ಕನ್ನಡಪ್ರಭ ವಾರ್ತೆ ಬೆಂಗಳೂರು
ಯಾವುದೇ ಉದ್ಯೋಗ ಮಾಡದೆ ಕೇವಲ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಕಾರಣ ಪತ್ನಿಗೆ ಜೀವನಾಂಶ ನೀಡಲಾಗದು ಎಂಬ ಪತಿಯ ವಾದ ತಿರಸ್ಕರಿಸಿರುವ ಹೈಕೋರ್ಟ್, ಮಕ್ಕಳನ್ನು ನೋಡಿಕೊಳ್ಳುವುದು ಸಹ ಪೂರ್ಣಾವಧಿಯ ಕೆಲಸವಾಗಿದೆ. ಆದ್ದರಿಂದ ಪತ್ನಿಗೆ ಜೀವನಾಂಶ ನೀಡಲೇಬೇಕು ಎಂದು ಆದೇಶಿಸಿದೆ.
ಭಿನ್ನಾಭಿಪ್ರಾಯ ಹಾಗೂ ಮನಸ್ತಾಪಗಳಿಂದಾಗಿ ಪತಿಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸ ಮಾಡುತ್ತಿರುವ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯ ತನಗೆ ಮಾಸಿಕ ನಿಗದಿಪಡಿಸಿರುವ 18 ಸಾವಿರ ರು. ಜೀವನಾಂಶವನ್ನು 36 ಸಾವಿರ ರು.ಗೆ ಹೆಚ್ಚಿಸಲು ಆದೇಶಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿ, ಅರ್ಜಿದಾರೆಗೆ ಮಾಸಿಕ 36 ಸಾವಿರ ರು. ಜೀವನಾಂಶ ಪಾವತಿಸಬೇಕು ಎಂದು ಪತಿಗೆ ನಿರ್ದೇಶಿಸಿದೆ.
ಪತ್ನಿ ಜೀವನಾಂಶ ಕೇಳಿರುವುದನ್ನು ಆಕ್ಷೇಪಿಸಿದ್ದ ಪತಿ, ಪತ್ನಿ ಉದ್ಯೋಗ ಮಾಡಲು ಸಮರ್ಥರಾಗಿದ್ದಾರೆ ಹಾಗೂ ಅರ್ಹತೆ ಸಹ ಹೊಂದಿದ್ದಾರೆ. ಅವರು ಉದ್ಯೊಗಕ್ಕೆ ತೆರಳಿ ದುಡಿದು ಹಣ ಸಂಪಾದಿಸಿ ಜೀವನ ನಡೆಸಬಹುದು. ಅದು ಬಿಟ್ಟು ಪತಿಯ ಜೀವನಾಂಶದಲ್ಲೇ ಜೀವನ ನಡೆಸಲು ಬಯಸುತ್ತಿದ್ದಾರೆ.
ಜತೆಗೆ, ಮಕ್ಕಳನ್ನು ನೋಡಿಕೊಳ್ಳುವುದು ಸ್ವಲ್ಪ ಹೊತ್ತಿನ ಕೆಲಸವಷ್ಟೇ ಹೊರತು ಪೂರ್ಣಾವಧಿಯ ಕೆಲಸವಲ್ಲ ಎಂದು ವಾದ ಮಂಡಿಸಿದ್ದರು. ಈ ವಾದ ತಿರಸ್ಕರಿಸಿದ ಹೈಕೋರ್ಟ್, ಮಕ್ಕಳನ್ನು ನೋಡಿಕೊಳ್ಳಲು ಪತ್ನಿಯೇ ಹಣ ದುಡಿಯಬಹುದು.
ಆದರೆ, ಸುಮ್ಮನೆ ಸೋಂಬೇರಿಯಂತೆ ಓಡಾಡಿಕೊಂಡಿದ್ದಾರೆ ಎಂಬ ಪತಿಯ ವಾದ ಸರಿಯಲ್ಲ. ಅಂತಹ ಹೇಳಿಕೆಗಳ ಮೂಲಕ ನ್ಯಾಯಾಲಯದ ಹಾದಿ ತಪ್ಪಿಸಬಾರದು.
ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿಯ ಕೆಲಸವಾಗಿರುತ್ತದೆ. ಕಾನೂನು ಪ್ರಕಾರ ಪತ್ನಿಗೆ ಪತಿಯು ಜೀವನಾಂಶ ನೀಡಲೇಬೇಕು ಹಾಗೂ ಮಕ್ಕಳನ್ನು ನೋಡಿಕೊಳ್ಳಬೇಕು.
ಆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ಅಭಿಪ್ರಾಯಪಟ್ಟಿದೆ.ಜೊತೆಗೆ, ಕೇಂದ್ರ ಸರ್ಕಾರದ ಅಡಿಗೆ ಬರುವ ಬ್ಯಾಂಕೊಂದರಲ್ಲಿ ವ್ಯವಸ್ಥಾಪಕರಾಗಿ ಪತಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅವರನ್ನು ಖಾಸಗಿ ಉದ್ಯೋಗಿಗಳಂತೆ ಯಾವಾಗ ಬೇಕಾದರೂ ತೆಗೆದುಹಾಕಲು ಹಾಕಲು ಸಾಧ್ಯವಿಲ್ಲ. ಅವರ ಉದ್ಯೋಗಕ್ಕೆ ನಿಗದಿತ ವಯಸ್ಸಿನವರೆಗೆ (ನಿವೃತ್ತಿ ವಯಸ್ಸು) ಭದ್ರತೆಯಿದೆ.
ಸದ್ಯ ಪತಿ ಸುಮಾರು 90 ಸಾವಿರ ರು. ವೇತನ ಪಡೆಯುತ್ತಿದ್ದಾರೆ. ಆದ್ದರಿಂದ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಪತ್ನಿಗೆ ಮಾಸಿಕ 36 ಸಾವಿರ ರು. ಜೀವನಾಂಶ ನೀಡಲೇಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 2012ರಲ್ಲಿ ವಿವಾಹವಾಗಿದ್ದ ದಂಪತಿಗೆ 11 ವರ್ಷ ಹಾಗೂ 6 ವರ್ಷದ ಮಕ್ಕಳಿದ್ದಾರೆ. ಪತಿ ಭಾರತ ಸರ್ಕಾರದ ಸ್ವಾಮ್ಯದ ಬ್ಯಾಂಕೊಂದರ ವ್ಯವಸ್ಥಾಪಕರು.
ಮೊದಲಿಗೆ ಪತ್ನಿ ಉಪನ್ಯಾಸಕಿಯಾಗಿದ್ದರು. ಆದರೆ, ಮೊದಲ ಮಗುವಾದ ನಂತರ ಉದ್ಯೋಗ ತ್ಯಜಿಸಿದ್ದರು. ನಂತರ ಮತ್ತೊಂದು ಮಗುವಾಯಿತು. ಹಾಗಾಗಿ ಅವರು ಉದ್ಯೋಗಕ್ಕೆ ಹೋಗುತ್ತಿರಲಿಲ್ಲ.
ಎರಡು ಮಕ್ಕಳಾದ ನಂತರ ಇಬ್ಬರ ನಡುವೆ ಮನಸ್ತಾಪ ಹಾಗೂ ಭಿನ್ನಾಭಿಪ್ರಾಯಗಳು ಮೂಡಿ ಪರಸ್ಪರ ಬೇರ್ಪಟ್ಟು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ.
ಮಕ್ಕಳು ತಾಯಿಯ ಬಳಿಯೇ ವಾಸವಿದ್ದಾರೆ. ಪರಸ್ಪರ ವಿಚ್ಛೇದನ ಕೋರಿ ದಂಪತಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಬಾಕಿಯಿರುವಾಗಲೇ ಪತ್ನಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ಪ್ರತಿ ತಿಂಗಳು 36 ಸಾವಿರ ರು. ಮಧ್ಯಂತರ ಜೀವನಾಂಶ ನೀಡಲು ಪತಿಗೆ ಆದೇಶಿಸುವಂತೆ ಕೋರಿದ್ದರು.
ಅದರ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಪತ್ನಿಗೆ ಮಾಸಿಕ 18 ಸಾವಿರ ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಪತ್ನಿ, ತನಗೆ ಮಾಸಿಕ 36 ಸಾವಿರ ರು. ಜೀವನಾಂಶ ನೀಡಲು ಪತಿಗೆ ಆದೇಶಿಸುವಂತೆ ಕೋರಿದ್ದರು.