ಎತ್ತಿನಗಾಡಿ ಮೆರವಣಿಗೆ ಮೂಲಕ ಶಾಲೆಗೆ ಬಂದ ಮಕ್ಕಳು!

KannadaprabhaNewsNetwork | Published : Jun 1, 2024 12:47 AM

ಸಾರಾಂಶ

ಪ್ರಸಕ್ತ ವರ್ಷದ ಶಾಲೆ ಆರಂಭದ ದಿನ ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೃಂಗರಿಸಿದ ಎತ್ತಿನಗಾಡಿಯಲ್ಲಿ ವಿದ್ಯಾರ್ಥಿಗಳು ಮೆರವಣಿಗೆಯ ಮೂಲಕ ಬಂದರು!

ಗುಂಡ್ಲುಪೇಟೆ: ಪ್ರಸಕ್ತ ವರ್ಷದ ಶಾಲೆ ಆರಂಭದ ದಿನ ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೃಂಗರಿಸಿದ ಎತ್ತಿನಗಾಡಿಯಲ್ಲಿ ವಿದ್ಯಾರ್ಥಿಗಳು ಮೆರವಣಿಗೆಯ ಮೂಲಕ ಬಂದರು! ಗ್ರಾಮದ ಪ್ರಮುಖ ಬೀದಿಗಳಲ್ಲಿ ಹತ್ತಕ್ಕೂ ಹೆಚ್ಚು ಎತ್ತಿನಗಾಡಿಗಳಲ್ಲಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ವಿವೇಕಾಂದ, ರಾಮಕೃಷ್ಣ ಪರಹಂಸ, ಶಾರದಾ ಮಾತೆಯರ ಭಾವಚಿತ್ರಗಳ ಸ್ಟಿಕ್ಕರ್ ಹಾಗೂ ಉಚಿತ ಪಠ್ಯ ಪುಸ್ತಕ, ಸಮವಸ್ತ್ರಗಳನ್ನು ಶಿಕ್ಷಕರು ವಿತರಿಸಿ ಶಾಲೆಗೆ ಬರ ಮಾಡಿಕೊಂಡರು. ಶಾಲೆಯ ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ ಮಾತನಾಡಿ, ಮೊದಲ ದಿನವೇ 1ನೇ ತರಗತಿಗೆ ಆರು ಮಕ್ಕಳು ದಾಖಲಾಗಿವೆ ಇದು ಸಂತಸದ ವಿಷಯ. ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳಿಗೆ ಸೇರಿಸುವ ಕೆಲಸ ಆಗಬೇಕಿದೆ ಎಂದರು. ಹೊಂಗಹಳ್ಳಿ ಸರ್ಕಾರಿ ಶಾಲೆಯಲ್ಲಿ ನೀಡುವಷ್ಟು ಉಚಿತ ಸೌಲಭ್ಯಗಳನ್ನೂ ಖಾಸಗಿ ಶಾಲೆಗಳಲ್ಲಿ ನೀಡುತ್ತಿಲ್ಲ. ಸರ್ಕಾರ ಸಾಕಷ್ಟು ಸೌಲಭ್ಯ ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು.ಸಿಹಿಯೂಟ: ಶಾಲೆಗೆ ಮೊದಲ ದಿನ ಬಂದ ಮಕ್ಕಳಿಗೆ ಸಿಹಿಯೂಟವನ್ನು ಬಿಸಿಯೂಟದಲ್ಲಿ ನೀಡಲಾಗಿದೆ. ಶಿಕ್ಷಕರಾದ ನಂದಿನಿ, ವಿನೋದ, ಶಿಕ್ಷಕಿ ಕವಿತ, ಗ್ರಾಮಸ್ಥರು, ವಿದ್ಯಾರ್ಥಿಗಳಿದ್ದರು. ಬೇಸಿಗೆ ರಜೆ ಮುಗಿಸಿ ಶಾಲೆಗೆ ಬಂದ ಚಿಣ್ಣರುಹನೂರು: ಬೇಸಿಗೆ ರಜೆ ಮುಗಿಸಿ ಶಾಲೆಗೆ ಮರಳಿದ ವಿದ್ಯಾರ್ಥಿಗಳಿಗೆ ಹೂವು ಮತ್ತು ಸಿಹಿ ನೀಡುವ ಮೂಲಕ ಬಿಇಒ ಮಹೇಶ್, ಮಕ್ಕಳನ್ನುಶಾಲೆಗೆ ಬರಮಾಡಿಕೊಂಡರು. ಹನೂರು ಶೈಕ್ಷಣಿಕ ವಲಯದ ಬೈರನತ್ತ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಬರ ಮಾಡಿಕೊಳ್ಳುವ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು. ಈ ನೂತನ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಆಗಮಿಸುತ್ತಿರುವ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಶಾಲೆಗಳಲ್ಲಿ ಆರೋಗ್ಯಕರವಾದ ವಾತಾವರಣದೊಂದಿಗೆ ಖುಷಿಯ ಕಲಿಕೆ ನಿಮ್ಮದಾಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.

ಶಾಲೆಯ ಕುಂದು ಕೊರತೆಗಳ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ ಶಿಕ್ಷಣ ಸಮಯೋಜಕ ಕಿರಣ್ ಕುಮಾರ್, ಚಿನ್ನಪ್ಪಯ್ಯ, ಸಿಆರ್‌ಪಿಗಳಾದ ದೊಡ್ಡ ಸಿದ್ದಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ನಾಗರತ್ನಮ್ಮ ಸಹ ಶಿಕ್ಷಕರಾದ ಸುಜೇಂದ್ರ ಕುಮಾರ, ಜಯಮ್ಮ, ನವಮಣಿ, ರಜಿನಾಮೆರಿ ಬಿಲಿಯಂ, ಜಪಮಾಲೆ, ಸೌಮ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article