ಹಿಂದಿ ಹೇರಿಕೆಯಿಂದ ಮಕ್ಕಳ ಭವಿಷ್ಯ ಬಲಿ

KannadaprabhaNewsNetwork |  
Published : Jul 06, 2025, 01:49 AM IST
5ಕೆಪಿಎಲ್22 ರಾಜ್ಯದಲ್ಲಿ ದ್ವೀಭಾಷಾ ನೀತಿಯನ್ನು ಜಾರಿ ಮಾಡುವಂತೆ ಆಗ್ರಹಿಸಿ, ಕೊಪ್ಪಳದಲ್ಲಿ ಪ್ರತಿಭಟನೆ ನಡೆಸುತ್ತಿರುವುದು. | Kannada Prabha

ಸಾರಾಂಶ

ರಾಜ್ಯದ ಪಠ್ಯದಲ್ಲಿ ಕನ್ನಡ ಪ್ರಥಮ ಭಾಷೆಯಾಗಿ, ಇಂಗ್ಲಿಷ್‌ ದ್ವಿತೀಯ ಮತ್ತು ತೃತೀಯ ಭಾಷೆಯಾಗಿ ಹಿಂದಿ ಕಲಿಸಲಾಗುತ್ತಿದೆ. ಆದರೆ, ಇದೀಗಿ ಹಿಂದಿ ಕಲಿಯುವುದು ಕಡ್ಡಾಯಗೊಳಿಸಿರುವುದರಿಂದ ವಿದ್ಯಾರ್ಥಿಗಳಿಗೆ ಅನಗತ್ಯವಾದ ಒತ್ತಡ ಹಾಕಲಾಗುತ್ತಿದೆ.

ಕೊಪ್ಪಳ:

ರಾಜ್ಯದಲ್ಲಿ ಹಿಂದಿ ಹೇರಿಕೆ ಕೈಬಿಟ್ಟು, ದ್ವಿಭಾಷಾ ನೀತಿ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಬಿ. ಗಿರೀಶಾನಂದ ಜ್ಞಾನಸುಂದರ, ರಾಜ್ಯದ ಪಠ್ಯದಲ್ಲಿ ಕನ್ನಡ ಪ್ರಥಮ ಭಾಷೆಯಾಗಿ, ಇಂಗ್ಲಿಷ್‌ ದ್ವಿತೀಯ ಮತ್ತು ತೃತೀಯ ಭಾಷೆಯಾಗಿ ಹಿಂದಿ ಕಲಿಸಲಾಗುತ್ತಿದೆ. ಆದರೆ, ಇದೀಗಿ ಹಿಂದಿ ಕಲಿಯುವುದು ಕಡ್ಡಾಯಗೊಳಿಸಿರುವುದರಿಂದ ವಿದ್ಯಾರ್ಥಿಗಳಿಗೆ ಅನಗತ್ಯವಾದ ಒತ್ತಡ ಹಾಕಲಾಗುತ್ತಿದೆ ಎಂದು ಕಿಡಿಕಾರಿದರು.

೨೦೨೪ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೯೦೭೯೪ ವಿದ್ಯಾರ್ಥಿಗಳು ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದಾರೆ. ಇದು ಒಟ್ಟು ವಿದ್ಯಾರ್ಥಿಗಳಲ್ಲಿ ಶೇ ೨೧ರಷ್ಟಿದೆ. ೨೦೨೫ರಲ್ಲಿ ಈ ಸಂಖ್ಯೆ ೧.೨ ಲಕ್ಷಕ್ಕಿಂತ ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಇದು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದ್ದು, ಇದು ಹಿಂದಿಯ ಕಡ್ಡಾಯದಿಂದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಶೈಕ್ಷಣಿಕ ಹೊರೆಯನ್ನು ಸ್ಪಷ್ಟವಾಗಿ ತೋರುತ್ತಿದೆ. ಹಿಂದಿ ಹೇರಿಕೆಗೆ ಕನ್ನಡದ ಮಕ್ಕಳ ಭವಿಷ್ಯ ಬಲಿಯಾಗುತ್ತಿದೆ ಎಂದು ಕಿಡಿಕಾರಿದರು.

ತ್ರಿಭಾಷಾ ಸೂತ್ರದ ಕುರಿತು ರಾಷ್ಟ್ರಕವಿ ಕುವೆಂಪು ಅವರು ಹಿಂದೆಯೇ ಹೇಳಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಕರ್ನಾಟಕದ ಸಾಂಸ್ಕೃತಿಕ ಮತ್ತು ಭಾಷಿಕ ಅಸ್ಮಿತೆಯಲ್ಲಿ ಕನ್ನಡವು ಕೇಂದ್ರ ಸ್ಥಾನ ಹೊಂದಿದೆ. ಬದಲಾದ ಕಾಲಘಟ್ಟದಲ್ಲಿ ಇಂಗ್ಲಿಷ್‌ ಭಾಷೆ ಜಾಗತಿಕ ವ್ಯವಹಾರ, ಉನ್ನತ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಗೆ ಅಗತ್ಯವಾಗಿದ್ದು, ಇದನ್ನು ಕಲಿಯುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದೆ. ಆದರೆ, ಹಿಂದಿ ಕಡ್ಡಾಯವಾಗಿ ಓದಿಸುವುದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಗಮನಾರ್ಹ ಲಾಭವಿಲ್ಲ. ತ್ರಿಭಾಷಾ ನೀತಿಯಿಂದ ಕರ್ನಾಟಕಕ್ಕೆ ಯಾವ ಲಾಭವೂ ಇಲ್ಲ. ಇದರಿಂದ ಒಬ್ಬನೇ ಒಬ್ಬ ಕನ್ನಡಿಗನಿಗೂ ಉದ್ಯೋಗ ದೊರೆತಿಲ್ಲ ಎಂದು ತಿಳಿಸಿದರು.

ತಮಿಳುನಾಡು ೧೯೬೮ರಿಂದಲೇ ತ್ರಿಭಾಷಾ ನೀತಿ ತಿರಸ್ಕರಿಸಿ ತಮಿಳು ಮತ್ತು ಇಂಗ್ಲಿಷ್‌ ಒಳಗೊಂಡ ದ್ವಿಭಾಷಾ ನೀತಿ ಯಶಸ್ವಿಯಾಗಿ ಜಾರಿಗೆ ತಂದಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಸಹ ಮರಾಠಿ ಹಾಗೂ ಇಂಗ್ಲಿಷ್‌ ಭಾಷೆ ಕಡ್ಡಾಯಗೊಳಿಸುವ ನಿರ್ಧಾರ ಕೈಗೊಂಡಿದೆ. ಈ ಮೂಲಕ ಆ ರಾಜ್ಯಗಳು ತಮ್ಮ ಭಾಷಿಕ ಗುರುತು ರಕ್ಷಿಸುವ ಜತೆಗೆ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಂಡಿವೆ. ಕರ್ನಾಟಕವು ಸಹ ದ್ವಿಭಾಷಾ ನೀತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೊಲಿಸ್‌ಪಾಟೀಲ, ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ, ಜಿಲ್ಲಾ ಮಹಿಳಾ ಅಧ್ಯಕ್ಷೆ ಭುವನೇಶ್ವರಿ ಮೊಟಗಿ, ಮಹಿಳಾ ಅಧ್ಯಕ್ಷೆ ಶಂಕ್ರಮ್ಮ ಗೋರೆಬಾಳ, ಸಾವಿತ್ರಿ ದಳವಾಯಿ, ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಪಾಟೀಲ ಹಲಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಪ್ರಕಾಶ ಮನ್ನೆರಾಳ, ರಮೇಶ ಚಂಡೂರು, ವಿರೇಶ ಮುಂಡಾಸದ, ಪ್ರಫುಲ್‌ಕುಮಾರ ಪಾಟೀಲ, ಸಿದ್ದು ಸಶಿಮಠ, ದೇವೆಂದ್ರ ಆನೆಗುಂದಿ, ಶಿವಕುಮಾರ ಬಂಗಾರಿ, ರಾಘವೇಂದ್ರ ಕೋಣಿ, ಎನ್. ದೊಡ್ಡಬಸಪ್ಪ, ಶರಣಪ್ಪ ನವಲಹಳ್ಳಿ, ವೆಂಕಟೇಶ ತಟ್ಟಿ, ಎಂ.ಕೆ. ಮನಗೂಳಿ, ಶರಣಯ್ಯ ಕುಟಗನಳ್ಳಿ, ಮಾರುತಿ ಎಂ, ಪ್ರಕಾಶ ಜೋಶಿ, ಹನುಮಂತ ಜೀರಾಳ, ಮಹೇಶ ಜಂತ್ಲಿ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ