ಜನಾರ್ದನ ರೆಡ್ಡಿ ಆರೋಪ, ರಾಜೀನಾಮೆಗೆ ಆಗ್ರಹ । ಕಲ್ಯಾಣ ಪ್ರದೇಶದಲ್ಲಿ ಬಿಜೆಪಿಗೆ ಸೋಲಿಗೆ ಖರ್ಗೆ ಕಣ್ಣೀರು ಕಾರಣಕನ್ನಡಪ್ರಭ ವಾರ್ತೆ ಗಂಗಾವತಿ
ಎಸ್‌ಟಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದರು.ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಈಗಾಗಲೇ ಹಗರಣಕ್ಕೆ ಸಂಬಂಧಿಸಿದಂತೆ ₹182 ಕೋಟಿಯನ್ನು ಗೋವಾ, ತೆಲಂಗಾಣ ಮತ್ತು ಬಳ್ಳಾರಿ ಖಾಸಗಿ ಕಂಪನಿಗಳು ಚಿನ್ನದ ಅಂಗಡಿಗಳಿಗೆ ವರ್ಗಾಯಿಸಿ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಭಾಗಿಯಾಗಿದ್ದರಿಂದ ಈ ಭ್ರಷ್ಟಾಚಾರ ನಡೆದಿದೆ. ಇದಕ್ಕೆ ಸಚಿವ ನಾಗೇಂದ್ರ ರಾಜೀನಾಮೆ ನೀಡಿರುವುದು ಸಾಲದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಇದರ ಹೊಣೆ ಹೊರಬೇಕು. ಇಲ್ಲದಿದ್ದರೆ ಸಿಎಂ ಸ್ಥಾನಕ್ಕೆ ರಾಜೇನಾಮೆ ನೀಡಬೇಕೆಂದು ಒತ್ತಾಯಿಸಿದರು.ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಣ್ಣೀರು ಹಾಕಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂದು ಹೇಳಿದರು. ಕೇವಲ ಕೊಪ್ಪಳ ಕ್ಷೇತ್ರ ಅಲ್ಲ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ 5 ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಾನು ಸಾಯುವುದರೊಳಗೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ, ಇಲ್ಲದಿದ್ದರೆ ನಾನು ಸತ್ತಾಗ ನನಗೆ ಒಂದು ಹಿಡಿ ಮಣ್ಣು ಹಾಕಲು ಬನ್ನಿರಿ ಎಂದು ಅನುಕಂಪ ಮಾತುಗಳು ಹೇಳಿದ್ದೇ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು ಎಂದರು.
ಜೂಜಾಟಕ್ಕೆ ಪೊಲೀಸ್ ಇಲಾಖೆ ಕುಮ್ಮಕ್ಕು:ನಗರ ಸೇರಿದಂತೆ ಗಂಗಾವತಿ ಕ್ಷೇತ್ರದಲ್ಲಿ ಅವ್ಯಾಹತವಾಗಿ ಜೂಜಾಟ ಹಾಗೂ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಇದಕ್ಕೆ ಪೊಲೀಸ್ ಇಲಾಖೆ ಕುಮ್ಮಕ್ಕು ನೀಡುತ್ತಿದೆ ಎಂದು ಜನಾರ್ದನ ರೆಡ್ಡಿ ಅಕ್ರೋಶ ವ್ಯಕ್ತ ಪಡಿಸಿದರು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜೂಜಾಟ ನಡೆಯುತ್ತಿರುವುದರ ಬಗ್ಗೆ ನನ್ನಲ್ಲಿ ಸಾಕ್ಷಿ ಇದೆ. ಪೊಲೀಸ್ ಮೇಲಾಧಿಕಾರಿಗಳು ಜೂಜಾಟ ಕೇಂದ್ರಗಳ ಮೇಲೆ ದಾಳಿ ಮಾಡಲು ಹೋಗುವುದರೊಳಗೆ ಕೆಲ ಪೊಲೀಸರು( ಇನ್ಫಾರ್ಮರ್) ಕೇಂದ್ರಗಳ ಮಾಲೀಕರಿಗೆ ಸುದ್ದಿ ಮುಟ್ಟಿಸುತ್ತಿದ್ದಾರೆ. ಇದರಲ್ಲಿ ಪೊಲೀಸ್ ಇಲಾಖೆಯೇ ಶಾಮೀಲಾಗಿದೆ ಎಂದು ದೂರಿದರು.ಕಳೆದ 10 ವರ್ಷದಿಂದ ಗಂಗಾವತಿಯಲ್ಲಿ ಕೆಲಸ ಮಾಡಿ ತಳವೂರಿರುವ ಪೊಲೀಸರನ್ನು ವರ್ಗಾವಣೆ ಮಾಡಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಅಲಿಖಾನ್, ಸೈಯದ್ ಅಲಿ, ನಗರಸಭಾ ಸದಸ್ಯ ಮುಸ್ತಾಖಲಿ ಇದ್ದರು.