ಮಕ್ಕಳ ಸಹಿಸಿಕೊಳ್ಳೋ ಶಕ್ತಿ ಕಸಿಯುವಿಕೆ ತಂತ್ರಜ್ಞಾನದ ಅಪಾಯಕಾರಿ ಮುಖ : ಮಧು ವೈ.ಎನ್

KannadaprabhaNewsNetwork | Updated : Dec 22 2024, 12:08 PM IST

ಸಾರಾಂಶ

‘ಮನುಷ್ಯ ಕಲಿಯುವುದು, ಮಾನಸಿಕವಾಗಿ ಗಟ್ಟಿಯಾಗುವುದು ಜೀವನಾನುಭವಗಳಿಂದ. ಆದರೆ ತಂತ್ರಜ್ಞಾನದ ಮೇಲೆ ಅತಿ ಅವಲಂಬಿತರಾಗಿ ಬದುಕಿಗೆ ತೆರೆದುಕೊಳ್ಳದ ಜೆನ್ ಜಿ ಮಕ್ಕಳು ಟೆಕ್ನಾಲಜಿಯ ಕೃತಕ ಸೌಮ್ಯತೆ ಮೈಗೂಡಿಸಿಕೊಂಡು ಸಹಿಸಿಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ.

 ಮಂಡ್ಯ : ‘ಮನುಷ್ಯ ಕಲಿಯುವುದು, ಮಾನಸಿಕವಾಗಿ ಗಟ್ಟಿಯಾಗುವುದು ಜೀವನಾನುಭವಗಳಿಂದ. ಆದರೆ ತಂತ್ರಜ್ಞಾನದ ಮೇಲೆ ಅತಿ ಅವಲಂಬಿತರಾಗಿ ಬದುಕಿಗೆ ತೆರೆದುಕೊಳ್ಳದ ಜೆನ್ ಜಿ ಮಕ್ಕಳು ಟೆಕ್ನಾಲಜಿಯ ಕೃತಕ ಸೌಮ್ಯತೆ ಮೈಗೂಡಿಸಿಕೊಂಡು ಸಹಿಸಿಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ಸಣ್ಣದಕ್ಕೂ ವಿಚಲಿತರಾಗುವ ಈ ಜನರೇಶನ್‌ ಬಹುಬೇಗ ಆತ್ಮಹತ್ಯೆಯಂಥ ಅಪಾಯ ತಂದೊಡ್ಡಿಕೊಳ್ಳುವ ಸಾಧ್ಯತೆ ಇದೆ.’

ಇದು ಸಾಹಿತಿ, ಎಐ ತಜ್ಞ ಮಧು ವೈಎನ್ ಅವರ ಅಭಿಪ್ರಾಯ. ಅಖಿಲ ಭಾರತ 87ನೇ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ‘ಕೃತಕ ಬುದ್ಧಿಮತ್ತೆ ಹಾಗೂ ಚಾಟ್ ಜಿಪಿಟಿ ಸೃಷ್ಟಿಸಿರುವ ಸವಾಲುಗಳು’ ಎಂಬ ವಿಚಾರವಾಗಿ ಮಾತನಾಡಿದರು.

‘ನೋವು, ಹಸಿವು, ಚುಚ್ಚು ಮಾತು ಸಹಿಸಿಕೊಳ್ಳುವ ಮಾನಸಿಕ ಶಕ್ತಿ ಈ ಕಾಲದ ಮಕ್ಕಳಲ್ಲಿ ಕಡಿಮೆ ಆಗುತ್ತಿದೆ. ನಾವೇನೋ ಒಳ್ಳೆಯ ಉದ್ದೇಶದಿಂದ ಉಪಕರಣಗಳನ್ನು ಬಹಳ ಸಂಭಾವಿತರನ್ನಾಗಿ ಸೌಮ್ಯವನ್ನಾಗಿ ವಿಮಾನದ ಗಗನ ಸಖಿಯರಂತೆ ವರ್ತಿಸುವಂತೆ ಮಾಡಿರಬಹುದು. ಆದರೆ ನಿಜಜೀವನದಲ್ಲಿ ಮನುಷ್ಯ ಗಟ್ಟಿಯಾಗುವುದು ಸುಳ್ಳು ವಂಚನೆ ಅವಮಾನಗಳನ್ನು ಎದುರಿಸಿದಾಗ. ಆದರೆ ಇಂದಿನ ಮಕ್ಕಳಲ್ಲಿ ಇವನ್ನೆಲ್ಲ ಎದುರಿಸುವ ಶಕ್ತಿಯನ್ನು ತಂತ್ರಜ್ಞಾನ ಕಸಿಯುತ್ತಿದೆ’ ಎಂದು ಅವರು ಈ ವೇಳೆ ಹೇಳಿದರು.

‘ ಎಐ ಅಲ್ಗೋರಿದಂಗಳು ಮನುಷ್ಯನ ಭಾವನೆ ಮತ್ತು ವರ್ತನೆಗಳನ್ನು ಊಹಿಸುವ ಪ್ರಯತ್ನ ಮಾಡುತ್ತವೆ. ಸಿನಿಮಾಕ್ಕೆ ಅಥವಾ ಪ್ರವಾಸಕ್ಕೆ ಹೋಗಿದ್ದರೆ ಅದರ ಹಿಂದೆಯೂ ಎಐ ಕೈವಾಡ ಇರಬಹುದು. ನಾವು ಯಾರೊಂದಿಗೋ ಸಂವಹನ ಮಾಡಿದ್ದೇವೆ ಎಂದರೆ, ಅದರ ಆಧಾರದಿಂದ ಅಲ್ಗೋರಿದಂಗಳು ನಮ್ಮ ವ್ಯಕ್ತಿತ್ವವನ್ನೇ ಅಳೆದು ನಮ್ಮನ್ನು ಅದೇ ದಿಕ್ಕಿನಲ್ಲಿ ಎಳೆದುಕೊಂಡು ಹೋಗಿಬಿಡಬಹುದು. ಸಂಗಾತಿಯೊಡನೆ ಜಗಳ ಆಡಿದರೂ, ಸೈದ್ಧಾಂತಿಕವಾಗಿ ವಿಚಾರ ವ್ಯಕ್ತ ಪಡಿಸಿದರೂ, ನಿರ್ದಿಷ್ಟ ಪಕ್ಷಕ್ಕೆ ಓಟ್ ಹಾಕಿದರೂ ಅದು ನಮ್ಮ ಸ್ವತಂತ್ರ ವಿವೇಚನೆಯ ನಿರ್ಧಾರವಾಗಿರದೆ ಇರುವ ಸಾಧ್ಯತೆಯೂ ಇದೆ’ ಎಂದು ತಿಳಿಸಿದರು.

‘ಇನ್ನೊಂದು ಆಸಕ್ತಿಕರ ವಿಚಾರ ಎಂದರೆ ಎಐ ಉಪಕರಣಗಳಿಂದಲೇ ಉತ್ಪತ್ತಿಯಾದ ಡೇಟಾ ಇಂಟರ್ನೆಟ್ಟಿನಲ್ಲೇ ಇರುತ್ತದೆ, ಹಂಚಿಕೆಯಾಗುತ್ತದೆ. ಇದೊಂದು ರೀತಿ ಮಂಗಳ ಗ್ರಹಕ್ಕೆ ಹೋಗಿ ಗಿಡನೆಟ್ಟು ನಮ್ಮ ಮಲವನ್ನೇ ಗೊಬ್ಬರವಾಗಿ ಹಾಕಿ ಅದರ ಹಣ್ಣುಗಳನ್ನು ನಾವು ಮತ್ತೆ ತಿನ್ನುವ ರೀತಿ. ಇದರಿಂದ ಮಾನವನ ಸಹಜ ಜೀವನವೇ ಗೌಣವಾಗಿ ಎಐ ಸೃಷ್ಟಿಸಿದ ಜಗತ್ತೇ ಬದುಕಾಗುವ ಅಪಾಯವಿದೆ’ ಎಂದೂ ಅವರು ಅಭಿಪ್ರಾಯಪಟ್ಟರು.

Share this article