ಚಿಕ್ಕನಾಯಕನಹಳ್ಳಿ ಪುರಸಭೆ ಹಣ ದುರುಪಯೋಗ: ಸದಸ್ಯರ ಆರೋಪ

KannadaprabhaNewsNetwork |  
Published : Nov 01, 2025, 02:15 AM IST
ಪಟ್ಟಣದ ಪುರಸಭೆಯಲ್ಲಿ ಗುರುವಾರ  ಪುರಸಭಾದ್ಯಕ್ಷ ದಯಾನಂದ್ ಇವರ ಅದ್ಯಕ್ಷತೆಯಲ್ಲಿ  ಸಾಮಾನ್ಯ ಸಭೆ ನಡೆಯಿತು. | Kannada Prabha

ಸಾರಾಂಶ

ಸದಸ್ಯೆ ಉಮಾ ಪರಮೇಶ್, ಪುರಸಭೆಯಲ್ಲಿ ಸದಸ್ಯರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ. ಅವರ ಮನಸ್ಸಿಗೆ ಬಂದಂತೆ ಆಡಳಿತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಮಹಿಳಾ ದಿನಾಚರಣೆಯ ಮಾಡುವಂತಹ ಕಾರ್ಯಕ್ರಮದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವುದರ ಮೂಲಕ ಹಣ ದುರುಪಯೋಗವಾಗುತ್ತಿದೆ, ಮೂರುತಿಂಗಳ ಹಿಂದೆಯೇ ಹಣ ಬಿಡುಗಡೆಮಾಡಿದ್ದರೂ ಕಾರ್ಯಕ್ರಮ ಮಾತ್ರ ನಡೆಯಲಿಲ್ಲ. ಈ ಬಗ್ಗೆ ಸದಸ್ಯರ ಗಮನಕ್ಕೂ ತಂದಿಲ್ಲ ಎಂದು ಮಹಿಳಾ ಸದಸ್ಯರು ಆರೋಪಿಸಿದರು.

ಪಟ್ಟಣದ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯೆ ಉಮಾ ಪರಮೇಶ್, ಪುರಸಭೆಯಲ್ಲಿ ಸದಸ್ಯರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ. ಅವರ ಮನಸ್ಸಿಗೆ ಬಂದಂತೆ ಆಡಳಿತ ಮಾಡುತ್ತಿದ್ದಾರೆ ಕಳೆದ ಎರಡು ವರ್ಷಗಳಲ್ಲಿ ಮಹಿಳಾ ದಿನಾಚಾರಣೆ ಮಾಡುವುದನ್ನು ಬಿಟ್ಟು ಈ ಕಾರ್ಯಕ್ರಮದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಮುಂದಾಗಿದ್ದಾರೆ ಇದು ಸರಿಯಲ್ಲ ಎಂದು ಆರೋಪಿಸಿದರು

ಸದಸ್ಯೆ ಪೂರ್ಣಿಮ ಮಾತನಾಡಿ, ಯಾವುದೇ ಹಣ ದುರುಪಯೋಗವಾಗಿಲ್ಲ. ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸೇರಿದಂತೆ ಸದಸ್ಯರು ಎಲ್ಲಾ ಸೇರಿ 30 ಜನ ಮಹಿಳೆಯರಿದ್ದು ಕಳೆದ ವರ್ಷ ಹಾಗೂ ಈ ವರ್ಷದ ಎರಡು ಕಾರ್ಯಕ್ರಮಗಳ ಹಣವನ್ನು ಮಹಿಳೆಯರಿಗೆ ಅನುಕೂಲವಾಗುವಂತೆ ಪ್ರವಾಸಕ್ಕೆ ಬಳಸುವಂತೆ 23 ಜನರು ತೀರ್ಮಾನಿಸಿದ್ದಾರೆ. ಅದರೆ ಇದರಲ್ಲಿ ಕೆಲವರು ವಿರೋಧಿಸಿದರು. ಅದರೆ ಹೆಚ್ಚುಜನ ಪ್ರವಾಸ ಹೋಗುವುದರ ಬಗ್ಗೆ ಬೆಂಬಲಿಸಿದ್ದರಿಂದ ಅದಕ್ಕೆ ತೀರ್ಮಾನಿಸಿದ್ದು, ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಉತ್ತರಿಸಿದರು.

ಸದಸ್ಯೆ ರೇಣುಕಮ್ಮ ಮಾತನಾಡಿ, ಅಲೆಮಾರಿ ಜನಾಂಗದವರು ವಾಸಿಸುತ್ತಿರುವ ಜಾಗ ಹೊನ್ನೇಬಾಗಿ ಗ್ರಾಮ ಪಂಚಾಯಿತಿಗೆ ಸೇರಿದ್ದು, ಅಲ್ಲಿಗೆ ಪುರಸಭೆಯ ಹಣದಿಂದ ಬೋರ್‌ವೆಲ್ ಕೊರೆಸುವ ಅವಶ್ಯಕತೆ ಇರಲಿಲ್ಲ. ಅದರೂ 15ನೇ ಹಣಕಾಸು ಯೋಜನೆಯಡಿ 71 ಲಕ್ಷ ಇದ್ದು ಅದರಲ್ಲಿ ಕೊರೆಸಬಹುದಾಗಿತ್ತು. ಈ ರೀತಿಯಲ್ಲಿ ಅವೈಜ್ಞಾನಿಕವಾಗಿ ಹಣವನ್ನು ದುರುಪಯೋಗ ಮಾಡುತ್ತೀರಿ ಎಂದು ಆರೋಪಿಸಿದರು.

ಮುಖ್ಯಾಧಿಕಾರಿ ಮಂಜಮ್ಮ ಮಾತನಾಡಿ, ಯೋಜನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಅವರಿಗೆ ಬೋರ್‌ವೆಲ್ ಕೊರೆಸಲಾಗಿದೆ ಎಂದು ಉತ್ತರಿಸಿದರು.

ಸದಸ್ಯ ಮಲ್ಲೇಶಯ್ಯ ಮಾತನಾಡಿ, ನೌಕರರ ಬೇಜಾವಾಬ್ದಾರಿತನದಿಂದ 50 ಎಚ್‌ಪಿಯ ಎರಡು ಬೋರ್‌ವೆಲ್‌ಗಳ ಮೋಟಾರ್‌ಪಂಪ್ ಸುಟ್ಟು ಹೋಗಿದೆ. ಇದಕ್ಕೆ ಯಾರು ಹೊಣೆ ಕೂಡಲೇ ಇದಕ್ಕೆ ತಗಲುವ ವೆಚ್ಚವನ್ನು ಅವರಿಂದಲೇ ಭರಿಸಿ ಎಂದರು.

ನಾಮಿನಿ ಸದಸ್ಯ ಮಹಮದ್‌ ಹುಸೇನ್ ಮಾತನಾಡಿ, ಈ ಹಿಂದೆ ಬೆಸ್ಕಾಂ ಇಲಾಖೆಗೆ 25 ಲಕ್ಷ ಹಣವನ್ನು ನೀಡಿದ್ದು ಅದರ ಕೆಲಸ ಏನಾಗಿದೆ ಎಂದು ಹಾಗೂ ಇಂಜನಿಯರ್ ಓಡಾಡಿರುವಂತಹ ಕಾರಿನ ಬಾಡಿಗೆ ಟೆಂಡರ್ ಬಗ್ಗೆ, ಮುಖ್ಯಾಧಿಕಾರಿಗಳು ಒಡಾಡುವಂತಹ ಕಾರಿನ ಬಾಡಿಗೆಯ ಬಗ್ಗೆ ಮಾಹಿತಿ ಕೇಳಿದರು ಇದುವರೆಗೆ ನೀಡಿಲ್ಲ ಎಂದು ಆರೋಪಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಸುರೇಶ್ ಮಾತನಾಡಿ, ಪುರಸಭೆಯಲ್ಲಿರುವಂತಹ ಬಹುತೇಕ ಮುಖ್ಯಾಧಿಕಾರಿ ಸೇರಿದಂತೆ ಎಲ್ಲರೂ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲ ಇದರಿಂದ ಸಾರ್ವಜನಿಕ ಕೆಲಸಗಳಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಯಾಗಿ ಕೇಂದ್ರ ಸ್ಥಾನದಲ್ಲಿದ್ದು ಕೆಲಸ ಮಾಡಿ ಎಂದರು.

ಸದಸ್ಯ ರೇಣುಕ ಪ್ರಸಾದ್ (ಶ್ಯಾಮ್) ಮಾತನಾಡಿ, ನಮ್ಮ ಪುರಸಭೆಯ ಜನಪ್ರತಿನಿಧಿಗಳ ಅಧಿಕಾರವಧಿ ನವೆಂಬರ್ ೩ಕ್ಕೆ ಅಂತ್ಯವಾಗಲಿದ್ದು, ಈ ಬಗ್ಗೆ ನಮಗೆ ಸರಿಯಾಗಿ ಸಿಗಬೇಕಾದಂತಹ ಮೀಸಲಾತಿಯ ಅಧಿಕಾರ ಸರಿಯಾಗಿ ಸಿಕ್ಕಿರುವುದಿಲ್ಲ. ಅದ್ದರಿಂದ ಈ ಬಗ್ಗೆ ಎಲ್ಲಾ ಸದಸ್ಯರು ನ್ಯಾಯಾಲಯದ ಮೊರೆಹೋಗಲಾಗುವುದು ಎಂದರು.

ಸಭೆಯ ಅದ್ಯಕ್ಷತೆಯನ್ನು ಪುರಸಭಾದ್ಯಕ್ಷ ದಯಾನಂದ್(ಕೆಂಗಲ್) ವಹಿಸಿದ್ದು ಉಪಾದ್ಯಕ್ಷ ರಾಜಶೇಖರ್ ಸೇರಿದಂತೆ ಸದಸ್ಯರುಗಳು ಹಾಜರಿದ್ದರು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!