ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಸರ್ಕಾರಿ ಅನುದಾನವನ್ನು ಮನಸೋ ಇಚ್ಚೆ ವ್ಯಯಮಾಡಿ ಚಿತ್ರದುರ್ಗದ ನಗರದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಡಿವೈಡರ್ ತೆರವು ಕಾರ್ಯಾಚರಣೆ ಆರಂಭವಾಗಿರುವುದು ನಾಗರಿಕರು, ವಾಹನ ಸವಾರರಲ್ಲಿ ತುಸು ನೆಮ್ಮದಿ ತಂದಿದೆಯಾದರೂ ತೆರವು ಮಾಡಲು ಯಾವ ಮಾನದಂಡ ಅನುಸರಿಸಲಾಗುತ್ತಿದೆ ಎಂಬುದು ಬಹಿರಂಗಗಳೊಳ್ಳದೇ ಇರುವುದು ಅಧಿಕಾರಿಗಳ ನಡೆ ಪ್ರಶ್ನಿಸುವಂತಾಗಿದೆ. ಜನಪ್ರತಿನಿಧಿಯೋರ್ವರ ತಾಳಕ್ಕೆ ತಕ್ಕಂತೆ ಕುಣಿದು ಡಿವೈಡರ್ ನಿರ್ಮಾಣ ಮಾಡಿದ ಅಧಿಕಾರಿಗಳೇ, ಸ್ವತಃ ಮುಂದೆ ನಿಂತು ಕೆಡಹುವ ಘನಂದಾರಿ ಕೆಲಸಕ್ಕೆ ಮುಂದಾಗಿದ್ದಾರೆ. ರಾಜ್ಯದ ಯಾವ ಜಿಲ್ಲಾ ಕೇಂದ್ರಗಳಲ್ಲಿ ಇಂತಹ ದೃಶ್ಯಗಳು ಕಾಣಸಿಗುವುದಿಲ್ಲ. ತುಘಲಕ್ ದರ್ಬಾರ್ ನೆನಪು ಹಾಗೆ ಮನದ ಮುಂದೆ ಹಾದು ಹೋಗುತ್ತದೆ.
ಚಿತ್ರದುರ್ಗದ ಅವೈಜ್ಞಾನಿಕ ಡಿವೈಡರ್ ತೆರವುಗೊಳಿಸಲು ಕನಿಷ್ಟ ಹತ್ತಕ್ಕೂ ಹೆಚ್ಚು ಸಭೆ ಮಾಡಿರುವ ಜಿಲ್ಲಾಡಳಿತ ಅಂತಿಮವಾಗಿ ಯಾವುದೇ ತೀರ್ಮಾನಕ್ಕೆ ಬಂದಿರಲಿಲ್ಲ. ಕಳೆದ ನವೆಂಬರ್ ಅಂತ್ಯದಲ್ಲಿ ಲೋಕೋಪಯೋಗಿ ಇಲಾಖೆಯ ವಿಚಕ್ಷಣ ದಳ ಚಿತ್ರದುರ್ಗಕ್ಕೆ ಭೇಟಿ ನೀಡಿ ಅವೈಜ್ಞಾನಿಕ ಡಿವೈಡರ್ ಪರಿಶೀಲಿಸಿ ವರದಿ ನೀಡಿದ್ದು, ಅದರ ಅನುಸಾರ ತೆರವುಗೊಳಿಸಲಾಗುತ್ತಿದೆ ಎಂಬ ಒಂದು ಸಾಲಿನ ಹೇಳಿಕೆಯನ್ನು ಶಾಸಕ ವೀರೇಂದ್ರಪಪ್ಪಿ ನೀಡಿದ್ದರು. ಖುದ್ದು ಆಸಕ್ತಿ ವಹಿಸಿ ಮುಂದೆ ನಿಂತು ಫೆ.9ರ ರಾತ್ರಿ ಕಾರ್ಯಾಚರಣೆಗೆ ಚಾಲನೆ ನೀಡಿದ್ದರು. ತೆರವು ಹೆಸರಲ್ಲಿ 6 ಕಡೆ ಜೆಸಿಬಿ ಹಾಗೂ ಹಿಟ್ಯಾಚಿ ಯಂತ್ರ ಸದ್ದು ಮಾಡಿದ್ದವು. ಗಾಂಧಿ ವೃತ್ತದಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ಓನ್ ವೇ ಮಾರ್ಗದಲ್ಲಿನ ಡಿವೈಡರ್ ಪೂರ್ಣ ಪ್ರಮಾಣದಲ್ಲಿ ನೆಲಸಮ ಮಾಡಿರುವುದು ಬಿಟ್ಟರೆ ಉಳಿದ ಕಡೆ ಅನುಸರಿಸಲಾದ ಮಾನದಂಡಗಳು ಅನುಮಾನ ಮೂಡಿಸಿದ್ದವು.ಚಳ್ಳಕೆರೆ ಕಡೆಯಿಂದ ಚಿತ್ರದುರ್ಗಕ್ಕೆ ಎಂಟ್ರಿ ಕೊಡುವಾಗ ಎದುರಾಗುವ ಡಿವೈಡರ್ ಅಪಾಯಕಾರಿಯಾಗಿತ್ತು. ಬಸವೇಶ್ವರ ಆಸ್ಪತ್ರೆ ಕಡೆ ಹೋಗುವ ಸರ್ವಿಸ್ ಮಾರ್ಗದಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ, ಮುಖಾಮುಖಿಯಾಗಿ ಸಂಚರಿಸುತ್ತಿದ್ದವು. ಐವತ್ತು ಮೀಟರ್ ನಷ್ಟು ಇಲ್ಲಿ ತೆರವುಗೊಳಿಸಿರುವುದು ಅವ್ಯವಸ್ಥೆ ಸರಿಪಡಿಸಿದಂತಾಗಿದೆ. ಸಶಸ್ತ್ರ ಮೀಸಲು ಪಡೆ ಠಾಣೆ ಮುಂಭಾಗದಲ್ಲಿ ಹತ್ತು ಮೀಟರ್ ನಷ್ಟು ಮಾತ್ರ ತೆರವುಗೊಳಿಸಲಾಗಿದೆ. ಉಳಿದದ್ದು ಏಕೆ ಉಳಿಸಿಕೊಂಡರು ಎಂಬ ಪ್ರಶ್ನೆ ಎದುರಾಗಿದೆ. ಕಾರುಗಳು ಸರಾಗವಾಗಿ ಹೋಗಲು ಸಾಧ್ಯವಾಗದಂತಹ ಕಿರಿದಾದ ರಸ್ತೆ ಇದಾಗಿದ್ದು, ಡಿಸಿಸಿ ಬ್ಯಾಂಕ್ ತಿರುವಿನವರೆಗೆ ಡಿವೈಡರ್ ತೆಗೆಯಬೇಕಾಗಿತ್ತು.
ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ಐವತ್ತು ಮೀಟರ್ ನಷ್ಟು ಡಿವೈಡರ್ ತೆರವುಗೊಳಿಸಿ ವಾಹನಗಳು ಹೋಗಲು ಓಪನ್ ಕೊಡಲಾಗಿದೆ. ಅಚ್ಚರಿ ಎಂದರೆ ಪ್ರಾದೇಶಿಕ ಸಾರಿಗೆ ಕಚೇರಿಗೆ ನೋಂದಣಿ ಮಾಡಿಸಲು ಲಾರಿ, ಬಸ್ಸುಗಳು ಹೋಗಲು ಸಾಧ್ಯವೇ ಇಲ್ಲದಂತಹ ವಾತಾವರಣ ಮತ್ತೆ ಮುಂದುವರಿದಿದೆ. ಇದೇ ರಸ್ತೆಯಲ್ಲಿನ ಟಿವಿಎಸ್ ಶೋರೂಂ ಮುಂಭಾಗದಲ್ಲಿನ ಡಿವೈಡರ್ ಬಳಿ ವಾಹನಗಳು ಯೂಟರ್ನ್ ಮಾಡಲು ಸಾಧ್ಯವಿಲ್ಲ. ಯೂ ಟರ್ನ್ ಮಾಡಲು ಸಾಧ್ಯವಾಗದಿದ್ದರೆ ಡಿವೈಡರ್ ಗಳು ಯಾಕೆ ಬೇಕು ?ಗಾಯತ್ರಿ ಕಲ್ಯಾಣ ಮಂಟಪದ ಬಳಿ ವಾಸದೇವರೆಡ್ಡಿ ಪೆಟ್ರೋಲ್ ಬಂಕ್ ಮುಂಭಾಗದಿಂದ ಶಿವ ಸಾಗರ ಹೋಟೆಲ್ ತನಕ 100 ಮೀಟರ್ ನಷ್ಟು ಡಿವೈಡರ್ ತೆರವುಗೊಳಿಸಲಾಗಿದೆ. ಇಲ್ಲೂ ಕೂಡಾ ಯೂಟರ್ನ್ ಸಾಧ್ಯವೇ ಇಲ್ಲ. ಹೆಚ್ಚು ಸಂಚಾರದ ಈ ಮಾರ್ಗದಲ್ಲಿ ಯಾವುದಾದರೂ ವಾಹನ ಯೂಟರ್ನ್ ಮಾಡಲು ಮುಂದಾದರೆ ಟ್ರಾಫಿಕ್ ಜಾಮ್ ಆಗುತ್ತದೆ. ಜೆಸಿಆರ್ ಬಡಾವಣೆ ಮೂಲಕ ಹೊಸಪೇಟೆಗೆ ಹೋಗುವ ಮಾರ್ಗದಲ್ಲಿ ಅಂದರೆ ಜೆಸಿಆರ್ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ತನಕ ಡಿವೈಡರ್ ತೆರವುಗೊಳಿಸಬೇಕಾಗಿತ್ತು. ಇಲ್ಲಿ ಎಲ್ಲಿಯೂ ಯೂಟರ್ನ ಸಾಧ್ಯವಿಲ್ಲ. ಸರ್ವಿಸ್ ರಸ್ತೆ ಆರಂಭದಲ್ಲಿಯಂತೂ ಯೂಟರ್ನ್ ಮಾಡಿಕೊಳ್ಳಲು ವಾಹನ ಸವಾರರು ಭಯಾನಕ ಸನ್ನಿವೇಶ ಎದುರಿಸಬೇಕಾಗುತ್ತದೆ. ಹಾಗಾಗಿ ಅವೈಜ್ಞಾನಿಕ ಡಿವೈಡರ್ ತೆರವುಗೊಳಿಸಲು ಅಧಿಕಾರಿಗಳು ಮತ್ತೆ ಅವೈಜ್ಞಾನಿಕ ಮಾರ್ಗ ಹಿಡಿದರಾ ಎಂಬ ಪ್ರಶ್ನೆ ಎದುರಾಗುತ್ತದೆ.
ಈ ಪ್ರಶ್ನೆಗಳಿಗೆ ಉತ್ತರ ಕೊಡೋರು ಯಾರು?1.ವಿಚಕ್ಷಣ ದಳ ಕೊಟ್ಟಿರುವ ವರದಿಯಲ್ಲಿ ಏನಿದೆ ?
2.ಎಷ್ಟು ಕಡೆ ತೆರವು, ಎಷ್ಟು ಕಡೆ ಓಪನ್ ಎಂದಿದೆ ?3. ಇಂಡಿಯನ್ ರೋಡ್ ಕಾಂಗ್ರೆಸ್ ನಿಯಮಾವಳಿ ಏನು ಹೇಳುತ್ತೆ?
4.ನಿಯಮಾವಳಿ ಪ್ರಕಾರ ತೆರವುಗೊಳಿಸುವ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆಯಾ?.5. ತೆರವುಗೊಳಿಸಲಾದ ಜಾಗದಲ್ಲಿನ ರಸ್ತೆ ದುರಸ್ತಿ ಮಾಡುವವರು ಯಾರು?
6.ಇದಕ್ಕಾಗಿ ಯಾವ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತದೆ ?.7.ತೆರವುಗೊಳಿಸಿದ ಡಿವೈಡರ್‌ನಲ್ಲಿ ಸಿಕ್ಕ ವಿದ್ಯುತ್ ಕಂಬಗಳ ಪರಿಸ್ಥಿತಿ ಏನು?
8.ಸರ್ಕಾರಿ ಅನುದಾನ ಅಪವ್ಯಯ ಮಾಡಿದ ಅಧಿಕಾರಿಗಳ ಮೇಲೆ ಏನು ಕ್ರಮ?