ಬಾಲ್ಯವಿವಾಹ ಮಕ್ಕಳ ಹಕ್ಕುಗಳ ಶೋಷಣೆಯ ಮುಂದುವರಿದ ಭಾಗ-ನ್ಯಾಯಾಧೀಶ ಹಿರಿಕುಡೆ

KannadaprabhaNewsNetwork |  
Published : Nov 28, 2024, 12:36 AM IST
ಮ | Kannada Prabha

ಸಾರಾಂಶ

ಮಾನಸಿಕ ಪ್ರಬುದ್ಧತೆ ಇಲ್ಲದಾಗ ತೆಗೆದುಕೊಳ್ಳುವ ನಿರ್ಣಯ ಹಾಗೂ ಪರಸ್ಪರ ಸಮ್ಮತಿ ಇಲ್ಲದೇ ಕೇವಲ ಸಂಪ್ರದಾಯದ ನೆಪದಲ್ಲಿ ನಡೆಯುವ ಮದುವೆ ಎಷ್ಟರಮಟ್ಟಗೆ ಸರಿ..? ಹೀಗಾಗಿ ಬಾಲ್ಯ ವಿವಾಹ ಎಂಬುದು ಮಕ್ಕಳ ಹಕ್ಕುಗಳ ಶೋಷಣೆಯ ಮುಂದುವರಿದ ಭಾಗವಾಗಿದ್ದು ಇದೊಂದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ್ ಹಿರಿಕುಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಮಾನಸಿಕ ಪ್ರಬುದ್ಧತೆ ಇಲ್ಲದಾಗ ತೆಗೆದುಕೊಳ್ಳುವ ನಿರ್ಣಯ ಹಾಗೂ ಪರಸ್ಪರ ಸಮ್ಮತಿ ಇಲ್ಲದೇ ಕೇವಲ ಸಂಪ್ರದಾಯದ ನೆಪದಲ್ಲಿ ನಡೆಯುವ ಮದುವೆ ಎಷ್ಟರಮಟ್ಟಗೆ ಸರಿ..? ಹೀಗಾಗಿ ಬಾಲ್ಯ ವಿವಾಹ ಎಂಬುದು ಮಕ್ಕಳ ಹಕ್ಕುಗಳ ಶೋಷಣೆಯ ಮುಂದುವರಿದ ಭಾಗವಾಗಿದ್ದು ಇದೊಂದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ್ ಹಿರಿಕುಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಪಂಚಾಯತ್ ಸುವರ್ಣಸೌಧದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಶಿಶು ಅಭಿವೃದ್ಧಿ ಇಲಾಖೆ, ತಾಲೂಕು ಸಾರ್ವಜನಿಕ ಆಸ್ಪತ್ರೆ ಬ್ಯಾಡಗಿ ಇವರ ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಫೂರ್ವ ಹಾಗೂ ಸ್ವಾತಂತ್ರ್ಯಾನಂತರ ಕೆಲವು ದಶಕಗಳ ಕಾಲ ಬಾಲ್ಯ ವಿವಾಹ ಕೂಡ ಪ್ರಚಲಿತ ಪದ್ಧತಿಯಾಗಿತ್ತು. ಹೆಣ್ಣುಮಗು ಬೇರೆಯವರ ಸೊತ್ತು ಪರಿಭಾವಿಸುತ್ತಿದ್ದ ಅಂದಿನ ಹಿರಿಯರು ಆದಷ್ಟು ಬೇಗನೆ ತಮ್ಮ ಕುಟುಂಬದ ವಿಸ್ತರಣೆ ಉದ್ದೇಶದಿಂದ ಮಾನಸಿಕವಾಗಿ ಅಥವಾ ದೈಹಿಕವಾಗಿ ಸಿದ್ದರಿಲ್ಲದ 18 ವರ್ಷದೊಳಗಿನ ಮಕ್ಕಳಿಗೆ ಅನೌಪಚಾರಿಕವಾಗಿ ವಿವಾಹ ನೆರವೇರಿಸುತ್ತಿದ್ದರು. ಆದರೆ ವೈಜ್ಞಾನಿಕ ಕಾರಣಗಳಿಂದ ಇದೊಂದು ಅನಿಷ್ಟ ಪದ್ಧತಿಯಾಗಿದ್ದು ಪ್ರಪಂಚ ವೇಗವಾಗಿ ವಿಕಸನಗೊಳ್ಳುತ್ತಿರುವ ಇಂತಹ ಸನ್ನಿವೇಶದಲ್ಲಿ ಕಾನೂನಾತ್ಮಕವಾಗಿ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಕಿರಿಯಶ್ರೇಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಹುಡುಗರು ಹಣಕಾಸಿನ ಜವಾಬ್ದಾರಿ ಹೊರಬೇಕು, ಹುಡುಗಿಯರು ಮನೆ ಮತ್ತು ಕುಟುಂಬ ನೋಡಿಕೊಳ್ಳುತ್ತಾರೆ ಎಂಬ ನಿರೀಕ್ಷೆಗಳು ಪ್ರಾಯೋಗಿಕವಾಗಿ ಅಷ್ಟೊಂದು ಯಶಸ್ಸು ಕಂಡಿಲ್ಲ, ಬಾಲ್ಯ ವಿವಾಹದಿಂದ ಅಪ್ರಾಪ್ತರ ಶಿಕ್ಷಣ ಕಲಿಯುವ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತಿದೆ, ವಯಸ್ಸಿಗೆ ಮುನ್ನವೇ ಮದುವೆ ಮಾಡುವುದು ಅವರ ಹಕ್ಕನ್ನು ದುರ್ಬಳಕೆ ಮಾಡಿಕೊಂಡಂತಾಗಲಿದೆ. ಆದ್ದರಿಂದ ಮದುವೆಯಾಗಲು 18 ವರ್ಷ ಮೇಲ್ಪಟ್ಟಿರಬೇಕಾಗುತ್ತದೆ ಅದಾಗ್ಯೂ ಇಂತಹ ಮದುವೆಗಳಲ್ಲಿ ಪಾಲ್ಗೊಳ್ಳುವ ಯಾವುದೇ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂದರು.

ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್.ಬಾರ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಪಿ. ಹಂಜಿಗಿ, ಸಹ ಕಾರ್ಯದರ್ಶಿ ಎನ್ .ಬಿ.ಬಳಿಗಾರ, ತಾಲೂಕು ಆರೋಗ್ಯಾಧಿಕಾರಿ ಕಾಂತೇಶ ಭಜಂತ್ರಿ, ಹಿರಿಯ ವಕೀಲರಾದ ಪಿ.ಸಿ. ಶೀಗಿಹಳ್ಳಿ, ಎಂ.ಜೆ. ಮುಲ್ಲಾ, ಎಂ.ಜೆ. ಪಾಟೀಲ್, ಎಸ್ .ಎಚ್. . ಗುಂಡಪ್ಪನವರ, ಪ್ಯಾನಲ್ ವಕೀಲರಾದ ಭಾರತಿ ಕುಲ್ಕರ್ಣಿ, ಎಸ್.ಎಸ್. ಕೊಣ್ಣೂರ ಉಪಸ್ಥಿತರಿದ್ದರು. ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ