ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ

KannadaprabhaNewsNetwork | Published : Aug 23, 2024 1:08 AM

ಸಾರಾಂಶ

ಸಿದ್ದರಾಮಯ್ಯ ಅವರು ತಾವು ಪಟ್ಟಭದ್ರ ವ್ಯಕ್ತಿಯಲ್ಲ, ಅಧಿಕಾರ ದಾಹಿಯಲ್ಲ ಎಂಬುದನ್ನು ತೋರಿಸಲು ಈಗ ಅವಕಾಶ ಒದಗಿಬಂದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ದಲಿತ ವರ್ಗದವರು ಸಿಎಂ ಆಗಲು ಅವಕಾಶ ಮಾಡಿಕೊಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಾಮಾಜಿಕ ಸಿದ್ಧಾಂತ ಮತ್ತು ಅಹಿಂದ ರಾಜಕಾರಣದ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದಾಹಿಯಲ್ಲ ಎಂಬುದನ್ನು ತೋರಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಎಸ್‌ಪಿ ರಾಜ್ಯ ಸಂಯೋಜಕ ಬಿ.ಎಸ್.ಕೃಷ್ಣಮೂರ್ತಿ ಆಗ್ರಹಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಾವು ಪಟ್ಟಭದ್ರ ವ್ಯಕ್ತಿಯಲ್ಲ, ಅಧಿಕಾರ ದಾಹಿಯಲ್ಲ ಎಂಬುದನ್ನು ತೋರಿಸಲು ಈಗ ಅವಕಾಶ ಒದಗಿಬಂದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ದಲಿತ ವರ್ಗದವರು ಸಿಎಂ ಆಗಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು.

ರಾಜ್ಯಪಾಲರು ಮೈಸೂರು ಮುಡಾ ಹಗರಣದ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಬಿಎಸ್ ಪಿ ಸ್ವಾಗತಿಸುತ್ತದೆ. ಯಾವುದೇ ಕಳಂಕ ವಿಲ್ಲದೆ ರಾಜಕಾರಣ ಮಾಡಿರುವುದು ತಾವೆಂದು ಸಿದ್ದರಾಮಯ್ಯನವರೇ ಹೇಳುತ್ತಾರೆ. ಈಗ ಅವರ ಮೇಲೆ ಕಳಂಕ ಬಂದಿದೆ. ಈ ಕಳಂಕ ನಿವಾರಿಸಿಕೊಂಡು ತಾನೊಬ್ಬ ಪ್ರಾಮಾಣಿಕ ಎಂದು ಸಾಬೀತು ಪಡಿಸಲು ತನಿಖೆ ಆಗಲೇಬೇಕು ಎಂದರು.

ಅಧಿಕಾರದಲ್ಲಿ ಇದ್ದುಕೊಂಡು ತನಿಖೆ ನಡೆದರೆ ಅದು ನ್ಯಾಯ ನೀಡಲಾರದು, ಅವರೂ ಪ್ರಾಮಾಣಿಕರೆಂದು ಜನರು ನಂಬಲಾರರು. ಹಾಗಾಗಿ ಸಿದ್ದರಾಮಯ್ಯ ಸಿಎಂ ಪದವಿಗೆ ರಾಜೀನಾಮೆ ನೀಡಿ ತನಿಖೆ ಎದುರಿಸಿ ಆರೋಪ ಮುಕ್ತರಾಗಿ ಕ್ಲೀನ್ ಚೀಟ್ ಸಿಕ್ಕನಂತರ ಮತ್ತೆ ಸಿಎಂ ಆಗುವುದು ಅಗತ್ಯ ಎಂದರು.

ದಲಿತರನ್ನು ಸಿಎಂ ಮಾಡಿ ಅಪವಾದದಿಂದ ಹೊರಬನ್ನಿ:

ಸಿಎಂ ಸಿದ್ದರಾಮಯ್ಯ ಅವರಿಂದ ಎರಡು ಬಾರಿ ದಲಿತ ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ.ಪರಮೇಶ್ವರ್ ಅವರಿಗೆ ಅನ್ಯಾಯವಾಗಿದೆ. ಆ ಅಪವಾದ ಸರಿಪಡಿಸಬೇಕಾದರೆ ದಲಿತ ಮುಖಂಡರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿದರು.

ದಲಿತ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಮುನಿಯಪ್ಪ, ಎಸ್.ಟಿ ಜನಾಂಗದ ಮುಖಂಡ ಸತೀಶ್ ಜಾರಕಿಹೊಳೆ ಈ ನಾಲ್ವರಲ್ಲಿ ಯಾರಾದರೂ ಒಬ್ಬರನ್ನು ಸಿಎಂ ಮಾಡುವ ಮೂಲಕ ತಮ್ಮ ಅಹಿಂದ ಬದ್ಧತೆಯನ್ನು ತೋರ್ಪಡಿಸಬೇಕೆಂದು ಒತ್ತಾಯಿಸಿದರು.

ರಾಜ್ಯಪಾಲರು ಭ್ರಷ್ಟಾಚಾರ ಸ್ವಚ್ಛಗೊಳಿಸಲಿ:

ರಾಜ್ಯಪಾಲರು ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಸ್ವಚ್ಛಗೊಳಿಸಬೇಕಾಗಿದೆ. ಅದಕ್ಕಾಗಿ ಜೆಡಿಎಸ್ ಎಚ್.ಡಿ.ಕುಮಾರಸ್ವಾಮಿ ಮೇಲಿನ ಆರೋಪಕ್ಕೂ ಪ್ರಾಸಿಕ್ಯೂಸನ್ ಮಾಡಿಸಬೇಕು. ಅದೇ ರೀತಿ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಜೊಲ್ಲೆ, ನಿರಾಣಿ ಮೇಲಿನ ದೂರುಗಳ ಬಗ್ಗೆಯೂ ತನಿಖೆ ನಡೆಸಲು ಆದೇಶಿಸುವ ಮೂಲಕ ತಮ್ಮ ಸ್ಥಾನಕ್ಕೆ ಘನತೆ ತರಬೇಕೆಂದು ಒತ್ತಾಯಿಸಿದರು. ಜೆಡಿಎಸ್ ಮತ್ತು ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ ನಾಯಕರು ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಜನರನ್ನು ಮರಳು ಮಾಡುತ್ತಿದ್ದಾರೆ. ಎಲ್ಲರೂ ಗಾಜಿನ ಮನೆಯಲ್ಲಿಯೇ ಇದ್ದು ಇವರ ಮುಖವಾಡವನ್ನು ಕಳಚುವ ಪ್ರಯತ್ನವನ್ನು ರಾಜ್ಯಪಾಲರು ಮಾಡಬೇಕು ಎಂದು ಆಗ್ರಹಿಸಿದರು.

ಹಣ ದುರುಪಯೋಗ ತಡೆಯಿರಿ:

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕಾಗಿ ಮೀಸಲಿರುವ ಎಸ್.ಸಿ ಟಿ.ಪಿ.ಎಸ್ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದನ್ನು ಬಿಎಸ್‌ಪಿ ಖಂಡಿಸುತ್ತದೆ. ಗ್ರಾಮಮಟ್ಟದಿಂದಲೇ ಜಾಗೃತಿ ಮೂಡಿಸುವ ಹೋರಾಟವನ್ನು ಆರಂಭಿಸುತ್ತಿರುವುದಾಗಿ ತಿಳಿಸಿದರು.

ಕಳೆದ 2 ವರ್ಷಗಳಿಂದ 25 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ. ಈ ಯೋಜನೆ ಹಣವನ್ನು ದಲಿತರ ಕಲ್ಯಾಣಕ್ಕೆ ಬಳಸಬೇಕೆಂದಿದ್ದರೂ ಪಾಲಿಸದಿರುವದು ವಿಪರ್ಯಾಸ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಯೋಜನೆಗಳನ್ನು ರೂಪಿಸಿ ದಲಿತರನ್ನು ಅಭಿವೃದ್ಧಿಗೊಳಿಸಬೇಕಾದ ಹಣವನ್ನು ತಮಗಿಷ್ಟ ಬಂದಂತೆ ಬಳಸುತ್ತಿರುವದು ದಲಿತರಿಗೆ ಮಾತ್ರವಲ್ಲ, ಸಂವಿಧಾನ ಶಿಲ್ಪಿಗೆ ಮಾಡಿದ ಅವಮಾನ ಎಂದರು.

ಈ ವೇಳೆ ಬಿಎಸ್‌ಪಿ ಜಿಲ್ಲಾ ಉಸ್ತುವಾರಿ ಚಿಕ್ಕಗಾಡಿಗನಹಳ್ಳಿ ಚೆಲುವರಾಜು, ಮುಖಂಡರಾದ ಹರಿಹರಪುರ ಶಿವಕುಮಾರ್, ಹೊಸಹೊಳಲು ಗೋವಿಂದರಾಜು, ಲೋಕೇಶ್, ಗಂಗಾಧರ್, ಸಿ.ಜಿ.ಪ್ರದೀಪ್, ಜಯಶೀಲ, ಜಯರಾಮು, ಶಿವಕುಮಾರ್, ಕೇಶವಕುಮಾರ್, ಕಾರ್ತಿಕ್ ಮುಖಂಡರು ಭಾಗವಹಿಸಿದ್ದರು.

Share this article