ಮಹಾರಾಷ್ಟ್ರದಲ್ಲಿ ಕರ್ನಾಟಕದ ವ್ಯಕ್ತಿ ಜಿಬಿಎಸ್‌ ಸೋಂಕಿಗೆ ಬಲಿ

KannadaprabhaNewsNetwork |  
Published : Feb 18, 2025, 12:32 AM IST
ಜಬಿಎಸ್‌ | Kannada Prabha

ಸಾರಾಂಶ

ಕಳೆದ 2 ತಿಂಗಳ ಅವಧಿಯಲ್ಲಿ ದೇಶದ 5 ರಾಜ್ಯಗಳಲ್ಲಿ 18 ಜನರನ್ನು ಬಲಿ ಪಡೆದಿರುವ ನರಸಂಬಂಧಿ ವ್ಯಾಧಿಯಾದ ಗುಯಿಲಿನ್ ಬರ್ರೆ ಸಿಂಡ್ರೋಮ್‌ (ಜಿಬಿಎಸ್‌)ಗೆ ಇದೀಗ ಕರ್ನಾಟಕದ ಮೊದಲ ವ್ಯಕ್ತಿ ಬಲಿಯಾಗಿದ್ದಾರೆ.

- ಕೊಲ್ಲಾಪುರ ಆಸ್ಪತ್ರೇಲಿ ಚಿಕಿತ್ಸೆ ವೇಳೆ ನಿಧನ- ಈ ವ್ಯಾಧಿಗೆ ಕರ್ನಾಟಕದಲ್ಲಿ ಮೊದಲ ಸಾವು

ಏನಿದು ಜಿಬಿಎಸ್‌?ಗುಯಿಲಿನ್ ಬರ್ರೆ ಸಿಂಡ್ರೋಮ್‌. ದೇಹದ ನರಮಂಡಲ ಹಾಗೂ ರೋಗನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ 5 ರಾಜ್ಯಗಳಿಗೆ ಹಬ್ಬಿದ್ದು, 19 ಮಂದಿಯನ್ನು ಬಲಿ ಪಡೆದಿದೆ.ಹೇಗೆ ಬರುತ್ತೆ?ನಿಖರ ಕಾರಣ ಇಲ್ಲ. ಕಲುಷಿತ ನೀರು, ಆಹಾರ ಸೇವನೆಯಿಂದ ಕಾಣಿಸಿಕೊಳ್ಳುವ ಸಾಧ್ಯತೆ ಇದೆ

===

ಕೊಲ್ಹಾಪುರ/ ಚಿಕ್ಕೋಡಿ: ಕಳೆದ 2 ತಿಂಗಳ ಅವಧಿಯಲ್ಲಿ ದೇಶದ 5 ರಾಜ್ಯಗಳಲ್ಲಿ 18 ಜನರನ್ನು ಬಲಿ ಪಡೆದಿರುವ ನರಸಂಬಂಧಿ ವ್ಯಾಧಿಯಾದ ಗುಯಿಲಿನ್ ಬರ್ರೆ ಸಿಂಡ್ರೋಮ್‌ (ಜಿಬಿಎಸ್‌)ಗೆ ಇದೀಗ ಕರ್ನಾಟಕದ ಮೊದಲ ವ್ಯಕ್ತಿ ಬಲಿಯಾಗಿದ್ದಾರೆ.

ಚಿಕ್ಕೋಡಿಯ 64 ವರ್ಷದ ವೃದ್ಧರೊಬ್ಬರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶನಿವಾರ ಈ ವ್ಯಾಧಿಯಿಂದ ಸಾವಿಗೀಡಾಗಿದ್ದಾರೆ. ಇದು ಈ ಕಾಯಿಲೆಗೆ ರಾಜ್ಯದವರು ಬಲಿಯಾದ ಮೊದಲ ಪ್ರಕರಣವಾಗಿದೆ. ಇದರೊಂದಿಗೆ ಕರ್ನಾಟಕ ಅಕ್ಕಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈಗಾಗಲೇ ಈ ವ್ಯಾಧಿ ಕಾಣಿಸಿಕೊಂಡಿದೆ.

ಇದು ಸಾಂಕ್ರಾಮಿಕ ಅಲ್ಲವಾದರೂ, ಭಾರೀ ಪ್ರಮಾಣದಲ್ಲಿ ಮಾರಣಾಂತಿಕವೂ ಅಲ್ಲವಾದರೂ, ವ್ಯಾಧಿ ತಗಲಲು ನಿಖರ ಕಾರಣ ಏನು ಎಂಬುದು ಇದುವರೆಗೂ ಖಚಿತವಾದ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಈ ಕುರಿತು ಆತಂಕ ಉಂಟಾಗಿದೆ. ಮೊದಲಿಗೆ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿದ್ದ ಜಿಬಿಎಸ್‌ಗೆ ಈವರೆಗೆ ಮಹಾರಾಷ್ಟ್ರದಲ್ಲಿ 11, ಪಶ್ಚಿಮ ಬಂಗಾಳದಲ್ಲಿ 3, ಆಂಧ್ರಪ್ರದೇಶದಲ್ಲಿ 2, ಅಸ್ಸಾಂ, ತಮಿಳುನಾಡು ಹಾಗೂ ಕರ್ನಾಟಕದ ಒಬ್ಬರು ಸೇರಿ ದೇಶದಲ್ಲಿ ಒಟ್ಟು 19 ಜನ ಸಾವನ್ನಪ್ಪಿದ್ದಾರೆ.

ಏನಿದು ಜಿಬಿಎಸ್‌?:

ಇದೊಂದು ನರಸಂಬಂಧಿ ವ್ಯಾಧಿ. ದೇಹದ ನರಮಂಡಲದ ಮೇಲೆ ಹಾಗೂ ರೋಗ ನಿರೋಧಕ ಶಕ್ತಿಯ ಮೇಲೆ ಇದು ಪ್ರಭಾವ ಬೀರುತ್ತದೆ. ಈ ವ್ಯಾಧಿಗೆ ತುತ್ತಾದ ವ್ಯಕ್ತಿಯ ಕೈಕಾಲು ಮರಗಟ್ಟಿ, ಮಾಂಸಖಂಡಗಳು ಬಲಹೀನವಾಗಿ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಅಂಗಾಂಗಗಳ ನಡುವೆ ಸಹಕಾರ ಹಾಗೂ ಸಮತೋಲನ ಸಾಧಿಸಲು ಕಷ್ಟವಾಗುತ್ತದೆ. ಇದು ಹೆಚ್ಚಾಗಿ ನಡುವಯಸ್ಕರು ಮತ್ತು ಮಕ್ಕಳಲ್ಲಿ ಕಂಡುಬರುತ್ತದೆ. ದೇಹದಲ್ಲಿನ ರೋಗನಿರೋಧಕ ಶಕ್ತಿಯು ನರಗಳ ಮೇಲೆ ದಾಳಿ ನಡೆಸಿದಾಗ ಜಿಬಿಎಸ್‌ ಉಂಟಾಗುತ್ತದೆ.

ಕಾರಣ ಏನು?:

ಜಿಬಿಎಸ್‌ ವ್ಯಾಧಿಗೆ ನಿಖರ ಕಾರಣ ಪತ್ತೆಯಾಗಿಲ್ಲವಾದರೂ, ಇದು ಕಲುಷಿತ ನೀರು, ಆಹಾರ ಸೇವನೆಯಿಂದ ನಮ್ಮ ದೇಹವನ್ನು ಸೇರುವ ವೈರಸ್‌ ಹಾಗೂ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕು ಉಂಟಾಗಿದ್ದರೆ, ಇತ್ತೀಚೆಗಷ್ಟೇ ಲಸಿಕೆ ಪಡೆದಿದ್ದರೆ, ಶಸ್ತ್ರಚಿಕಿತ್ಸೆ ಮತ್ತು ನರರೋಗಗಳಿಗೆ ಒಳಗಾಗಿದ್ದರೆ ಈ ಕಾಯಿಲೆ ಬರುವ ಸಂಭವ ಅಧಿಕವಿರುತ್ತದೆ ಎನ್ನಲಾಗುತ್ತಿದೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ