ಬಿ.ರಾಮಪ್ರಸಾದ್ ಗಾಂಧಿ
ಕನ್ನಡಪ್ರಭ ವಾರ್ತೆ ಹಂಪಿ (ವಿರುಪಾಕ್ಷೇಶ್ವರ ದೇವಾಲಯ ವೇದಿಕೆ)ತಮ್ಮ ಪುಟ್ಟ ಪುಟ್ಟ ಸಾಲುಗಳುಳ್ಳ ಕಾವ್ಯಗಳಲ್ಲಿ ಸಮಾಜದ ಅಂಕುಡೊಂಕು ತೆರೆದಿಟ್ಟು ತಿದ್ದುವ ಪ್ರಯತ್ನ ಮಕ್ಕಳು ಇಲ್ಲಿಯ ವಿರುಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ಭಾನುವಾರ ನಡೆದ ಮಕ್ಕಳ ಹಾಗೂ ಯುವ ಕವಿಗೋಷ್ಠಿಯಲ್ಲಿ ಮಾಡಿದರು.
ಕೀರ್ತಿ ಗಂಗಾವತಿ ಎಂಬಾತ ಸುಳ್ಳು ಬಜಾರಿಯಲ್ಲಿ ಬೇಗ ಮಾರಾಟವಾಗುತ್ತದೆ, ಅಂತಿಮವಾಗಿ ಸತ್ಯಕ್ಕೆ ಜಯ ಸಿಗುತ್ತದೆ ಎಂಬುದರ ಬಗ್ಗೆ ತನ್ನ ಹನಿಗವನಗಳ ಮೂಲಕ ತಿಳಿಸಿದನು.ಪ್ರೇಮಾನಾಥ ಇಲ್ಲೂರು ಎಂಬಾತ ಆಗಿದ್ದಾಗ್ಗೆ ಬರ, ಅತಿವೃಷ್ಠಿಗೆ ಬಲಿಯಾಗಿ ಸಂಕಷ್ಟ ಎದುರಿಸುತ್ತಿರುವ ರೈತ ಎಂಬ ಕವನ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಹಂಪಿ ಉತ್ಸವವನ್ನು ದಿ. ಎಂ.ಪಿ. ಪ್ರಕಾಶರವರು ಮೊದಲಿಗೆ ಆರಂಭಿಸಿದ ಕುರಿತು ಹಂಪಿ ಪ್ರಕಾಶ ಎಂಬ ಕವನ ಸಹ ಉತ್ತಮವಾಗಿತ್ತು. ನಾಗರಾಜ ಬಡಿಗೇರ ನನ್ನ ಮತ ಎನ್ನುವ ಕವನ ಮತದಾನದ ಮಹತ್ವ ಕುರಿತು ಅರಿವು ಮೂಡಿಸಿತ್ತು.ಕ್ಯಾದಿಗಿಹಾಳ್ ಉದೇದಪ್ಪ ನವರು ಎಲುಬಿಲ್ಲದ ನಾಲಿಗೆ ಎನ್ನುವ ಕವನದ ಮೂಲಕ ನಾಲಿಗೆ ಹೇಗೆ ಬೇಕೊ ಹಾಗೆ ಹರಿಬಿಟ್ಟು ಇನ್ನೊಬ್ಬರಿಗೆ ನೋವು ಮಾಡುತ್ತಿರುವ ಇಂದಿನ ಜನಪ್ರತಿನಿಧಿಗಳಿಗೆ, ರಾಜಕಾರಣಿಗಳಿಗೆ ಹೇಳಿದಂತಿತ್ತು.
ವಿರೇಶಮ್ಮನವರ ರೊಕ್ಕವೆಂದು ರೆಕ್ಕೆ ಬಿಚ್ಚಿ ಹಾರಿತು, ಶಿಲ್ಪ ಬಡಿಗೇರವರ ಶತಶತಮಾನ ಕವನ, ಎಚ್. ಸಾನಿಯಾಳ ಹೇ ತಂಗಾಳಿ ಕವನ, ಬಿ.ವಿ. ಸ್ನೇಹಳ ಅಪ್ಪ ಮಾಡಿದ ಮಣ್ಣಿನ ಕುದುರೆ ಎಷ್ಟು ಚಂದವೊ ಎಂಬ ಕವನ ಕುಸುಮಾ ಭೀಮಪ್ಪ ಗುಡಗೇರಿಯ ಪ್ರಕೃತಿ ಕಾವ್ಯ ಸಹ ನೆರೆದವರ ಗಮನ ಸೆಳೆದವು.ಕೌಸ್ತುಭಾರದ್ವಾಜ್ ರವರ ಕಾಖಾನೆಯಲ್ಲಿ ಮಾಡಿದ ಅಡುಗೆ, ಬಳ್ಳಾರಿಯ ವಿಜಯರಾಘವೇಂದ್ರ ರವರ ದಣಿದ ಧನ ಎಂಬ ಕವನ, ವಿಶಾಲ ಮ್ಯಾಸರ ರವರ ಕಾಣೆಯಾಗಿಸುತ್ತಾರೆ, ಲಕ್ಷ್ಮಿಗಾಲಿ ರವರ ಬೆವರು, ಪಿ. ಜೈತ್ರಳ ಸೂರ್ಯೋದಯ ಕವನ, ಡಿ.ಯು. ಬಸಂತ ರವರ ಸ್ಮಶಾನ ಹೀಗೆ ಮಕ್ಕಳು ಹಾಗೂ ಯುವಕರು ಇಂದಿನ ಸಮಸ್ಯೆಗಳ ಕುರಿತು ತಮ್ಮ ಕವನಗಳ ಮೂಲಕ ಗಮನ ಸೆಳೆದರು.
ಕೆಲವೊಂದು ಮಕ್ಕಳು ಯಾವ ಅನುಭವಸ್ಥ ಕವಿಗಿಂತ ಕಡಿಮೆ ಇಲ್ಲದಂತೆ ಕವನ ರಚಿಸಿ ಓದಿದರು.ಮಕ್ಕಳ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಬಳ್ಳಾರಿಯ ಮಕ್ಕಳ ಸಾಹಿತಿ ಡಾ. ಕೆ.ಶಿವಲಿಂಗಪ್ಪ ಹಂದಿಹಾಳು ಕಾವ್ಯಕ್ಕೆ ಹಂಪಿ ಪ್ರದೇಶ ಹೊಸದಲ್ಲ, ನಮ್ಮ ಸಾಹಿತ್ಯ ಪರಂಪರೆ ಚರಿತ್ರೆ ಕಟ್ಟಿಕೊಡುವಂತಹ ನಾಡು ಇದು ಎಂದು ಹೇಳಿದರು.
ಜನಪದ ಕಾವ್ಯಗಳು ಈ ಪ್ರದೇಶದಲ್ಲಿ ಪ್ರಸಿದ್ದಿ ಪಡೆದಿವೆ, ವೈಯಕ್ತಿಕ ನೆಲೆಗಟ್ಟಿಗಿಂತ ಸಾಮಾಜಿಕ ದೃಷ್ಠಿಯಿಂದ ಕಾವ್ಯಗಳು ಇಲ್ಲಿ ಮೂಡಿವೆ, ಕಾವ್ಯ ರಚಿಸುವುದು ಬೇರೆ, ಜನರಿಗೆ ಮುಟ್ಟಿಸುವುದು ಬೇರೆ ಎಂದ ಅವರು ರಾಜಕೀಯ ಪ್ರಜ್ಞೆ ಇಲ್ಲದ ಕಾವ್ಯ, ಕಾವ್ಯ ಆಗಲಾರದು, ಕಾವ್ಯವನ್ನು ಯಾವುದೇ ಚೌಕಟ್ಟಿನಲ್ಲಿ ನೋಡಬಾರದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಚಿಂತಕ ಅಬ್ದುಲ್ ಹೈ ತೋರಣಗಲ್ಲು ಮಾತನಾಡಿ, ಮಕ್ಕಳು ತಕ್ಕ ಮಟ್ಟಿಗೆ ಸಮಾಜದ ಅಂಕುಡೊಂಕುಗಳ ಬಗ್ಗೆ ಬರೆದಿದ್ದಾರೆ, ಕಾವ್ಯಕ್ಕೆ ಬಹುದೊಡ್ಡ ಶಕ್ತಿ ಇದೆ, ಜಗತ್ತನ್ನು ಕಾವ್ಯ ಬದಲಾಯಿಸಬಹುದು, ಕಾವ್ಯ ಎಂದರೆ ಬದುಕು, ಕಾವ್ಯ ಅಪೂರ್ವ ಎಂದು ನುಡಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಪಪೂ ಶಿಕ್ಷಣ ಇಲಾಖೆಯ ಡಿಡಿಪಿಐ ಟಿ.ಫಾಲಾಕ್ಷ, ನೋಡಲ್ ಅಧಿಕಾರಿ ನಾಗರಾಜ ಹವಾಲ್ದಾರ, ದಯಾನಂದ ಕಿನ್ನಾಳ ಹಾಜರಿದ್ದರು.ಪ್ರತಿಭೆ ಇದ್ದರೂ ಬಹಳಷ್ಟು ಜನರಿಗೆ ಅವಕಾಶ ಸಿಗಲ್ಲ, ಪ್ರತಿಭೆ ಪ್ರೋತ್ಸಾಹಿಸಲು ಈ ಬಾರಿ ಮಹಿಳೆಯರ, ಮಕ್ಕಳ ಪ್ರತ್ಯೇಕ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದ್ದಾರೆ.