಳಾರಿ, ಶಿವಮೊಗ್ಗ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಾಗಿದೆ. ಕಾಂತರಾಜು ಆಯೋಗದ ವರದಿ ಸ್ವೀಕರಿಸಿ, ಯಥಾವತ್ತಾಗಿ ಅಂಗೀಕರಿಸಿ, ಜಾರಿಗೊಳಿಸುವುದು ಪ್ರಮುಖ ಅಜೆಂಡಾ ಸಮಾವೇಶದ್ದಾಗಿದೆ. ಇದಲ್ಲದೇ ಮಹಿಳಾ ಮೀಸಲಾತಿಯೂ ಸೇರಿದೆ. ಇಡಬ್ಲ್ಯುಎಸ್ ಶೇ 10ರ ಮೀಸಲಾತಿ ರದ್ದುಗೊಳಿಸುವ ಪ್ರಮುಖ ಹಕ್ಕೊತ್ತಾಯವನ್ನು ಸಮಾವೇಶ ಕೈಗೊಳ್ಳಲಿದೆ ಎಂದು ಶೋಷಿತ ಸಮುದಾಯದ ಒಕ್ಕೂಟದ ಸಂಚಾಲಕ ಬಿ.ಟಿ.ಜಗದೀಶ್ ತಿಳಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಪ ಸದಸ್ಯ ಎಂ.ಆರ್.ಸೀತಾರಾಂ,ಮಾಜಿ ಸಚಿವ ಎಚ್.ಆಂಜನೇಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಪಾಷಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಗುರುವಾರ ಸಿದ್ದತೆಗಳ ಪರಿಶೀಲಿಸಿದರು.

Share this article