ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಗ್ರಾಮ ದೇವತೆ ದೇವಿರಮ್ಮನ ಜಾತ್ರಾ ಮಹೋತ್ಸವವು ಫೆ.10, 11ರಂದು ವಿಜೃಂಭಣೆಯಿಂದ ನಡೆಯಲಿದೆ.ಗ್ರಾಮದ ಪೂರ್ವಿಕರು ನಡೆಸಿಕೊಂಡು ಬಂದಿರುವ ಹಬ್ಬ ವರ್ಷದಿಂದ ವರ್ಷಕ್ಕೆ ವೈಭವವನ್ನು ಹೆಚ್ಚಿಸುತ್ತಿದ್ದಾರೆ. ರಥಸಪ್ತಮಿ ಹಬ್ಬದ ನಂತರ ಬರುವ ಮೊದಲ ಸೋಮವಾರವೇ ಪ್ರತಿವರ್ಷ ದೇವಿರಮ್ಮನ್ನ ಹೆಬ್ಬಾರೆ ಉತ್ಸವ ನಡೆಯುತ್ತಿದೆ. ಒಂದು ವರ್ಷಕ್ಕೆ ಒಮ್ಮೆಮಾತ್ರ ದೇವಸ್ಥಾನದ ಬಾಗಿಲು ತೆರೆಯುವುದು ಇದರ ಮತ್ತೊಂದು ವಿಶೇಷವಾಗಿದೆ.ಫೆ.10 ರಂದು ಮಧ್ಯಾಹ್ನ ಪುರೋಹಿತರು, ಎಲ್ಲಾ ಸಮುದಾಯದ ಯಜಮಾನರು, ಮುಖಂಡರ ನೇತೃತ್ವದಲ್ಲಿ ದೇವಸ್ಥಾನದ ಬಾಗಿಲು ತೆಗೆದು ದೇವರಿಗೆ ಅಭಿಷೇಕ ಸಲ್ಲಿಸಿ ಪೂಜೆ-ಪುನಸ್ಕಾರಗಳನ್ನು ಸಲ್ಲಿಸುವರು. ಹಬ್ಬದ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆಯೇ ಗ್ರಾಮದಲ್ಲಿ ಕರಕು ಹಾಕಲಾಗಿರುತ್ತದೆ. ಆ ಬಳಿಕ ಗ್ರಾಮದ ರಂಗದಲ್ಲಿ ನಿತ್ಯ ರಂಗಕುಣಿತ ಹಾಕಲಾಗುತ್ತದೆ.
ದೇವಿರಮ್ಮನ ಹೆಬ್ಬಾರೆ ಉತ್ಸವದಲ್ಲಿ ಗಂಡು ಹೆಬ್ಬಾರೆ ಮತ್ತು ಹೆಣ್ಣು ಹೆಬ್ಬಾರೆಯನ್ನು ಮೆರವಣಿಗೆ ಮಾಡಲಾಗುತ್ತದೆ. ಎರಡು ಹಬ್ಬಾರೆಗಳನ್ನು ಕಟ್ಟಿ, ಬಗೆಬಗೆ ಹೂಗಳಿಂದ ಅಲಂಕರಿಸಿ ಮೆರವಣಿಗೆ ನಡೆಸುವುದು ದಲಿತ ಜನಾಂಗದವರು, ಮದ್ದುಗುಂಡು ಸಿಡಿಸುವವರು ವಿಶ್ವಕರ್ಮ ಜನಾಂಗದವರು, ದೇವಿ ಹೆಬ್ಬಾರೆ ಉತ್ಸವದಲ್ಲಿ ದೀಪ ಬೆಳಗುವವರು ಮಡಿವಾಳ ಸಮುದಾಯ ಎನ್ನುವುದು ವಿಶೇಷವಾಗಿದೆ.ಸೋಮವಾರ ಮಧ್ಯಾಹ್ನ ಹೆಬ್ಬಾರೆ ತೆಗೆದುಕೊಂಡು ಚಿಕ್ಕಾಡೆ-ದೇವೇಗೌಡನಕೊಪ್ಪಲು ಮಧ್ಯೆ ಇರುವ ಚಿಕ್ಕಬೆಟ್ಟದ ಹೆಬ್ಬಾರೆ ಕಟ್ಟೆಯ ಬಳಿ ತೆಗೆದುಕೊಂಡು ಹೋಗಿ ಅಲ್ಲಿ ಹೆಬ್ಬಾರೆ ಕಟ್ಟಲಾಗುತ್ತದೆ. ಬಳಿಕ ಕುಂತಿಬೆಟ್ಟದ ತಪ್ಪಲ್ಲಿನ ಹೆಬ್ಬಾರೆ ಹಿರೇಮರಳಿ ಗ್ರಾಮಸ್ಥರಿಂದ ಮೊದಲು ಪೂಜೆ ಸಲ್ಲಿಕೆಯಾಗುತ್ತದೆ.
ನಂತರ ದೇವೇಗೌಡನಕೊಪ್ಪಲು ಬಳಿಯ ದೇವಿರಮ್ಮನ ತಂಗಿ ಕಾಚೇನಹಳ್ಳಿ ಅಮ್ಮನವರ ದೇವಸ್ಥಾನಕ್ಕೆ ತೆಗೆದುಕೊಂಡು ಬಂದು ಹೂವುಗಳಿಂದ ಅಲಂಕರಿಸಿ ಗ್ರಾಮಸ್ಥರು ಪೂಜೆಸಿ ನಂತರ ದೇವಿಯ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.ಬಳಿಕ ಅದ್ಧೂರಿ ಮೆರವಣಿಗೆ ಮೂಲಕ ಹೆಬ್ಬಾರೆಗಳನ್ನು ರಾತ್ರಿ ವೇಳೆಗೆ ಚಿಕ್ಕಾಡೆ ಗ್ರಾಮಕ್ಕೆ ತಂದು ನಾರಾಯಣಸ್ವಾಮಿ ದೇವಸ್ಥಾನದಲ್ಲಿರಿಸತ್ತಾರೆ. ಮೆರೆವಣಿಗೆ ಯುದ್ದಕ್ಕೂ ಭಕ್ತರು ಕುಣಿದು ಕುಪ್ಪಳಿಸುವ ಜತೆಗೆ ಮದ್ದುಗುಂಡು ಸಿಡಿಸುವ ಮೂಲಕ ಸಂಭ್ರಮಿಸುತ್ತಾರೆ.
ದೇವಸ್ಥಾನದ ಬಳಿ ಹರಕೆ ಹೊತ್ತು ಭಕ್ತರಿಗೆ ಬಾಯಿಬೀಗ ಹಾಕಲಾಗುತ್ತದೆ. ದೇವಸ್ಥಾನದ ಬಳಿ ಭಕ್ತರು ದೇವಿಗೆ ಪೂಜೆ ಪುನಸ್ಕಾರ ಸಲ್ಲಿಸುತ್ತಾರೆ. ಫೆ.11ರ ಮಂಗಳವಾರ ಮಧ್ಯಾಹ್ನ ಮೆರವಣಿಗೆ ಮೂಲಕ ದೇವಿರಮ್ಮನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಈ ವೇಳೆ ಹರಕೆ ಹೊತ್ತು ಭಕ್ತರು, ಸಾರ್ವಜನಕರು ಹೆಬ್ಬಾರೆ ಕೆಳಗೆ ಕುಳಿತುಕೊಂಡು ದೇವಿಗೆ ಭಕ್ತಿ ಸಮರ್ಪಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ.ಹರಕೆ ಹೊತ್ತ ಭಕ್ತರು ದೇವಿರಮ್ಮನ ದೇವಸ್ಥಾನಕ್ಕೆ ಬಾಳೆಹಣ್ಣಿನ ಗೊನೆಗಳು, ಕಜ್ಜಾಯವನ್ನು ಅರ್ಪಿಸಿ ಸಂಜೆಯವರೆಗೂ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಾರೆ. ನಂತರ ರಾತ್ರಿ ಗ್ರಾಮದ ಎಲ್ಲಾ ಸಮುದಾಯದ ಯಜಮಾನರು, ಪುರೋಹಿತರು, ಮುಖಂಡರು ಸಮ್ಮುಖದಲ್ಲಿ ಮತ್ತೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಚಿಕ್ಕಾಡೆ ಗ್ರಾಮದಲ್ಲಿ ಪ್ರತಿ ವರ್ಷವೂ ದೇವಿರಮ್ಮನ ಹಬ್ಬವನ್ನು ಎಲ್ಲರು ಜಾತಿ ಬೇದವಿಲ್ಲದೆ ಜತೆಗೂಡಿ ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಹಬ್ಬಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಆಗಮಿಸುತ್ತಾರೆ.
-ಪ್ರಸನ್ನಕುಮಾರ್, ಉದ್ಯಮಿ, ಯುವ ಮುಖಂಡರು, ಚಿಕ್ಕಾಡೆ