ಕುಕನೂರು:
ಮಕ್ಕಳ ಕಲಿಕಾ ಹಬ್ಬ ಮಕ್ಕಳ ಸಂತಸದ ಪರಿಪೂರ್ಣ ಕಲಿಕೆಗೆ ಅನುಕೂಲವಾಗಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೇಶ ಸಬರದ ಹೇಳಿದರು.ಪಟ್ಟಣದ ರಾಯರಡ್ಡಿ ಆಶ್ರಯ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕುಕನೂರು ವಲಯ ಮಟ್ಟದ ಮಕ್ಕಳ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೊಂದಬೇಕು. ಕಲಿಕೆ ಎಂಬುದು ಮಕ್ಕಳಿಗೆ ಉತ್ಸಾಹದಾಯಕವಾಗಿರಬೇಕು. ವಿಷಯ, ಆಟ, ಸಂಸ್ಕೃತಿ, ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಸದಾ ಕ್ರಿಯಾಶೀಲರಾಗಿರಬೇಕು. ಮಕ್ಕಳಲ್ಲಿ ವಿಷಯ ಜ್ಞಾನ ಬೆಳೆಯಬೇಕು. ಆ ನಿಟ್ಟಿನಲ್ಲಿ ಶಾಲೆಯ ಅಂಗಳ, ಮನೆ, ಶಾಲೆ ಕೊಠಡಿಯಲ್ಲಿ ಮಕ್ಕಳ ಕಲಿಕೆಗೆ ಅನುಗುಣವಾದ ವಾತಾವರಣ ಅವಶ್ಯಕ. ಆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕಲಿಕಾ ಹಬ್ಬ ಆಯೋಜಿಸಿದ್ದು ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುವ ಕಾರ್ಯ ಮಾಡುತ್ತಿದೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ ತಳವಾರ ಮಾತನಾಡಿ, ಮಕ್ಕಳ ಕಲಿಕೆಯಲ್ಲಿ ಗಟ್ಟಿತನ ಬರಬೇಕು. ಅವರ ಮನಸ್ಸು ಮುಗ್ಧವಾಗಿದ್ದು ಅದರಲ್ಲಿ ಜ್ಞಾನದ ಕುಸುಮ ಅರಳಬೇಕು. ಮಕ್ಕಳು ಕಲಿಕಾ ಹಬ್ಬದಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು ಎಂದರು.ಸಿಆರ್‌ಪಿ ಫೀರ್‌ಸಾಬ್ ದಫೇದಾರ ಮಾತನಾಡಿ, ಮನುಷ್ಯ ಪರಿಪೂರ್ಣ ಆಗಲು ಶಿಕ್ಷಣ ಅವಶ್ಯಕ. ಶಿಕ್ಷಣ ಬದುಕು ರೂಪಿಸುವ ಅಸ್ತ್ರ. ಕಲಿಕಾ ಹಬ್ಬ ಮಕ್ಕಳ, ಶಿಕ್ಷಕರ, ಪಾಲಕರ ಸಮಾಗಮ ಎಂದು ಹೇಳಿದರು.
ಪಪಂ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್, ಎಸ್‌ಡಿಎಂಸಿ ಅಧ್ಯಕ್ಷ ತೀರ್ಮಾ ನೂರಭಾಷಾ, ಪಪಂ ಸದಸ್ಯೆ ರಾಧಾ ಸಿದ್ದಪ್ಪ ದೊಡ್ಮನಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರಪ್ಪ ಭಂಡಾರಿ, ತಾಲೂಕು ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಯ್ಯ ಕುರ್ತಕೋಟಿ, ಮುಖ್ಯ ಶಿಕ್ಷಕ ನಿಂಗಪ್ಪ ಹೈದ್ರಿ, ಬಿಆರ್‌ಪಿ ಮಹೇಶ ಅಸೂಟಿ, ಪ್ರಮುಖರಾದ ಮಂಜುನಾಥ ಯಡಿಯಾಪುರ, ಉಮೇಶ ಕಂಬಳಿ, ಅಬ್ದುಲ್ ಖದೀರ, ಶಾಂತಾದೇವಿ ಹಿರೇಮಠ, ಶಂಭುಲಿಂಗಯ್ಯ ಶಿರೂರಮಠ, ಪ್ರಭು ಶಿವನಗೌಡ, ಚಿದಾನಂದ ಪತ್ತಾರ, ಗಿರಿಜಾ ನರೇಗಲ್ಲಮಠ, ಲಕ್ಕಪ್ಪ ತಳವಾರ, ಮಾಬು ನೂರಬಾಷಾ, ಶಾಲೆ ಶಿಕ್ಷಕರು, ಪಾಲಕರು, ಮಕ್ಕಳಿದ್ದರು.