ಚಿಕ್ಕಲ್ಲೂರು ಜಾತ್ರೆ, ಚಂದ್ರಮಂಡಲೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : Jan 14, 2025, 01:01 AM IST
13ಸಿಎಚ್ಎನ್‌53ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲೂರು ಜಾತ್ರಾ ಮಹೋತ್ಸವ  ಪ್ರಯುಕ್ತ ಚಂದ್ರಮಂಡಲ ನಡೆಯುವ ಸ್ಥಳ ಸಕಲ ಸಿದ್ಧಗೊಂಡಿರುವುದು. | Kannada Prabha

ಸಾರಾಂಶ

ವಿಶಿಷ್ಟ ಆಚರಣೆ ಮತ್ತು ವಿಭಿನ್ನ ಸಂಸ್ಕೃತಿ ಮೂಲಕ ರಾಜ್ಯದ ಗಮನ ಸೆಳೆದಿರುವ ಚಿಕ್ಕಲ್ಲೂರು ಜಾತ್ರೆ ಐದು ದಿನಗಳ ಕಾಲ ನಡೆಯಲಿದ್ದು ಸೋಮವಾರ ವಿಜೃಂಭಣೆಯಿಂದ ವಿದ್ಯುಕ್ತ ಚಾಲನೆ ದೊರೆಯಿತು.

ಜಿ ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ವಿಶಿಷ್ಟ ಆಚರಣೆ ಮತ್ತು ವಿಭಿನ್ನ ಸಂಸ್ಕೃತಿ ಮೂಲಕ ರಾಜ್ಯದ ಗಮನ ಸೆಳೆದಿರುವ ಚಿಕ್ಕಲ್ಲೂರು ಜಾತ್ರೆ ಐದು ದಿನಗಳ ಕಾಲ ನಡೆಯಲಿದ್ದು ಸೋಮವಾರ ವಿಜೃಂಭಣೆಯಿಂದ ವಿದ್ಯುಕ್ತ ಚಾಲನೆ ದೊರೆಯಿತು.

ಐದು ಹಗಲು, ಐದು ರಾತ್ರಿ ಅಪಾರ ಜನಸಂದಣಿಯ ನಡುವೆ ಜರುಗುವ ಜಾತ್ರೆಯಲ್ಲಿ ಒಂದೊಂದು ದಿನವು ಒಂದೊಂದು ವಿಶೇಷ ಆಚರಣೆಗಳು ನಡೆಯುತ್ತವೆ. ಮೊದಲ ದಿನ ನಡೆದ ಚಂದ್ರಮಂಡಲ ಒಂದು ಬೆಳಕಿನ ಆಚರಣೆ. ಇದು ನಡೆಯುವುದು ಹುಣ್ಣಿಮೆಯ ದಿನ ಮಧ್ಯರಾತ್ರಿ. ಎರಡನೇ ದಿನ ಧರೆಗೆ ದೊಡ್ಡವರು ಎಂದು ಕರೆಯುವ ದೊಡ್ಡಮ್ಮತಾಯಿ ಮತ್ತು ರಾಚಪ್ಪಾಜಿ ಅವರಿಗೆ ಸಲ್ಲಿಸುವ ಸೇವೆ. ಮೂರನೇ ದಿನ ಮುಡಿಸೇವೆ ಅಥವಾ ನೀಲಗಾರರ ಧೀಕ್ಷೆ, ನಾಲ್ಕನೇ ದಿನ ಪಂಕ್ತಿಸೇವೆ (ಸಿದ್ಧರ ಸೇವೆ), ಐದನೇ ದಿನ ಮುತ್ತತ್ತಿರಾಯನ ಸೇವೆ ಅಥವಾ ಕಡೆ ಬಾಗಿಲು ಸೇವೆಯೊಂದಿಗೆ ಜಾತ್ರೆಗೆ ತೆರೆಬೀಳುತ್ತದೆ.

ಹಲುಗೂರು ಭಿಕ್ಷೆ ಬಳಿಕ ಒಕ್ಕಲು ಪಡೆದ ಕಾರಣ ಏಳು ಗ್ರಾಮಗಳ ಜನರು ಒಟ್ಟಾಗಿ ಸೇರಿ ಆಚರಿಸುವ ಈ ಆಚರಣೆಯಲ್ಲಿ ಚಂದ್ರಮಂಲೋತ್ಸವಕ್ಕೆ ವಿಶೇಷ ಆದ್ಯತೆ. ಚಿಕ್ಕಲ್ಲೂರು ಸುತ್ತಮುತ್ತಲಿನ ಬಾಣೂರು, ಬಾಳಗುಣಸೆ, ತೆಳ್ಳನೂರು, ಮಸ್ಕಯ್ಯನದೊಡ್ಡಿ, ಸುಂಡ್ರಳ್ಳಿ, ಕೊತ್ತನೂರು ಗ್ರಾಮಗಳ ಕುಲೇಳು ಹದಿನೆಂಟು ಸಮುದಾಯಗಳು ಒಟ್ಟಾಗಿ ಸೇರಿ ಆಚರಿಸುವ ವಿಶಿಷ್ಟ ಆಚರಣೆಯೇ ಚಂದ್ರಮಂಡಲ ಉತ್ಸವ.

ಈ ಉತ್ಸವಕ್ಕೆ ಒಂದೊಂದು ಸಮುದಾಯದ ಜನರು ಒಂದೊಂದು ಸೇವೆ ಸಲ್ಲಿಸುವ ನಿಯಮವಿದೆ. ಚಂದ್ರಮಂಡಲವೆಂಬ ಬಿದಿರಿನ ಕಿರೀಟ, ತೇರಿನ ಜ್ಯೋತಿಯ ಆಕೃತಿ ನಿರ್ಮಾಣಕ್ಕೆ ತೆಳ್ಳನೂರು ಗ್ರಾಮದ ಜನರು ಬೊಂಬು, ಬಿದಿರು, ಅಚ್ಚೆ ನೀಡಿದರೆ, ಮಸ್ಕಯ್ಯನದೊಡ್ಡಿ ಗ್ರಾಮಸ್ಥರು ಎಣ್ಣೆ, ಪೆಂಜು, ಬಾಣೂರು ಹಾಗೂ ಬಾಳಗುಣಸೆ ಗ್ರಾಮದವರು ಮಡಿ ಬಟ್ಟೆಯನ್ನು ನೀಡುತ್ತಾರೆ. ಹೀಗೆ ಎಲ್ಲ ಗ್ರಾಮಗಳು ನೀಡಿದ ವಸ್ತುಗಳನ್ನು ಸಂಗ್ರಹಿಸಿ ಶಾಗ್ಯ ಗ್ರಾಮದ ಗುರುಮನೆ ನೀಲಗಾರರು ಚಂದ್ರಮಂಡಲವನ್ನು ಸಾಂಪ್ರದಾಯದಂತೆ ಆಚರಿಸಿದರು.

ಶಾಗ್ಯ ಗ್ರಾಮದವರಿಗೆ ಸೀಮಿತ:

ಪ್ರತಿ ವರ್ಷ ಚಂದ್ರಮಂಡಲ ಕಟ್ಟುವ ಜವಾಬ್ದಾರಿ ಶಾಗ್ಯ ಗ್ರಾಮಸ್ಥರದು. ಜಾತ್ರೆಯ ಮೊದಲನೇ ದಿನವಾದ ಚಂದ್ರಮಂಡಲ ಉತ್ಸವ, ಕೊನೆಯ ದಿನವಾದ ಕಡೆ ಬಾಗಿಲ ಸೇವೆಯವರೆಗೂ ಈ ಗ್ರಾಮದ ಜನರು ಸಕ್ರಿಯವಾಗಿ ಭಾಗವಹಿಸುತ್ತಾರೆ. ಜಾತ್ರೆಯ ಕೊನೆಯ ದಿನವಾದ ಬಾಗಿಲ ಸೇವೆಯಲ್ಲಿ ಇವರಿಗೆ ಮಠದ ವತಿಯಿಂದ ವಿಶೇಷ ಆತಿಥ್ಯವನ್ನು ನೀಡಿ ಗೌರವಿಸಲಾಗುತ್ತದೆ. ಶ್ರೀ ಕ್ಷೇತ್ರ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆ ಆರಂಭ ಹಾಗೂ ತೆರೆ ಬೀಳುವುದು ಶಾಗ್ಯ ಗ್ರಾಮಸ್ಥರಿಂದಲೇ ಎಂಬುದು ಮತ್ತೊಂದು ವಿಶೇಷವಾಗಿದೆ.

ಕಟ್ಟುನಿಟ್ಟಿನ ಸೂಕ್ತ ಬಂದೋಬಸ್ತ್:ಪ್ರಸಿದ್ಧಿ ಪ್ರಖ್ಯಾತಿ ಪಡೆದಿರುವ ಚಿಕ್ಕಲೂರು ಜಾತ್ರೆ ಮಹೋತ್ಸವದ ಐದು ದಿನಗಳ ಜಾತ್ರೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಅವರ ಮಾರ್ಗದರ್ಶನದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಸಲಾಗಿದೆ. ಚಿಕ್ಕಲೂರು ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧ ಇರುವುದರಿಂದ ಪೊಲೀಸ್ ನಿಯೋಜನೆಗೊಳಿಸಲಾಗಿದೆ. ಜೊತೆಗೆ ಮತ್ತಿಪುರ ಕೊತ್ತನೂರು ಬಾಲ್ಗುಣಸೆ ಹಾಗೂ ರಾಚಪ್ಪಾಜಿನಗರ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಅನ್ನು ತೆರೆಯಲಾಗಿದ್ದು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸುವ ಮೂಲಕ ಪೊಲೀಸ್ ಇಲಾಖೆ ಬಿಗಿ ಪಹರೆ ಏರ್ಪಡಿಸಲಾಗಿದೆ.

ಜಾತ್ರೆಗೆ ಬರುವ ಭಕ್ತಾದಿಗಳಿಗೆ ಮತ್ತು ಅಂಗಡಿ ಮುಂಗಟ್ಟುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸಕಲ ಸಿದ್ಧತೆಗಳೊಂದಿಗೆ ಜಾತ್ರೆಗೆ ಚಿಕ್ಕಲೂರು ಸಿದ್ದಪ್ಪಾಜಿ ದೇವಾಲಯ ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ