ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶಿಕ್ಷಣದ ಜೊತೆಗೆ ತಂದೆ, ತಾಯಿ, ಗುರುಗಳು, ಹಿರಿಯರು ಸರಿ, ತಪ್ಪು, ನ್ಯಾಯ ನೀತಿಗಳಿಗೆ ಗೌರವ ನೀಡುವಂತಹ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆ ಇದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ನವನಗರದ ಕಲಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಉಪನಿರ್ದೇಶಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಾಲಾ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 15-20 ವರ್ಷಗಳಲ್ಲಿ ನಾವು ಕಂಡರಿಯದ ರೀತಿಯಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವೆ ಆನ್‌ಲೈನ್ ಪಾಠದ ಗುರು ವೈಜ್ಞಾನಿಕ ಯುಗದಲ್ಲಿ ದೊಡ್ಡ ಗುರುಗಳಾಗಿ ಪರಿಣಮಿಸಿದ್ದಾರೆ. ಗುರು-ಶಿಷ್ಯರ ಸಂಬಂಧ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.
ಮೊಬೈಲ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಮಾಹಿತಿಯುಳ್ಳ ಇಂದಿನ ಮಕ್ಕಳು ಶಿಕ್ಷಕರನ್ನೇ ಮೂಖರನ್ನಾಗುವಂತಹ ಪ್ರಶ್ನೆ ಕೇಳುತ್ತಿರುವುದರಿಂದ ಶಿಕ್ಷಕರು ಇಂದಿನ ಮಕ್ಕಳಿಗೆ ಬೇಕಾಗುವ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕಾದ ಕಾಲ ಬಂದಿದೆ. ಶಿಕ್ಷಕರು ಪ್ರತಿನಿತ್ಯ ಕಲಿತು ಮಕ್ಕಳ ಜೊತೆಗೆ ಮಕ್ಕಳಾಗಿ ಬೋಧಿಸಬೇಕಿದೆ. ಗುರು-ಶಿಷ್ಯರ ಸಂಬಂದ ತಂದೆ-ತಾಯಿ ಸಂಬಂಧಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ವಿದ್ಯಾರ್ಥಿಗಳು ಕೇವಲ ಹೆಚ್ಚು ಅಂಕ ಪಡೆಯುವುದರಿಂದ ಎಲ್ಲವನ್ನು ಕಲಿಯಲು ಸಾಧ್ಯವಿಲ್ಲ. ಮುಂದಿನ ಪೀಳಿಗೆ ಉತ್ತಮವಾಗಿರಬೇಕಾದರೆ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆ ಇದೆ ಎಂದು ತಿಳಿಸಿದರು.ಸಂಸದ ಪಿ.ಸಿ.ಗದ್ದಿಗೌಡ ಮಾತನಾಡಿ, ಇದು ಅಕ್ಷರ ಜ್ಞಾನದ ಜೊತೆಗೆ ಮಾನವೀಯ ಮೌಲ್ಯ ಕೊಟ್ಟು ಬದುಕು ರೂಪಿಸಿಕೊಟ್ಟ ಶಿಕ್ಷಕರನ್ನು ನೆನಪಿಸಿಕೊಳ್ಳುವ ಮಹತ್ವದ ದಿನವಾಗಿದೆ. ಮಕ್ಕಳಿಗೆ ಪಠ್ಯದ ಜೊತೆಗೆ ಕೌಶಲ್ಯಾಭಿವೃದ್ಧಿಯಂತಹ ಶಿಕ್ಷಣ ನೀಡಿದಲ್ಲಿ ಕಲಿತ ವಿದ್ಯೆಯಿಂದ ಸ್ವಯಂ ಉದ್ಯೋಗ ಪ್ರಾರಂಭಿಸಿ ಆರ್ಥಿಕ, ಸಾಮಾಜಿಕ ಬೆಳೆವಣಿಗೆ ಹೊಂದಲು ಸಾದ್ಯವಾಗುತ್ತದೆ. ಗುರುಭವನ ನಿರ್ಮಾಣಕ್ಕೆ ಅನುಧಾನ ನೀಡುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ ಮಾತನಾಡಿ, ಶಿಕ್ಷಕರ ವೃತ್ತಿ ಪವಿತ್ರವಾಗಿದ್ದು, ಪ್ರತಿಯೊಬ್ಬ ಶಿಕ್ಷಕ ತಾನು ಶಿಕ್ಷಣ ನೀಡಿದ ವಿದ್ಯಾರ್ಥಿ ಸಮಾಜದಲ್ಲಿ ಒಳ್ಳೆಯ ಕೆಲಸ ಮತ್ತು ಕೆಟ್ಟ ಕೆಲಸ ಮಾಡಿದರೂ ಶಿಕ್ಷಕರ ಮೇಲೆ ಬರುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಜಾಗೃತಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಅವರು, ನವನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾದ ಗುರುಭವನಕ್ಕೆ ಅನುದಾನ ನೀಡುವ ಭರವಸೆ ನೀಡಿದರು.ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಶಿಕ್ಷಕರನ್ನು ದೇವರ ಸಮಾನರಾಗಿ ಕಾಣಲಾಗುತ್ತಿದ್ದು, ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ, ಗುರುಸಾಕ್ಷಾತ್ ಪರಬ್ರಹ್ಮ ಎಂಬ ನುಡಿ ಅನಾದಿಕಾಲದಿಂದಲೂ ಬಂದಿದೆ. ಶಿಕ್ಷಕರಾದವರು ಮಕ್ಕಳ ಜೊತೆಗೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಅಂದಾಗ ಮಾತ್ರ ಮಗುವಿನಲ್ಲಿರುವ ಮನಸ್ಸು ಗೆಲ್ಲಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಕಾಣಬಹುದಾದ ಮನೋಕಾಯಿಲೆಯಿಂದ ಮುಕ್ತಗೊಳಿಸಲು ಸಾಧ್ಯವಾಗುತ್ತದೆ ಎಂದರು.
ಜಿಪಂ ಇಒ ಶಶಿಧರ ಕುರೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಜಿ.ಜಿ. ಹಿರೇಮಠ ಶಿಕ್ಷಕ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಎಸ್ಪಿ ಸಿದ್ದಾರ್ಥ ಗೋಯಲ್, ಎಸಿ ಸಂತೋಷ ಜಗಲಾಸರ, ಡಿಡಿಪಿಐ ಎ.ಸಿ. ಮನ್ನಿಕೇರಿ, ತಾಪಂ ಪೊ ಸುಭಾಸ ಸಂಪಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಸೇರಿದಂತೆ ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು.ಬಾಕ್ಸ್---ತ್ತಮ ಶಿಕ್ಷಕರಿಗೆ ಜಿಲ್ಲಾ ಪ್ರಶಸ್ತಿ
ಜಿಲ್ಲೆಯಲ್ಲಿ ಆಯ್ಕೆಗೊಂಡ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ವಿಭಾಗದಲ್ಲಿ ಬಿ.ಎ.ಚನ್ನಪ್ಪಗೌಡರ, ಎಂ.ಜಿ.ಸಂಕಾನಟ್ಟಿ, ಎಲ್.ಐ. ಲಮಾಣಿ, ಎಸ್.ಎಸ್. ಬಡಿಗೇರ, ಬಸವರಾಜ ಬಿರಾದಾರ, ವಿ.ಎಸ್.ಕಲ್ಯಾಣಮಠ, ಮಂಜುಶ್ರೀ ಮಣಿ, ಆರ್.ಎಲ್. ಇನಾಮದಾರ, ವಿ.ಎಸ್.ಹಲಕುರ್ಕಿ, ಎನ್.ಬಿ. ಜಮಖಂಡಿ, ರಮೇಶ ಕಂಕಣವಾಡಿ, ಮಂಜುನಾಥ ಅಮೋಜಿ, ಪ್ರೌಢ ವಿಭಾಗದಲ್ಲಿ ಸಿ.ಎಚ್. ನರಸಾಪೂರ, ಐ.ಎಂ. ಉಜನಿ, ಮಹೇಶ ಸಿಂದಗಿ, ಬಿ.ಡಿ. ಚಿತ್ತರಗಿ, ಎಂ.ವೈ. ಸೊಡ್ಡಿ, ಮಹಮ್ಮದ ರಫಿಕ್ ನದಾಫ್, ಜಿಪಂನಿಂದ ಆಯ್ಕೆಯಾದ ಪ್ರಾಥಮಿಕ ವಿಭಾಗದಲ್ಲಿ ಭೀಮಮ್ಮ ದೇವದುರ್ಗ, ಎನ್.ವೈ. ಮುಲ್ಲಾ, ಪಿ.ಎಚ್. ಇನಾಮದಾರ, ಎಂ.ವೈ.ಗುಡಿಮನಿ, ಎನ್.ಎಂ. ಬೀಳಗಿ, ಜೆ.ಎಚ್. ಡಾಲಾಯತ, ಜೆ.ಎಸ್. ಗಳವೆ. ಪ್ರೌಢ ವಿಭಾಗದಿಂದ ಎಚ್.ಎ. ಸೌದಾಗರ, ಲಕ್ಷ್ಮಣ ಚನ್ನಾಪೂರ, ಶಿವಾನಂದ ಪದರಾ, ವಿಶೇಷ ಸತ್ಕಾರದಲ್ಲಿ ವಿದ್ಯಾಧರ ಹಿರೇಮಠ, ಎಂ.ಎಸ್.ಅರಳಿಮಟ್ಟಿ.