ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಮೇಲಾಜಿಪುರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಸಜ್ಜಿತ ಶಾಲಾ ಕಟ್ಟಡವಿದ್ದು, ಇಲ್ಲಿ ೬ನೇ ತರಗತಿವರಗೆ ಇತ್ತು, ಈಗ ೭ನೇ ತರಗತಿ ಪ್ರಾರಂಭಿಸಲು ಬಿಇಒ ಅವರಿಗೆ ಮನವಿ ಮಾಡಲಾಗಿತ್ತು. ಅವರು ೭ನೇ ತರಗತಿ ಮುಂದುವರಿಸಿ ಎಂದಿದ್ದರು, ಅದರಂತೆ ೭ನೇ ತರಗತಿಯನ್ನು ಪ್ರಾರಂಭಿಸಲಾಗಿತ್ತು, ಈಗ ಡಿಡಿಪಿಐ ಪ್ರಾರಂಭಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದರಿಂದ ಇಲ್ಲಿನ ೧೧ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ ಎಂದು ರೈತ ಸಂಘದ ಫದಾನ ಕಾರ್ಯದರ್ಶಿ ಕುಮಾರ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯ ಮುಖ್ಯ ಶಿಕ್ಷಕ ಸಾಕಯ್ಯ ಅಂದಿನ ಬಿಇಒ ಅವರಿಗೆ ಪ್ರಸ್ತಾವನೆ ಸಲ್ಲಿಸಿ, ೭ನೇ ತರಗತಿ ಪ್ರಾರಂಭಿಸಲು ಅನುಮತಿ ಕೇಳಿದ್ದರು, ಅವರು ಎಲ್ಲವು ಸರಿಯಾಗಿದೆ ಮಾಡಿ ಎಂದು ಹೇಳಿದ್ದರಂತೆ, ಅದರಂತೆ ಮುಖ್ಯ ಶಿಕ್ಷಕರು ೬ ರಿಂದ ಪಾಸಾದ ೧೧ ಮಂದಿ ವಿದ್ಯಾರ್ಥಿಗಳಿಗೆ ಟಿಸಿ ಕೊಡದೇ ಅಲ್ಲೇ ೭ನೇ ತರಗತಿ ಪ್ರಾರಂಭಿಸಿದ್ದರು, ಅಲ್ಲದೇ ಪಠ್ಯಪುಸ್ತಕ, ಬಟ್ಟೆ ವಿತರಿಸಲಾಗಿದೆ ಎಂದರು.ಈಗ ಡಿಡಿಪಿಐ ರಾಮಚಂದ್ರರಾಜೇ ಅರಸ್ ನನ್ನ ಗಮನಕ್ಕೆ ಬಂದಿಲ್ಲ, ೭ನೇ ತರಗತಿಯನ್ನು ಮುಂದುವಸಲು ಸಾಧ್ಯವಿಲ್ಲ ಇದಕ್ಕೆ ಕಾರಣರಾಗಿರುವ ಸಿಆರ್‌ಪಿ ಮತ್ತು ಮುಖ್ಯ ಶಿಕ್ಷಕರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳುತ್ತಿದ್ದಾರೆ. ಇದರಿಂದ ೧೧ ಮಂದಿ ವಿದ್ಯಾರ್ಥಿಗಳು ಅತಂತ್ರರಾಗುತ್ತಿದ್ದಾರೆ. ಆದ್ದರಿಂದ 7ನೇ ತರಗತಿ ಮುಂದುವರಿಸಲು ಆಗ್ರಹಿಸಿದರು.ಮುಖ್ಯ ಶಿಕ್ಷಕ ಸಾಕಯ್ಯ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದು, ಈ ಶಾಲೆಯ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಇವರ ವಿರುದ್ದ ಕ್ರಮಕೈಗೊಂಡರೆ ರೈತ ಸಂಘ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ೭ನೇ ತರಗತಿ ಓದುತ್ತಿರುವ ೬ ಹೆಣ್ಣು ಮಕ್ಕಳು ೫ ಗಂಡು ಮಕ್ಕಳು ಇದ್ದು ಇವರ ಮುಂದಿನ ಶಿಕ್ಷಣದ ಬಗ್ಗೆ ಯೋಚಿಸಬೇಕು ಎಂದರು.
ಉಸ್ತುವಾರಿ ಸಚಿವರ ಬದಲಾವಣೆಗೆ ಪ್ರತಿಭಟನೆ:ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ, ರೈತರ ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸುವಂತೆ ಜು.೧೦ ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು. ಕೂಡಲೇ ಇವರನ್ನು ಬದಲಾಯಿಸಿ ಬೇರೆಯವರನ್ನು ಉಸ್ತುವಾರಿ ಸಚಿವರಾಗಿ ನೇಮಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಲ್ಲೇಶ್, ಹೆಗ್ಗೋಠಾರ ವಿಜಯಕುಮಾರ್, ಅಶೋಕ್, ಮಹೇಶ್ ಇದ್ದರು.