ಅಂಗನವಾಡಿ ಕೇಂದ್ರಗಳಲ್ಲಿ ಗೈರಾಗುತ್ತಿರುವ ಮಕ್ಕಳು: ಶಾಸಕ ಬಸವಂತಪ್ಪ

KannadaprabhaNewsNetwork |  
Published : Jun 20, 2025, 12:35 AM IST
ಕ್ಯಾಪ್ಷನ19ಕೆಡಿವಿಜಿ36, 37 ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾಲೂಕಿನ ಬಾಡ ಗ್ರಾಮದ ಅಂಗನವಾಡಿ ಎ ಮತ್ತು ಸಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಅಧಿಕಾರಿಗಳು ಆಗಾಗ ಭೇಟಿ ನೀಡದ ಕಾರಣ ಅಂಗನವಾಡಿ ಕೇಂದ್ರಗಳಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ. ಇದರಿಂದಾಗಿ ಬೆಕ್ಕಿಗೆ ಚಿನ್ನಾಟ, ಇಲಿಗೆ ಪ್ರಾಣ ಸಂಕಟ ಎಂಬಂತಾಗಿದೆ ಅಂಗನವಾಡಿ ಮಕ್ಕಳ ಸ್ಥಿತಿ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಬೇಸರ ವ್ಯಕ್ತಪಡಿಸಿದರು.

ಬಾಡ ಅಂಗನವಾಡಿ ಕೇಂದ್ರಕ್ಕೆ ಭೇಟಿ । ಮಕ್ಕಳ ಹಾಜರಿಯಲ್ಲಿ ವ್ಯತ್ಯಾಸ ಕಂಡು ಶಿಕ್ಷಕರಿಗೆ ತರಾಟೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಧಿಕಾರಿಗಳು ಆಗಾಗ ಭೇಟಿ ನೀಡದ ಕಾರಣ ಅಂಗನವಾಡಿ ಕೇಂದ್ರಗಳಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ. ಇದರಿಂದಾಗಿ ಬೆಕ್ಕಿಗೆ ಚಿನ್ನಾಟ, ಇಲಿಗೆ ಪ್ರಾಣ ಸಂಕಟ ಎಂಬಂತಾಗಿದೆ ಅಂಗನವಾಡಿ ಮಕ್ಕಳ ಸ್ಥಿತಿ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಬಾಡ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಅಂಗನವಾಡಿ ಎ ಮತ್ತು ಸಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಅಂಗನವಾಡಿ ಶಿಕ್ಷಕಿಯೊಬ್ಬರು ಕಳೆದು 15 ದಿನಗಳಿಂದ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿಲ್ಲ. ಮಕ್ಕಳ ಹಾಜರಿ ಪುಸ್ತಕದಲ್ಲೂ ಕೂಡ ವ್ಯತ್ಯಾಸ ಕಂಡು ಬಂದಿದೆ. ಕೇಂದ್ರದಲ್ಲಿ ಇರುವ ಮಕ್ಕಳ ಸಂಖ್ಯೆ, ಹಾಜರಿ ಪುಸ್ತಕದಲ್ಲಿ ಇರುವ ಮಕ್ಕಳ ಸಂಖ್ಯೆಗೂ ಹೆಚ್ಚು ಕಡಿಮೆ ಇದೆ. ಕೇಂದ್ರದಲ್ಲಿ 10 ಜನ ಮಕ್ಕಳಿದ್ದರೆ ಹಾಜರಿ ಪುಸ್ತಕದಲ್ಲಿ 15 ಮಕ್ಕಳು ಇದ್ದಾರೆ ಎಂದು ಹಾಜರಿ ಪುಸ್ತಕದಲ್ಲಿ ಬರೆಯಲಾಗಿದೆ. ಇನ್ನು 5 ಜನ ಮಕ್ಕಳು ಎಲ್ಲಿ ಎಂದು ಕೇಳಿದರೆ ಉತ್ತರವಿಲ್ಲ. ಈ ಬಗ್ಗೆ ಮಾಹಿತಿ ಕೇಳಿದಾಗ ತಡವರಿಸಿದ ಶಿಕ್ಷಕಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ಅಂಗನವಾಡಿ ಕೇಂದ್ರಗಳಲ್ಲಿನ ಈ ಎಲ್ಲಾ ಅವ್ಯವಸ್ಥೆಗೆ ಸಂಬಂಧಪಟ್ಟ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳೇ ಪ್ರಮುಖ ಕಾರಣ. ಏಕೆಂದರೆ, ಆಗಾಗ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಲೋಪದೋಷ ಕಂಡು ಬಂದರೆ ತಪ್ಪಿತಸ್ಥ ಶಿಕ್ಷಕರು ಅಥವಾ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು. ಆಗ ಅಂಗನವಾಡಿ ಕೇಂದ್ರಗಳ ಶಿಕ್ಷಕರು, ಸಿಬ್ಬಂದಿ ಎಚ್ಚೆತ್ತುಕೊಂಡು ಸರಿಯಾಗಿ ಕೆಲಸ ಮಾಡುತ್ತಾರೆ. ಆದರೆ ಅಧಿಕಾರಿಗಳು ಭೇಟಿ ನೀಡದೇ ಬೇರೆ ಕೆಲಸಗಳಿಗೆ ಗಮನ ಕೊಡುತ್ತಾರೆ. ಹೀಗಾಗಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಅವ್ಯವಸ್ಥೆಗೆ ಕಾರಣವಾಗುತ್ತಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದರು.

ಅಂಗನವಾಡಿ ಕೇಂದ್ರಗಳ ಮಕ್ಕಳು ದೇವರ ಸಮಾನ. ಅಂತಹ ಮಕ್ಕಳಿಗೆ ಸರಿಯಾದ ಪೌಷ್ಟಿಕ ಆಹಾರ ಕೊಡುತ್ತಿಲ್ಲ ಎಂದು ಸಾಕಷ್ಟು ದೂರುಗಳು ಬರುತ್ತಿವೆ. ಅಧಿಕಾರಿಗಳು ಆಹಾರ ಗುಣಮಟ್ಟ ಪರಿಶೀಲಿಸುತ್ತಿಲ್ಲ. ಆಹಾರ ಪದಾರ್ಥಗಳ ಅವಧಿ ಮೀರಿದೆಯೋ ಇಲ್ಲವೋ ಎಂದು ಪರಿಶೀಲನೆ ಮಾಡುವುದಿಲ್ಲ. ಹೀಗಾಗಿ ಅಧಿಕಾರಿಗಳು ಆಹಾರ ಪದಾರ್ಥಗಳನ್ನು ಪೂರೈಸುವ ಗುತ್ತಿಗೆದಾರರೊಂದಿಗೆ ಎಲ್ಲಿ ಶಾಮೀಲಾಗಿದ್ದರೋ ಎಂಬ ಶಂಕೆ ವ್ಯಕ್ತಪಡಿಸಿ ಗ್ರಾಮಸ್ಥರು ದೂರುತ್ತಾರೆ.

ಅಲ್ಲದೇ ಭೇಟಿ ನೀಡುವ ವೇಳೆ 100ಕ್ಕೆ 100 ಹಾಜರಾತಿ ತೋರಿಸುತ್ತಾರೆ. ಭೇಟಿ ನೀಡಿ ಹೋದ ಬಳಿಕ ಅವರು ಬರೆದಿದ್ದೇ ಹಾಜರಿ. ಅವರು ಕೊಟ್ಟಿದ್ದೇ ಆಹಾರ. ಈ ರೀತಿ ಎಲ್ಲಾ ಕಡೆಗಳಲ್ಲೂ ಇದೆ. ಈ ನಿಟ್ಟಿನಲ್ಲಿ ಮೊದಲು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡರೆ ಉಳಿದವರೆಲ್ಲರೂ ಸರಿ ಹೋಗುತ್ತಾರೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಜರಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ